ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ತಿರುಗೇಟು ನೀಡಲು ಮತ್ತೆ ಮೋದಿ: ಅಮಿತ್‌ ಶಾ

Last Updated 20 ಏಪ್ರಿಲ್ 2019, 18:51 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದ ಸುರಕ್ಷತೆ ದೃಷ್ಟಿಯಿಂದ ಹಾಗೂ ಪಾಕಿಸ್ತಾನಕ್ಕೆ ಸೂಕ್ತ ತಿರುಗೇಟು ನೀಡಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಪಾದಿಸಿದರು.

ಭದ್ರಾವತಿಯಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಅವರು ಮಾತನಾಡಿದರು.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಿರಿ ಎನ್ನುವ ನಂಬಿಕೆ ಇದೆ. ಬಿಜೆಪಿ ಅಭ್ಯರ್ಥಿಯನ್ನು ಏಕೆ ಗೆಲ್ಲಿಸಬೇಕು ಎಂದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು.ಈ ದೇಶ ಸಂರಕ್ಷಿಸಲು ಎಂದು ವಿವರಿಸಿದರು.

ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಬಂದ ಅಮಿತ್‌ ಶಾ ಸಿದ್ಧವಾಗಿ ನಿಂತಿದ್ದ ತೆರೆದ ವಾಹನ ಏರಿದರು. ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಎಸ್.ಈಶ್ವರಪ್ಪ, ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ಸಾಥ್ ನೀಡಿದರು. ರಂಗಪ್ಪ ವೃತ್ತದಿಂದ ಹಾಲಪ್ಪ ವೃತ್ತದವರೆಗೆ ವಾಹನ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಸುಡುಬಿಸಿಲಿನಲ್ಲೇ ನಿಂತು ಜನರು ಹೂ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಾರ್ಮಿಕರಿಗೆ ನಿರಾಸೆ

ಸ್ಥಗಿತಗೊಂಡಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನ:ಶ್ಚೇತನ ಕುರಿತು ಅಮಿತ್ ಶಾ ಭರವಸೆ ನೀಡುವರು ಎಂದು ನೂರಾರು ಕಾರ್ಮಿಕರು ನಿರೀಕ್ಷಿಸಿದ್ದರು. ಅವರ ಭಾಷಣ ಕೇಳಲು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ವಿಷಯ ಪ್ರಸ್ತಾಪಿಸಲೇ ಇಲ್ಲ. ಕಾರ್ಮಿಕರನ್ನು ಭೇಟಿ ಮಾಡದೆ ಶಾ ತರಾತುರಿಯಲ್ಲಿ ನಿರ್ಗಮಿಸಿದರು.

ರಾಹುಲ್‌ ಹಸುಳೆ: ಎಸ್.ಎಂ.ಕೃಷ್ಣ ಟೀಕೆ

ತೀರ್ಥಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಕಾಂಗ್ರೆಸ್‌ಗೆ ಪ್ರಬುದ್ಧತೆಯೇ ಇಲ್ಲದಾಗಿದೆ. ಅಪ್ರಬುದ್ಧತೆ ಎಲ್ಲಾ ಹಂತಗಳಲ್ಲೂ ಎದ್ದು ಕಾಣುತ್ತಿದೆ.

ರಾಹುಲ್ ಗಾಂಧಿಗೆ ಏನು ಅನುಭವ ಇದೆ. ಅವರೊಬ್ಬರು ಸಾಮಾನ್ಯ ಜ್ಞಾನದ ಕೊರತೆ ಇರುವ ಹಸುಳೆ. ಚಿಕ್ಕ ಮಕ್ಕಳು ನರ್ಸರಿಯಲ್ಲಿ ರಿಂಗಾ ರಿಂಗಾ ರೋಸಸ್‌ ಪದ್ಯ ಹೇಳುವಂತೆ ಪ್ರಧಾನಿ ಮೋದಿ ಕುರಿತು ಚೌಕೀದಾರ್ ಚೋರ್ ಹೇ ಎಂದು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಹಿಟ್ಲರನ ಕಾಲದಲ್ಲಿ ನಡೆದ 2ನೇ ಮಹಾಯುದ್ಧದಲ್ಲಿ ಸಾವಿರಾರು ಜನರು ಸತ್ತರು. ಯಾರಾದರೂ ಮಾಹಿತಿ ಕೇಳಿದ್ದರೇನು? ಯುದ್ಧ ಯಶಸ್ವಿ ಆಗಬೇಕು ಅಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT