ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ಬೇಯುವ ‘ರಾಜಕೀಯ ಬೇಳೆ’

ಭರವಸೆಯ ಮೇಲಾಟ, ಸರ್ಕಾರಗಳ ಧೋರಣೆಗೆ ಬೇಸತ್ತ ಹೋರಾಟಗಾರರು
Last Updated 1 ಏಪ್ರಿಲ್ 2018, 18:49 IST
ಅಕ್ಷರ ಗಾತ್ರ

ಜಿಲ್ಲಾ ಕೇಂದ್ರವನ್ನು ಒಳಗೊಂಡ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಒಂದೂವರೆ ದಶಕದಿಂದ ನಡೆದ ಪ್ರತಿ ಚುನಾವಣೆಯಲ್ಲಿ ‘ನೀರಾವರಿ’ ಎಂಬ ಪದವೇ ರಾಜಕಾರಣಿಗಳ ಮೊದಲ ಭರವಸೆಯಾಗಿದೆ. ಜತೆಗೆ ರಾಜಕೀಯ ಪಕ್ಷಗಳ ಪ್ರಣಾಳಿಕೆ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ ವಿನಾ ಈವರೆಗೆ ಈ ಬೇಡಿಕೆ ಈಡೇರಿಲ್ಲ.

ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ ಪ್ರತ್ಯೇಕಗೊಂಡು ನೂತನ ಜಿಲ್ಲೆಯಾಗಿ ದಶಕ ಕಳೆಯಿತು. ಆದರೆ ಈ ಭಾಗದಲ್ಲಿ ಎರಡು ದಶಕಗಳ ಹಿಂದೆಯೇ ಕಾಣಿಸಿಕೊಂಡ ಶಾಶ್ವತ ನೀರಾವರಿ ಹೋರಾಟ ಇನ್ನೂ ಅಂತ್ಯಗೊಂಡಿಲ್ಲ. ಈ ಹೋರಾಟ ಜಿಲ್ಲೆಯನ್ನು ವ್ಯಾಪಿಸಿಕೊಂಡಿದ್ದರೂ ಈ ಕ್ಷೇತ್ರದಲ್ಲೇ ಅದರ ಬೇರುಗಳು ಗಟ್ಟಿಯಾಗಿ ಬೇರೂರಿವೆ.

ಜಿಲ್ಲೆ ರಚನೆಯಾಗಿ 10 ವರ್ಷಗಳು ಕಳೆದರೂ ಇಂದಿಗೂ ಜಿಲ್ಲಾ ಕೇಂದ್ರದಲ್ಲೇ ಸುಸಜ್ಜಿತವಾದ ರಸ್ತೆಗಳು, ಪಾದಚಾರಿ ಮಾರ್ಗಗಳಿಲ್ಲ. ಎಷ್ಟೋ ವಾರ್ಡ್‌ಗಳಲ್ಲಿ ನಿತ್ಯ ಕುಡಿಯುವ ನೀರನ್ನು ಕೊಡಗಟ್ಟಲೇ ಕೊಂಡು ಕುಡಿಯಬೇಕಾದ ಪರಿಸ್ಥಿತಿ ಇದೆ. ನಗರದ ಪ್ರಮುಖ ರಸ್ತೆಗಳೇ ಕಿಷ್ಕಿಂಧೆಯಂತಿದ್ದು ಬೆಳಿಗ್ಗೆ, ಸಂಜೆ ಸವಾರರನ್ನು ಹೈರಾಣ ಮಾಡುತ್ತವೆ.

ಶಾಸಕ ಡಾ. ಕೆ.ಸುಧಾಕರ್ ಅವರು ‘ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ತಂದಿರುವೆ. ಚಿಕ್ಕಬಳ್ಳಾಪುರವನ್ನು ಬೆಂಗಳೂರಿನ ಉಪ ನಗರವನ್ನಾಗಿ ಮಾಡುತ್ತೇನೆ’ ಎಂದು ಎರಡು–ಮೂರು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ವಾಸ್ತವದಲ್ಲಿ ಅದರ ಸಣ್ಣ ಲಕ್ಷಣವೂ ಇಲ್ಲಿ ಗೋಚರಿಸುತ್ತಿಲ್ಲ.

ಇಂದಿಗೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ‌ ಮುಖಂಡರಾಗಿರುವ ಸಂಸದ ವೀರಪ್ಪ ಮೊಯಿಲಿ ಅವರು ಚಿಕ್ಕಬಳ್ಳಾಪುರ ಲೋಕ­ಸಭೆ ಕ್ಷೇತ್ರದಿಂದ 2009 ಮತ್ತು 2014ರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದವರು. ಹೀಗಾಗಿ ಅವರಿಗೆ ಈ ಕ್ಷೇತ್ರವೆಂದರೆ ಬಲು ಅಚ್ಚುಮೆಚ್ಚು ಮತ್ತು ‘ಪ್ರತಿಷ್ಠೆ’ಯ ಕಣ ಕೂಡ ಹೌದು.

ಕ್ಷೇತ್ರದಲ್ಲಿ ಹಿಂದೆ ಇದ್ದ ಮೌಲ್ಯಾಧಾರಿತ ರಾಜಕಾರಣ ಇಂದು ಹಿಂದೆ ಸರಿಯುತ್ತಿದೆ. ಸಮಾಜಸೇವೆಯ ಹೆಸರಿನಲ್ಲಿ ಲೋಡುಗಟ್ಟಲೆ ಸೀರೆ, ಕುಕ್ಕರ್, ಮಿಕ್ಸಿ ಉಡುಗೊರೆ ನೀಡಿ, ನಟನಟಿಯರನ್ನು ಕರೆಸಿ ಮನರಂಜಿಸಿ ಮತದಾರರನ್ನು ‘ಮರುಳು’ ಮಾಡುವ ಹೊಸ ಬಗೆಯ ರಾಜಕಾರಣ ತೆರೆದುಕೊಳ್ಳುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.

ಜಿಲ್ಲಾ ಕೇಂದ್ರವೊಂದಕ್ಕೆ ಬೇಕಾದ ಜಿಲ್ಲಾಡಳಿತ ಭವನ, ಮಿನಿ ವಿಧಾನಸೌಧ, ಜಿಲ್ಲಾ ಆಸ್ಪತ್ರೆ, ಬಸ್‌ ನಿಲ್ದಾಣ, ಪ್ರವಾಸಿ ಮಂದಿರ, ಗ್ರಂಥಾಲಯ... ಹೀಗೆ ಅಗತ್ಯ ಮೂಲಸೌಕರ್ಯಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಒಂದೊಂದಾಗಿ ತಲೆ ಎತ್ತುತ್ತಾ ಬಂದಿವೆ. ಆದರೆ ಆಡಳಿತ ಮತ್ತು ವಿರೋಧ ಪಕ್ಷಗಳು ಇವು ನಮ್ಮ ಸಾಧನೆ ಎಂದು ಪ್ರಚಾರಕ್ಕಿಳಿದಿವೆ.

‘ಅಭಿವೃದ್ಧಿಯ ಮಾನದಂಡವನ್ನೇ ಅರ್ಥೈಸಿಕೊಳ್ಳದ ಜನಪ್ರತಿನಿಧಿಗಳು, ಜನರನ್ನು ಮರುಳು ಮಾಡಲು ತಾವು ನಡೆಸುವ ಮನರಂಜನಾ ಕಾರ್ಯಕ್ರಮಗಳನ್ನೇ ಅಭಿವೃದ್ಧಿ ಎಂದು ಭಾವಿಸಿಕೊಂಡಂತಿದೆ. ಬಣ್ಣ ಬಳಿದ ಕಟ್ಟಡ, ಟಾರು ಸುರಿದ ರಸ್ತೆ ತೋರಿಸಿ ಅಭಿವೃದ್ಧಿ ಎಂದರೆ ಒಪ್ಪಲಾಗದು. ಪ್ರತಿಯೊಬ್ಬನ ವೈಯಕ್ತಿಕ ಆದಾಯದ ಮೂಲ ವೃದ್ಧಿಸಬೇಕು. ಜನಸಾಮಾನ್ಯನ ಬದುಕಿಗೆ ಮೆರುಗು ತುಂಬಬೇಕು. ರೈತರಿಗೆ ನೀರಿನ ಖಾತರಿ ಒದಗಿಸಬೇಕು. ಅಂತಹ ರಚನಾತ್ಮಕ ಕೆಲಸಗಳು ಇಲ್ಲಿ ಆಗಿಲ್ಲ’ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಆರ್.ಆಂಜನೇಯ ರೆಡ್ಡಿ.

2ನೇ ಬಾರಿ ಶಾಸಕರಾದ ಇತಿಹಾಸ ಇಲ್ಲಿಲ್ಲ!

ರಾಜಕೀಯವಾಗಿ ಸಿ.ವಿ.ವೆಂಕಟರಾಯಪ್ಪ, ಕೆ.ಬಿ.ಪಿಳ್ಳಪ್ಪ ಅವರ ಕಾಲದಿಂದಲೂ ಒಕ್ಕಲಿಗ ಮತ್ತು ಬಲಿಜಿಗರ ಜಿದ್ದಾಜಿದ್ದಿನ ಕ್ಷೇತ್ರ. ಒಂದು ಬಾರಿ ಶಾಸಕರಾದವರು ಎರಡನೇ ಅವಧಿಗೆ ಶಾಸಕರಾದದ್ದು ಈ ಕ್ಷೇತ್ರದ ಇತಿಹಾಸದಲ್ಲೇ ಇಲ್ಲ.

ಇದೀಗ ಶಾಸಕ ಸುಧಾಕರ್ ಎರಡನೇ ಅವಧಿಗೆ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಟಿಕೆಟ್‌ಗೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಸಿ.ವಿ.ವೆಂಕಟರಾಯಪ್ಪ ಅವರ ಮೊಮ್ಮಗ, ಬಲಿಜ ಸಮುದಾಯದ ಮುಖಂಡ ನವೀನ್ ಕಿರಣ್ ‘ನಾನು ಚುನಾವಣೆಗೆ ಸ್ಪರ್ಧಿಸುವುದಂತೂ ಖಚಿತ’ ಎಂದು ಘೋಷಿಸಿ ಈಗಾಗಲೇ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಬಚ್ಚೇಗೌಡ ಅವರು ಸಹ ಹಳ್ಳಿಗಳಲ್ಲಿ ತುರುಸಿನ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿಯಂತೂ ಹಿಂದೆಂದಿಗಿಂತಲೂ ಭಾರಿ ಪೈಪೋಟಿ ನಡೆಯಲಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ನನ್ನಷ್ಟು ಅಭಿವೃದ್ಧಿ ಯಾರೂ ಮಾಡಿಲ್ಲ’

ಕ್ಷೇತ್ರದ ಇತಿಹಾಸದಲ್ಲೇ ಕಳೆದ ಐದು ವರ್ಷಗಳಲ್ಲಿ ಆಗಿರುವಷ್ಟು ಅಭಿವೃದ್ಧಿ ಎಂದೂ ಆಗಿಲ್ಲ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ನಗರಕ್ಕೆ ಐದು ವರ್ಷಗಳಲ್ಲಿ ₹ 200 ಕೋಟಿ ತಂದಿರುವೆ. ಅದರಲ್ಲಿ ₹ 40 ಕೋಟಿ ವೆಚ್ಚದಲ್ಲಿ ರಸ್ತೆ ಮಾಡಿದ್ದೇವೆ. ₹ 150 ಕೋಟಿ ವೆಚ್ಚದ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಆ ಕಾಮಗಾರಿಗಳು ನಡೆದರೆ ನಗರದ ಚಿತ್ರಣವೇ ಬದಲಾಗಲಿದೆ.

ಹಿಂದೆ ಯಾವ ಹಳ್ಳಿಗಳೂ ಗುಣಮಟ್ಟದ ರಸ್ತೆಗಳನ್ನು ಹೊಂದಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣಗಳು, ಮಹಿಳಾ ಕಾಲೇಜು ಕಾಮಗಾರಿ ನಡೆಯುತ್ತಿದೆ. ಮುದ್ದೇನಹಳ್ಳಿಯಲ್ಲಿ ವಿಟಿಯು ಉನ್ನತ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಯಾಗಿದೆ. ಹೀಗೆ ಕಣ್ಣಿಗೆ ಕಾಣುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಡಾ. ಕೆ.ಸುಧಾಕರ್, ಶಾಸಕ

***

ಇನ್ನೂ ಸಿಕ್ಕಿಲ್ಲ ಶಾಶ್ವತ ಪರಿಹಾರ

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿಯ ಶಿಫಾರಸುಗಳ ಆಧಾರದಲ್ಲಿ ನಮಗೆ ಶಾಶ್ವತ ನೀರು ಒದಗಿಸುವ ಕೆಲಸವಾಗಬೇಕು ಎನ್ನುವ ಕೂಗು ಈವರೆಗೆ ಇಲ್ಲಿ ಅರಣ್ಯರೋದನವಾಗಿದೆ. ಕಳೆದ ಎರಡು ದಶಕಗಳಲ್ಲಿ ಶಾಶ್ವತ ನೀರಾವರಿಗಾಗಿ ನಡೆದಿರುವ ಚಳವಳಿ, ಹೋರಾಟ, ರ‍್ಯಾಲಿ, ಪಾದಯಾತ್ರೆ, ಚಿತ್ರಕಲಾ ಪ್ರದರ್ಶನ, ರಸ್ತೆತಡೆ, ಮುತ್ತಿಗೆ, ಪ್ರತಿಭಟನೆಗಳ ಲೆಕ್ಕ ಇಟ್ಟವರಿಲ್ಲ.

2016ರ ಮಾರ್ಚ್‌ನಲ್ಲಿ ಹೋರಾಟಗಾರರು ವಿಧಾನಸೌಧ ಮುತ್ತಿಗೆಗೆ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆ ಎರಡು ವರ್ಷಗಳು ಕಳೆದರೂ ಈಡೇರಿಲ್ಲ. 2013ರಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆ ಕಾಮಗಾರಿ ಐದು ವರ್ಷ ಕಳೆದರೂ ಸಕಲೇಶಪುರ ದಾಟಿ ಬಂದಿಲ್ಲ ಎನ್ನುವುದು ಹೋರಾಟಗಾರರಲ್ಲಿ ಆಕ್ರೋಶ ಮೂಡಿಸಿದೆ.

ಇದರ ನಡುವೆಯೇ ಇತ್ತೀಚೆಗೆ ರಾಜ್ಯ ಸರ್ಕಾರ ಹೆಬ್ಬಾಳ–ನಾಗವಾರ ಕೆರೆಗಳಲ್ಲಿ ಸಂಗ್ರಹವಾಗುವ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ತುಂಬುವ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ ನೀರಾವರಿ ಹೋರಾಟಗಾರರು, ಬಹುಪಾಲು ನಾಗರಿಕರು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ನೀಡಿದ ವರದಿಯನ್ನು ಮುಂದಿಟ್ಟುಕೊಂಡು ಇದೊಂದು ಮಾರಕ ಯೋಜನೆ ಎಂದು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮಗಳ ವೇಳೆ ಹೋರಾಟಗಾರರನ್ನು ಬಂಧಿಸಿ ಬೇರೆಡೆ ಬಚ್ಚಿಡುವ ಹೊಸ ಪ್ರವೃತ್ತಿಯೊಂದು ಜನರನ್ನು ರೊಚ್ಚಿಗೆಬ್ಬಿಸಿದೆ. ಹೀಗಾಗಿ ಹೋರಾಟಗಾರರು ಇದೀಗ, ಜನಪ್ರತಿನಿಧಿಗಳ ದ್ವಿಮುಖ ನೀತಿ ಮತ್ತು ಸರ್ಕಾರದಿಂದಾದ ಅನ್ಯಾಯದ ಬಗ್ಗೆ ಜನಾಂದೋಲನ ರೂಪಿಸಲು ಹೊರಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT