ನಿಯಮ ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಗೋ.ರಮೇಶ್‌ಗೌಡ ಆಗ್ರಹಿಸಿದರು.
ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಜಾರಿಗೆ ತಂದಿದೆ. ನಿಯಮಾನುಸಾರ ಪ್ರತಿಯೊಂದು ಖಾಸಗಿ ಆಸ್ಪತ್ರೆಯೂ ತಾವು ನೀಡುವ ಸೇವೆಗಳು, ಅದಕ್ಕೆ ತಗಲುವ ಚಿಕಿತ್ಸಾ ವೆಚ್ಚ ಕುರಿತು ಸಾರ್ವಜನಿಕರಿಗೆ ಕಾಣುವ ರೀತಿ ನಾಮಫಲಕ ಅಳವಡಿಸಬೇಕು. ಇದುವರೆಗೂ ಯಾವ ಆಸ್ಪತ್ರೆಗಳೂ ನಿಯಮ ಪಾಲಿಸುತ್ತಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ನಿಯಮಾನುಸಾರ ಔಷಧಿಗಳ ಆಯ್ಕೆ ರೋಗಿ ಅಥವಾ ರೋಗಿಯ ಸಂಬಂಧಿಕರಿಗೆ ಇರುತ್ತದೆ. ಕೆಲವು ಕಾರ್ಪೊರೇಟ್ ಆಸ್ಪತ್ರೆಗಳು ಕಂಪನಿಗಳ ದುಬಾರಿ ಮೊತ್ತದ ಔಷಧ ನೀಡಿ ವಂಚಿಸುತ್ತಿವೆ. ಔಷಧ ಕಂಪನಿಗಳ ಒತ್ತಡಕ್ಕೆ ಮಣಿದು ಜನರಿಗೆ ಮೋಸ ಮಾಡುತ್ತಿದ್ದಾರೆ. ಎಷ್ಟೋ ಆಸ್ಪತ್ರೆಗಳು ನೋಂದಣಿಯನ್ನೇ ಮಾಡಿಸಿಲ್ಲ ಎಂದು ಆರೋಪಿಸಿದರು.
ಖಾಸಗಿ ಆಸ್ಪತ್ರೆಗಳು ಅನ್ಯಾಯ ಮಾಡಿದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕುಂದು–ಕೊರತೆಗಳ ಸಮಿತಿಗೆ ದೂರು ನೀಡಬಹುದು. ಇಂತಹ ಯಾವ ಫಲಕವೂ ಆಸ್ಪತ್ರೆಗಳಲ್ಲಿ ಕಾಣಸಿಗುವುದಿಲ್ಲ. ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಆಶೀಫ್, ರೇಣುಕಮ್ಮ, ನಾಗರಾಜ್, ಶಿವಣ್ಣ, ನಯನಾ, ರಾಜು ನಾಯಕ್ ಇದ್ದರು.