ಯುವಕರಲ್ಲಿ ಸಾಧಿಸುವ ಹುಚ್ಚುತನ ಮೈಗೂಡಲಿ: ಡಿಸಿ ಕೆ.ಎ.ದಯಾನಂದ ಸಲಹೆ

ಶಿವಮೊಗ್ಗ: ಮನುಷ್ಯನಲ್ಲಿ ಸಾಧಿಸುವ ಹುಚ್ಚುತನ ಇದ್ದಾಗ ಮಾತ್ರವೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಕಷ್ಟದ ನಡುವೆಯೂ ಅನೇಕರು ಸಾಧನೆ ಮಾಡಿದ್ದಾರೆ. ಅದನ್ನು ಅಭ್ಯರ್ಥಿಗಳು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಸಾಧಿಸುವ ಹಾಗೂ ಜನ ಬಯಸುವ ಮತ್ತು ಜನರನ್ನು ಖುಷಿಪಡಿಸುವ ಹುಚ್ಚುತನ ಅಭ್ಯರ್ಥಿಗಳಲ್ಲಿ ಇರಬೇಕು. ಕನಸು ಇಲ್ಲದಿದ್ದರೆ ಜೀವನದಲ್ಲಿ ಗುರಿ ತಲುಪುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೇನೆಂಬ ದೃಢಸಂಕಲ್ಪ ಮಾಡುವುದರ ಜತೆಗೆ, ಪರೀಕ್ಷೆಯನ್ನು ತಪಸ್ಸೆಂದು ಭಾವಿಸಿ ಓದುವುದರಲ್ಲಿ ತಲ್ಲೀನರಾದರೆ ಯಶಸ್ಸು ಖಂಡಿತ ದೊರಕುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಅನೇಕರು ಐಎಎಸ್-ಐಪಿಎಸ್ನಂತಹ ಉನ್ನತ ಹುದ್ದೆ ಪಡೆದಿದ್ದಾರೆ. ಹಾಗಾಗಿ ಜೀವನದಲ್ಲಿ ಸಾಧನೆ ಮಾಡಬಹುದು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಯಾವುದೂ ಕಷ್ಟವಲ್ಲ ಎಂದರು.
ಸಮಾಜಕ್ಕಾಗಿ ಬದುಕಿದವರು ಹಲವು ಕಾಲ ನೆನಪಿನಲ್ಲಿ ಉಳಿಯುತ್ತಾರೆ. ಪರಿಶ್ರಮ ಬದುಕನ್ನು ರೂಪಿಸುತ್ತದೆ. ಮೊದಲು ನಮ್ಮಲ್ಲಿರುವ ನಕಾರಾತ್ಮಕ ಭಾವನೆಯಿಂದ ಹೊರಬಂದು ಸಕಾರಾತ್ಮಕ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು, ಈ ಸಂದರ್ಭದಲ್ಲಿ ತಾವು ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟ, ಬಡತನದ ನಡುವೆಯೂ ಕೆ.ಎ.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅನೇಕ ಹುದ್ದೆಗಳನ್ನು ನಿರ್ವಹಿಸಿ ಇದೀಗ ಜಿಲ್ಲಾಧಿಕಾರಿಯಾದ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಅಭ್ಯರ್ಥಿಗಳೆದುರು ಹಂಚಿಕೊಂಡರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಪರಿಶ್ರಮದ ಜತೆಗೆ ಕೌಶಲ್ಯ ಮುಖ್ಯ. ಇಲ್ಲವಾದರೆ ಯಶಸ್ಸು ದೊರಕುವುದಿಲ್ಲ. ಹಾಗಾಗಿ ಯಾವ ರೀತಿಯ ಕೌಶಲ್ಯ ಹೊಂದಿದಲ್ಲಿ ಅದು ನಮ್ಮ ಭವಿಷ್ಯಕ್ಕೆ ಪೂರಕವಾಗಲಿದೆ ಎಂಬುದನ್ನು ಅಭ್ಯರ್ಥಿಗಳು ಮೊದಲು ಅರ್ಥೈಸಿಕೊಳ್ಳಬೇಕು’ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಧಿಕಾರಿ ಅಭಿನವ ಖರೆ, ಹಾಸನ ಜಿಲ್ಲಾ ಪಂಚಾಯತಿ ಸಿಇಒ ಜಗದೀಶ್, ಉದ್ಯೋಗ ತರಬೇತಿ ಕೇಂದ್ರದ ಉದ್ಯೋಗಾಧಿಕಾರಿ ಕಲಂದರ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.