ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆ ನಂಟು: ತಂಗಿ ಮಗಳ ನೆನಪಲ್ಲಿ ಕಾಲೇಜು ಸ್ಥಾಪಿಸಿದ್ದ ಅನಂತ್‌

ಜಿಲ್ಲೆಯೊಂದಿಗೆ ಅವಿನಾಭಾವ ನಂಟು; ಆಗಾಗ್ಗೆ ಭೇಟಿ
Last Updated 12 ನವೆಂಬರ್ 2018, 20:14 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸಚಿವ ಎಚ್‌.ಎನ್. ಅನಂತಕುಮಾರ್ ಜಿಲ್ಲೆಯೊಂದಿಗೆ ಅವಿನಾಭಾವ ನಂಟು ಹೊಂದಿದ್ದರು. ತಂಗಿಯ ಮಗಳ ನೆನಪಿನಲ್ಲಿ ಕಾಲೇಜು ಸ್ಥಾಪನೆಯ ಮೂಲಕ ಇಲ್ಲಿನ ಶೈಕ್ಷಣಿಕ ಪ್ರಗತಿಗೂ ಕಾರಣರಾಗಿದ್ದರು.

ಅನಂತಕುಮಾರ್‌ರ ಸಹೋದರಿಯ ಪುತ್ರಿ ಅಮೃತಾ ರಸ್ತೆ ಅಪಘಾತವೊಂದರಲ್ಲಿ ನಿಧನರಾದರು. ಇದರಿಂದ ಮನನೊಂದಿದ್ದ ಅನಂತ್‌, ಆಕೆಯ ನೆನಪಿಗಾಗಿ 2008ರಲ್ಲಿ ಬಿಡದಿಯ ತಿಮ್ಮೇಗೌಡನ ದೊಡ್ಡಿ ಬಳಿ ಅಮೃತಾ ಇನ್‌ಸ್ಟಿಟ್ಯೂಟ್ ಆಫ್‌ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌ ಸೈನ್ಸ್ ಅಂಡ್‌ ಪಾಲಿಟೆಕ್ನಿಕ್ ಅನ್ನು ಸ್ಥಾಪಿಸಿದರು. ಇಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು.

ನಿರ್ವಹಣೆಯ ಸಮಸ್ಯೆಯಿಂದಾಗಿ ಅನಂತ್‌ ಈ ಕಾಲೇಜನ್ನು 2011ರಲ್ಲಿ ಬಾಗಲಕೋಟೆ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಮಾರಿದರು. ಆದರೆ ಅಮೃತಾ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು.

ಕಳೆದ 2017ರ ಡಿಸೆಂಬರ್‌ 30ರಂದು ಇದೇ ಕಾಲೇಜಿನಲ್ಲಿ ನಡೆದ ನೂತನ ಕ್ಯಾಂಪಸ್‌ ಲೋಕಾರ್ಪಣೆ ಹಾಗೂ ಬ.ವೀ.ವಿ. ಸಂಘದ 111ನೇ ವಾರ್ಷಿಕೋತ್ಸವಕ್ಕೆ ಅನಂತ್‌ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಕರೆತಂದಿದ್ದರು. ಆ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ್ದ ಅವರು, ತಂಗಿಯ ಮಗಳ ನೆನೆಪಿಗೆ ಈ ಕಾಲೇಜು ಸ್ಥಾಪಿಸಿದ್ದನ್ನು ರಾಷ್ಟ್ರಪತಿಗೆ ಭಾವನಾತ್ಮಕವಾಗಿ ವಿವರಿಸಿದ್ದರು. ಜಿಲ್ಲೆಯಲ್ಲಿ ಅನಂತಕುಮಾರ್ ಪಾಲ್ಗೊಂಡ ಕೊನೆಯ ಕಾರ್ಯಕ್ರಮ ಇದಾಗಿತ್ತು.

ಎಬಿವಿಪಿ ನಂಟು: ಅನಂತಕುಮಾರ್ ಅವಿಭಾಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಬಿವಿಪಿ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅಂದು ರಾಮನಗರದ ರಾಮಮಂದಿರ, ಬಸವೇಶ್ವರ ದೇವಾಲಯ, ಅರ್ಕೇಶ್ವರ ದೇವಾಲಯಗಳಲ್ಲಿ ಬೈಟಕ್ ಕೂರುತ್ತಿದ್ದರು.

1994ರಲ್ಲಿ ಗಿರಿಗೌಡರು ಚುನಾವಣೆಗೆ ಸ್ಪರ್ಧೆ ಮಾಡಿದ್ದ ವೇಳೆ ಅವರ ಪರ ಪ್ರಚಾರ ಸಹ ನಡೆಸಿದ್ದರಿಂದ ಜಿಲ್ಲೆಯ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. 1994ರಿಂದ 1996ರ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ರಾಮಚಂದ್ರೇಗೌಡರೊಂದಿಗೆ ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ನಾಯಕರೊಂದಿಗೆ ನಂಟು ಇಟ್ಟುಕೊಂಡಿದ್ದರು. ರಾಷ್ಟ್ರೀಯ ಕಬಡ್ಡಿ ಟೂರ್ನಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.

ಅಮೃತಾ ಕಾಲೇಜಿನಲ್ಲಿ ಅಶ್ರುತರ್ಪಣ
ಅನಂತಕುಮಾರ್ ಅವರು ಸ್ಥಾಪಿಸಿದ ಅಮೃತಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬೆಳಗ್ಗೆ ಶ್ರದ್ದಾಂಜಲಿ ಸಭೆ ನಡೆಯಿತು.

ಕಾಲೇಜಿನ ಸ್ಥಾಪನೆಗೆ ಅವರು ಶ್ರಮಿಸಿದ್ದು ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದ ಕಾರ್ಯವನ್ನು ನೆನೆಯಲಾಯಿತು. ಕಾಲೇಜಿನ ಆಡಳಿತ ಮಂಡಳಿ ಬಸವರಾಜ ಕೆಂಗಾಪುರ, ಪ್ರಾಚಾರ್ಯ ಕೆ.ವಿ. ಮಹೇಂದ್ರ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT