ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಶಂಕಿತರ ಕರೆದೊಯ್ಯಲು ಪ್ರತ್ಯೇಕ ಆಂಬ್ಯುಲೆನ್ಸ್ ನೀಡಿ’

Last Updated 2 ಏಪ್ರಿಲ್ 2020, 13:17 IST
ಅಕ್ಷರ ಗಾತ್ರ

ಸಾಗರ: ‘ಕೊರೊನಾ ಶಂಕಿತ ರೋಗಿಗಳನ್ನು ತಪಾಸಣೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಸೂಚನೆ ನೀಡಿದರು.

ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ಆಂಬ್ಯುಲೆನ್ಸ್ ಇದೆ. ಅದರಲ್ಲಿಯೇ ಶಂಕಿತರನ್ನು ಶಿವಮೊಗ್ಗಕ್ಕೆ ಕಳುಹಿಸುವ ವ್ಯವಸ್ಥೆಯಾಗಬೇಕು. ಇತರ ತುರ್ತು ಪ್ರಕರಣಗಳು ಬಂದಲ್ಲಿ ಅಂತಹ ರೋಗಿಗಳಿಗೆ 108 ವಾಹನದ ಮೂಲಕ ಬೇರೆ ಆಸ್ಪತ್ರೆಗೆ ಕಳುಹಿಸುವ ಸೌಲಭ್ಯ ಕಲ್ಪಿಸಿ’ ಎಂದು ಹೇಳಿದರು.

‘ದೆಹಲಿಯಲ್ಲಿ ಈಚೆಗೆ ನಡೆದ ತಬ್ಲಿಕ್ ಸಂಸ್ಥೆಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯಾವುದೇ ವ್ಯಕ್ತಿ ಇಲ್ಲಿಗೆ ಬಂದಿದ್ದರೆ ಆ ಬಗ್ಗೆ ಸ್ವಯಂಪ್ರೇರಿತವಾಗಿ ಮಾಹಿತಿ ನೀಡಬೇಕು. ತಾಲ್ಲೂಕು ಆಡಳಿತದಿಂದ ಅವರ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುವುದು’ ಎಂದರು.

‘ಸಾರ್ವಜನಿಕರಿಗೆ ಕಳಪೆ ಮಾಸ್ಕ್ ವಿತರಿಸಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಈವರೆಗೆ ಯಾವುದೇ ಮಾಸ್ಕ್ ವಿತರಿಸಿಲ್ಲ. ಇಷ್ಟಕ್ಕೂ ಶಂಕಿತ ರೋಗಿಗಳ ಸಮೀಪವರ್ತಿಗಳು ಮಾತ್ರ ವೈದ್ಯರು ದೃಢೀಕರಿಸಿದ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ. ಸಾರ್ವಜನಿಕರಲ್ಲಿ ಇರುವ ಭಯದ ವಾತಾವರಣವನ್ನು ಹೋಗಲಾಡಿಸಲು ಎಲ್ಲೆಡೆ ಮಾಸ್ಕ್ ಧರಿಸಿದರೆ ತಪ್ಪೇನೂ ಇಲ್ಲ’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್. ‘ದೆಹಲಿ ಸೇರಿದಂತೆ ಯಾವುದೇ ಹೊರರಾಜ್ಯ, ದೇಶಗಳಿಂದ ಇಲ್ಲಿಗೆ ಜನರು ಬಂದಿದ್ದರೆ ಆ ಬಗ್ಗೆ ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಹೊರಗಡೆಯಿಂದ ಬಂದವರು ಅವರಾಗಿಯೇ ಮಾಹಿತಿ ನೀಡಿ ತಪಾಸಣೆಗೆ ಒಳಗಾದರೆ ಅವರ ಹೆಸರನ್ನೂ ಗೌಪ್ಯವಾಗಿಡಲಾಗುವುದು’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್.ಮೋಹನ್, ಡಾ.ಪ್ರಕಾಶ್ ಬೋಸ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರ ಠಾಣೆ ಸರ್ಕಲ್ ಇನ್ನ್‌ಸ್ಪೆಕ್ಟರ್ ಮಹಾಬಲೇಶ್ವರ್ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT