ನಿಖರ ವಹಿವಾಟು; ಎರಡೆರೆಡು ತೆರಿಗೆ ಕಟ್ಟೋದು ತಪ್ಪಿತು..!

7
ಚಿನ್ನಾಭರಣ ವಹಿವಾಟು; ಮಾಲೀಕ–ಗ್ರಾಹಕರಲ್ಲಿ ಖುಷಿ ತಂದಿಟ್ಟ ಜಿಎಸ್‌ಟಿ

ನಿಖರ ವಹಿವಾಟು; ಎರಡೆರೆಡು ತೆರಿಗೆ ಕಟ್ಟೋದು ತಪ್ಪಿತು..!

Published:
Updated:
Deccan Herald

ವಿಜಯಪುರ:  ಏಕರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ ಎರಡೆರೆಡು ತೆರಿಗೆ ಕಟ್ಟೋದು ತಪ್ಪಿತು. ನಿಖರ ವಹಿವಾಟಿಗೆ ಅನುಕೂಲಕಾರಿಯಾಗಿದೆ... ನಗರದ ಚಿನ್ನಾಭರಣ ಅಂಗಡಿಗಳಲ್ಲಿ ಒಂದು ಸುತ್ತು ಹಾಕಿದಾಗ ವ್ಯಾಪಾರಿಗಳಿಂದ ಹೊರಹೊಮ್ಮಿದ ಒಟ್ಟಾರೇ ಅಭಿಪ್ರಾಯವಿದು.

ಜಿಎಸ್‌ಟಿ ಜಾರಿಗೊಂಡು 13ತಿಂಗಳು ಗತಿಸಿತು. ಆರಂಭದ ದಿನಗಳಲ್ಲಿ ಇನ್ನಿಲ್ಲದ ಕಿರಿಕಿರಿ. ಈ ಉಸಾಬರಿ ಯಾರಿಗೆ ಬೇಕು ಎನ್ನುವಷ್ಟು ಅಸಮಾಧಾನ ಇದ್ದಿದ್ದು ನಿಜ. ವಹಿವಾಟಿನ ಮೇಲೆ ಹೊಡೆತವೂ ಬಿದ್ದಿತ್ತು. ಆದರೆ ದಿನ ಕಳೆದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂತು. ಇದೀಗ ವಹಿವಾಟು ಸುಗಮವಾಗಿ ನಡೆದಿದೆ. ಗ್ರಾಹಕರಿಗೂ ಸಂತೃಪ್ತಿ ನೀಡಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದವರೇ ಹೆಚ್ಚು.

‘ಜಿಎಸ್‌ಟಿ ಅನುಷ್ಠಾನಕ್ಕೂ ಮುಂಚೆ ಚಿನ್ನಾಭರಣಗಳ ಮೇಲೆ ಕೇವಲ 1% ತೆರಿಗೆಯಿತ್ತು. ಇದ್ದಕ್ಕಿದ್ದಂತೆ 3%ಗೆ ಹೆಚ್ಚಿಸಿದಾಗ ಆತಂಕ ಕಾಡಿತ್ತು. ಬದಲಾದ ಕಾಲಘಟ್ಟಕ್ಕೆ ನಾವೂ ತೆರೆದುಕೊಂಡೆವು. ಗ್ರಾಹಕರು ಹೊಂದಿಕೊಂಡರು. ಇದರ ಪರಿಣಾಮ ಸಮಸ್ಯೆಯಿಲ್ಲದ ರೀತಿ ವಹಿವಾಟು ನಡೆದಿದೆ.

ಪ್ರತಿ ಖರೀದಿಗೂ ಇದೀಗ ನಿಖರ ಬಿಲ್ಲಿಂಗ್‌ ನಡೆದಿದೆ. ವ್ಯಾಪಾರವೂ ಚಲೋ ಆಗ್ತಿದೆ. ವ್ಯಾಪಾರಿ ವರ್ಗಕ್ಕೆ ಅನುಕೂಲವೂ ಜಾಸ್ತಿ ಸಿಕ್ಕಿದೆ’ ಎಂದು ಚಿನ್ನಾಭರಣ ವ್ಯಾಪಾರಿ ಉದಯ ಸೋನಾರ ಹೇಳಿದರು.

‘ಅಭಿವೃದ್ಧಿಗಾಗಿ, ಪಾರದರ್ಶಕ ವಹಿವಾಟಿಗಾಗಿ ಜಿಎಸ್‌ಟಿ ಒಳ್ಳೆಯದಾಗಿದೆ. ಈ ಹಿಂದೆ ನಡೆಯುತ್ತಿದ್ದ ಚೀಟಿ ಮೇಲಿನ ವ್ಯವಹಾರ ಸಂಪೂರ್ಣ ಬಂದ್‌ ಆಗಿದೆ. ಏನಿದ್ದರೂ ಬಿಲ್ಲಿಂಗ್‌ ಲೆಕ್ಕಾಚಾರ. ಕ್ಯಾಷ್‌ಲೆಸ್‌ ವ್ಯವಹಾರವೂ ಈಚೆಗಿನ ದಿನಗಳಲ್ಲಿ ಹೆಚ್ಚಿದೆ. ಇದರ ಜತೆಗೆ ಗ್ರಾಹಕ ಜಾಗೃತಿಯೂ ಹೆಚ್ಚುಗೊಂಡಿದೆ’ ಎಂದು ಚಿನ್ನಾಭರಣ ವ್ಯಾಪಾರಿ ನವೀನ ತುಳಸಿಗೇರಿ ತಿಳಿಸಿದರು.

ತೆರಿಗೆ ಅರಿವಾಯ್ತು: ‘ಈ ಹಿಂದೆ ಚಿನ್ನಾಭರಣ ಅಂಗಡಿಗಳಲ್ಲಿ ಯಾವ ತೆರಿಗೆ ಹಾಕುತ್ತಿದ್ದರು ಎಂಬುದೇ ತಿಳಿಯುತ್ತಿರಲಿಲ್ಲ. ಎಲ್ಲವೂ ಬಿಳಿ ಹಾಳೆಯ ಸಣ್ಣ ಚೀಟಿಯ ಮೇಲೆ ನಡೆಯುತ್ತಿತ್ತು. ಆದರೆ ಇದೀಗ ಸಂಪೂರ್ಣ ಬದಲಾಗಿದೆ. ಎಷ್ಟು ಪ್ರಮಾಣದಲ್ಲಿ ತೆರಿಗೆ ನಮೂದಿಸುತ್ತಾರೆ ಎಂಬುದು ನಮ್ಮ ಗಮನಕ್ಕೆ ಬರ್ತಿದೆ’ ಎಂದು ಬಹುತೇಕ ಗ್ರಾಹಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಮೊದಲು ಚಿನ್ನ ಖರೀದಿಗೆ ಅಂಗಡಿ ಮಾಲೀಕ ಕೊಟ್ಟ ಚೀಟಿಯೇ ಆಧಾರವಾಗಿತ್ತು. ಈಗ ಎಲ್ಲವೂ ಬದಲಾಗಿದೆ. ಧಾರಣೆಯಲ್ಲಿ ವ್ಯತ್ಯಾಸವಾಗಲ್ಲ. ದರ, ತೆರಿಗೆ ಮೊತ್ತ ಎಲ್ಲದರ ಲೆಕ್ಕ ಸಿಗುತ್ತಿದೆ’ ಎಂದು ಗ್ರಾಹಕಿ ಗೌರಮ್ಮ ರೆಡ್ಡಿ ಹೇಳಿದರು.

‘ಜಿಎಸ್‌ಟಿ ಅನುಷ್ಠಾನಕ್ಕೆ ಮುನ್ನ ಒಂದೊಂದೆಡೆ ಒಂದೊಂದು ಧಾರಣೆಯಿತ್ತು. ಸ್ಥಿರವಿರಲಿಲ್ಲ. ಇದೀಗ ಎಲ್ಲೆಡೆ ಒಂದೇ ಧಾರಣೆ. ಬಿಲ್ಲಿಂಗ್‌ ಇಲ್ಲದೇ ವ್ಯಾಪಾರವಿಲ್ಲ. ಅಂಗಡಿಯವರು ಉದ್ರಿ ಕೊಡೋದು ನಿಂತಿದೆ’ ಎಂದು ಗ್ರಾಹಕಿ ಜಯಶ್ರೀ ಬಾಗಲಕೋಟ ತಿಳಿಸಿದರು.

‘ಮೊದಲು ಬಂಗಾರದ ಬೆಲೆಯೇ ಬೇರೇ. ತೆರಿಗೆಯೇ ಬೇರೆ ಇತ್ತು. ಇದೀಗ ತೆರಿಗೆಯ ಸ್ಪಷ್ಟ ಚಿತ್ರಣ ಗೊತ್ತಾಗುತ್ತಿದೆ. ಜಿಎಸ್‌ಟಿ ಪಾರದರ್ಶಕತೆಯನ್ನು ತಂದಿದೆ’ ಎನ್ನುತ್ತಾರೆ ಗ್ರಾಹಕ ಗುರುಬಸವರಾಜ ಬಿರಾದಾರ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !