ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಕಾಳಜಿಯತ್ತ ಚಿತ್ತ

Last Updated 28 ಫೆಬ್ರುವರಿ 2018, 20:28 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲದಲ್ಲಿ ಕಾಣಿಸಿಕೊಂಡ ಸಾಲುಸಾಲು ಪ್ರವಾಹಗಳು ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ನಗರದಲ್ಲಿ ಮಳೆ ನೀರಿನ ನಿರ್ವಹಣೆಯ ಬಗ್ಗೆ ಲಕ್ಷ್ಯ ವಹಿಸಿದೆ. ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸುವ ಪ್ರಸ್ತಾವ 2018–19ನೇ ಸಾಲಿನ ಬಜೆಟ್‌ನಲ್ಲಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಹಾದೇವ ಬುಧವಾರ ಮಂಡಿಸಿದ ಮುಂಗಡಪತ್ರದಲ್ಲಿ ‘ಜಲ ಕಾಳಜಿ’, ‘ಹಸಿರು ಕಾಳಜಿ’ಯ ಅಂಶಗಳಿವೆ. ನಗರದ ಪ್ರಮುಖ ಸಮಸ್ಯೆಗಳಲೊಂದಾದ ಘನ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆದ್ಯತೆ ನೀಡಿದಂತಿಲ್ಲ. 

ಮಿತಿ ಮೀರಿದ ಕಾಂಕ್ರಿಟೀಕರಣ ಹಾಗೂ ಮಳೆ ನೀರು ಹರಿಯುವ ವ್ಯವಸ್ಥೆಯಲ್ಲಿನ ಲೋಪ ನಗರದಲ್ಲಿ ಪ್ರವಾಹ ಸಮಸ್ಯೆಗೆ ಕಾರಣ ಎಂದು ನಗರ ಯೋಜನಾ ತಜ್ಞರು ಬೊಟ್ಟು ಮಾಡಿದ್ದರು. ಮಳೆ ನೀರಿನ ಸಹಜ ಇಂಗುವಿಕೆಗೆ ಅವಕಾಶ ಇಲ್ಲದಿರುವುದರಿಂದ ಪ್ರವಾಹ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿದೆ ಎಂದೂ ಎಚ್ಚರಿಸಿದ್ದರು. ನಗರದಲ್ಲಿ ವರ್ಷದಲ್ಲಿ ಸರಾಸರಿ 900 ಮಿ.ಮೀ. ಮಳೆ ಬೀಳುತ್ತದೆ. ಇದರಿಂದ 22 ಟಿಎಂಸಿ ಅಡಿ ನೀರು ಲಭ್ಯವಾದರೂ ಬಳಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು.

ಬಜೆಟ್‌ನಲ್ಲಿ ಈ ಅಂಶಗಳತ್ತ ಗಮನವಹಿಸುವ ಪ್ರಯತ್ನ ಮಾಡಲಾಗಿದೆ. ಚರಂಡಿ ಅಭಿವೃದ್ಧಿಪಡಿಸುವಾಗ ಯೋಜನೆಯ ಶೇ 10ರಷ್ಟು ಮೊತ್ತವನ್ನು ಇಂಗುಗುಂಡಿ ನಿರ್ಮಾಣಕ್ಕೆ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತರ್ಜಲ ವೃದ್ಧಿ ಸಲುವಾಗಿ ಸಾರ್ವಜನಿಕರು ಮನೆ ಮುಂದಿನ ಚರಂಡಿಯಲ್ಲಿ ಇಂಗು ಗುಂಡಿ ನಿರ್ಮಿಸಿ ಮನೆಯ ಮಳೆ ನೀರು ಭೂಮಿಗೆ ಇಂಗಿಸುವುದಕ್ಕೂ ಅವಕಾಶ ಕಲ್ಪಿಸುವುದಾಗಿ ಸ್ಥಾಯಿ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವ ಒಟ್ಟು ಅನುದಾನಗಳಲ್ಲಿ ಕನಿಷ್ಠ ₹ 30 ಲಕ್ಷವನ್ನು ಮಳೆ ನೀರು ಸಂಗ್ರಹದ ಉದ್ದೇಶಕ್ಕೆ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಪಾಲಿಕೆ ಕಟ್ಟಡಗಳು, ಶಾಲಾ ಕಾಲೇಜುಗಳ ಆವರಣ ಹಾಗೂ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹಿಸಲು ₹ 5 ಕೋಟಿ, ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹಿಸಲು ಹಾಗೂ ಇಂಗುಗುಂಡಿ ನಿರ್ಮಾಣಕ್ಕೆ ₹ 5 ಕೋಟಿ ಮೀಸಲಿಡಲಾಗಿದೆ. 150 ಕಿ.ಮೀ ಉದ್ದ ಮಳೆ ನೀರು ಕಾಲುವೆ ಅಭಿವೃದ್ಧಿಪಡಿಸುವ ಪ್ರಸ್ತಾಪವೂ ಇದೆ.

ಆದರೆ, ಕೆರೆಗಳ ಸಂರಕ್ಷಣೆ ಕುರಿತ ಅನಾದರ ಮುಂದುವರಿದಿದೆ. ಬಿಬಿಎಂಪಿ ವ್ಯಾಪ್ತಿಯ ಜಲಮೂಲಗಳ ಅಭಿವೃದ್ಧಿಗೆ ₹ 250 ಕೋಟಿ ಅಗತ್ಯವಿದೆ. 2017–18 ಬಜೆಟ್‌ನಲ್ಲಿ ಸರ್ಕಾರ ₹ 50 ಕೋಟಿ ಮಂಜೂರು ಮಾಡಿತ್ತು. ಈ ಬಾರಿ ಮತ್ತೆ ₹ 200 ಕೋಟಿ ಒದಗಿಸುವಂತೆ ಪಾಲಿಕೆಯಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿತ್ತು. ಆದರೆ, ಸರ್ಕಾರ ಬಜೆಟ್‌ನಲ್ಲಿ ₹ 20 ಕೋಟಿ ಮಾತ್ರ ಹಂಚಿಕೆ ಮಾಡಿತ್ತು. ಇದನ್ನು ಹೊರತುಪಡಿಸಿ ಪಾಲಿಕೆ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಒದಗಿಸಿಲ್ಲ. ಕೆರೆಗಳ ನಿರ್ವಹಣೆಗಾಗಿ ₹ 10 ಕೋಟಿ ಮೀಸಲಿಡಲಾಗಿದೆ. ಈ  ಅನುದಾನ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ.

ಹಲಸೂರು ಹಾಗೂ ಸ್ಯಾಂಕಿ ಕೆರೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿಗೊಳ್ಳಲಿವೆ.

ನಗರದಲ್ಲಿ ಮಾಲಿನ್ಯದ ಮಟ್ಟ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಬಗ್ಗೆ ಹಾಗೂ ಇದರಿಂದ ಆಗುವ ಹಾನಿಯನ್ನು ತಗ್ಗಿಸಲು ವ್ಯಾಪಕ ಹಸಿರೀಕರಣ ಮಾಡಬೇಕಾದ ಅನಿವಾರ್ಯದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಸಿರು ಸಂರಕ್ಷಣೆಗೆ ₹ 46 ಕೋಟಿ ನಿಗದಿ‍ಪಡಿಸಲಾಗಿದೆ. ಆದರೆ, ಈ ಸಲುವಾಗಿ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಿಲ್ಲ. 2017–18ರ ಬಜೆಟ್‌ನಲ್ಲಿ 10 ಲಕ್ಷ ಸಸಿಗಳನ್ನು ಬೆಳೆಸುವ ಪ್ರಸ್ತಾವ ಇತ್ತು. ಆದರೆ, 3.7 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. 1.02 ಲಕ್ಷ ಸಸಿಗಳನ್ನು ಪಾಲಿಕೆ ವತಿಯಿಂದ ನೆಡಲಾಗಿದೆ.

ಧನ್ವಂತರಿ ಮರಗಳ ಉದ್ಯಾನ ಅಭಿವೃದ್ಧಿಗೆ ಹಾಗೂ ಕೆರೆಗಳ ಪಕ್ಕ ಔಷಧೀಯ ಗಿಡಗಳನ್ನು ಬೆಳೆಸಲು ₹ 50 ಲಕ್ಷ ಒದಗಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ 200 ಸಸಿಗಳನ್ನು ನೆಟ್ಟು, ರಕ್ಷಾಕವಚ ಅಳವಡಿಸಲು ₹ 1 ಕೋಟಿ ಕಾದಿರಿಸಲಾಗಿದೆ. ಪಾಲಿಕೆಯ ಸಸ್ಯ ಕ್ಷೇತ್ರಗಳಲ್ಲಿ 2 ಲಕ್ಷ ಸಸಿಗಳನ್ನು ಪೋಷಿಸುವ ಉದ್ದೇಶ ಹೊಂದಲಾಗಿದೆ. ಒಂದು ಸಸ್ಯಕ್ಷೇತ್ರವನ್ನು ಹೊಸತಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ.

ಪ್ರಾಣಿ–ಪಕ್ಷಿಗಳ ಹಸಿವು ನೀಗಿಸಲು ಉದ್ಯಾನ, ಭೂಭರ್ತಿ ಪ್ರದೇಶ (ಲ್ಯಾಂಡ್‌ಫಿಲ್‌) ಹಾಗೂ ಕೆರೆ ಬದಿಗಳಲ್ಲಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಲು ₹ 50 ಲಕ್ಷ ಕಾಯ್ದಿರಿಸಲಾಗಿದೆ. ಹಕ್ಕಿಗಳಿಗೆ ಗೂಡು ನಿರ್ಮಿಸಲು ಹಾಗೂ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವವೂ ಬಜೆಟ್‌ನಲ್ಲಿದೆ.

ಘನತ್ಯಾಜ್ಯ ನಿರ್ವಹಣೆ:

ಎಲ್ಲ ವಾರ್ಡ್‌ಗಳಲ್ಲೂ ವಿಕೇಂದ್ರೀಕೃತ ಸಾವಯವ ಗೊಬ್ಬರ ತಯಾರಿ (ಕಾಂಪೋಸ್ಟಿಂಗ್‌) ಘಟಕ ಸ್ಥಾಪಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಅದಕ್ಕೆ ಮೀಸಲಿಟ್ಟಿರುವ ಅನುದಾನದ ಕುರಿತು ವಿವರಗಳಿಲ್ಲ. ಕನ್ನಹಳ್ಳಿ ಮತ್ತು ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಹಳೆ ಯೋಜನೆಗೆ ₹ 100 ಕೋಟಿ ಹಂಚಿಕೆ ಮಾಡಲಾಗಿದೆ.

ಆದಾಯ ಖೋತಾ

2017–18ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ವಿವಿಧ ಮೂಲಗಳಿಂದ ಒಟ್ಟು ₹ 9243.41 ಕೋಟಿ ವರಮಾನ ನಿರೀಕ್ಷಿಸಲಾಗಿತ್ತು. ₹7,513 ವರಮಾನ ಮಾತ್ರ ಬಂದಿದ್ದರಿಂದ ಬಜೆಟ್‌ ಗಾತ್ರವನ್ನೂ ಪರಿಷ್ಕರಿಸಲಾಗಿತ್ತು.

ಮತ್ತೆ ಪ್ಲಾಸ್ಟಿಕ್‌ ನಿಷೇಧ!

ರಾಜ್ಯದಲ್ಲಿ ಈಗಾಗಲೇ 40 ಮೈಕ್ರಾನ್‌ಗಿಂತ ತೆಳುವಿನ ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಷೇಧ ಜಾರಿಯಲ್ಲಿದೆ. ಈ ನಿಯಮವನ್ನೇ ಪಾಲಿಕೆ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಆದರೆ, ಹಣ್ಣು, ತರಕಾರಿ, ಆಹಾರ ಪದಾರ್ಥಗಳ ಮಾರಾಟಗಾರರು ಪ್ಲಾಸ್ಟಿಕ್‌ ಚೀಲ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು ಎಂದು ಬಜೆಟ್‌ನಲ್ಲಿ ಮತ್ತೆ ಪ್ರಕಟಿಸಲಾಗಿದೆ. ಮರುಬಳಕೆ ಮಾಡಬಹುದಾದ ಹತ್ತಿ ಮತ್ತು ಗೋಣಿ ಚೀಲಗಳ ಬಳಕೆಗೆ ಉತ್ತೇಜನ ನೀಡುವುದಾಗಿಯೂ ತಿಳಿಸಲಾಗಿದೆ.

ಬಸ್‌ ನಿಲ್ದಾಣ, ಉದ್ಯಾನದಲ್ಲಿ ಕನ್ನಡ

ನಗರದಲ್ಲಿ ಕನ್ನಡಕ್ಕೆ ಉತ್ತೇಜನ ನೀಡುವ ಕೆಲವು ಅಂಶಗಳು ಬಜೆಟ್‌ನಲ್ಲಿವೆ. ‘ಕನ್ನಡ ಬಸ್‌ ನಿಲ್ದಾಣ’ಗಳನ್ನು ಪಾಲಿಕೆ ಅಭಿವೃದ್ಧಿಪಡಿಸಲಿದೆ. ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ನಿಲ್ದಾಣಗಳಲ್ಲಿ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕವಿಗಳು, ಮೇರುನಟರು, ದಾರ್ಶನಿಕರು ಹಾಗೂ ಗಣ್ಯರ ಛಾಯಾಚಿತ್ರಗಳನ್ನು ಪ್ರಕಟಿಸಲಾಗುತ್ತದೆ. ಇಲ್ಲಿ ವೈ–ಫೈ, ಶುದ್ಧ ಕುಡಿಯುವ ನೀರು, ವಿದ್ಯುತ್‌ ಬೆಳಕು, ಶೌಚಾಲಯ ಸೌಲಭ್ಯಗಳಿರಲಿವೆ. ಈ ಯೋಜನೆಗೆ ₹ 5ಕೋಟಿ ಮೀಸಲಿಡಲಾಗಿದೆ.

ಪಾಲಿಕೆ ವತಿಯಿಂದ ನಿರ್ವಹಿಸುವ ಉದ್ಯಾನಗಳಲ್ಲಿ ಕನ್ನಡ ಸಾಹಿತಿಗಳ ಪರಿಚಯ ಫಲಕಗಳನ್ನು ಅಳವಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT