ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲತೆ ಸವಾಲಾಗಿ ಸ್ವೀಕರಿಸಿ

Last Updated 3 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಂಗವಿಕಲತೆ ದೈಹಿಕ ನ್ಯೂನತೆಯಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಸಮಾಜದಲ್ಲಿ ಸದೃಢರಾಗಿ ಬದುಕುವುದನ್ನು ಕಲಿಯಬೇಕು’ ಎಂದು ಹೆಚ್ಚುವರಿಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಅಂಗವಿಕಲ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನೆಯ ಕುಟುಂಬದ ಸದಸ್ಯರು ಅಂಗವಿಕಲರಿಗೆ ನೆರವಾಗಬೇಕು. ಸಹಕಾರ ಭಾವ ಹೊಂದಬೇಕು.ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅಂಗವಿಕರಿಗೆ ದೊರೆಯಬಹುದಾದ ಸೇವೆ-ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು’ ಎಂದು ಹೇಳಿದರು.

‘ಅಂಗವಿಕಲರಿಗಾಗಿ ಏರ್ಪಡಿಸುವ ಕಾರ್ಯಕ್ರಮಗಳು ಅವರಲ್ಲಿ ವಿಶ್ವಾಸ ಮೂಡಿಸುವಂತಾಗಬೇಕು.ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದ ಅನುದಾನವನ್ನು ಈಚಿನ ವರ್ಷಗಳಲ್ಲಿ ಶೇ 3ರಿಂದ 5ಕ್ಕೆ ಏರಿಸಲಾಗಿದೆ. ಈ ಅನುದಾನ ಸದುದ್ದೇಶಕ್ಕಾಗಿ ಸಕಾಲದಲ್ಲಿ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಂಗವಿಕಲರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿರುವುದು ಸಂತೋಷದ ಸಂಗತಿ. ಒಟ್ಟಾರೆ ಅಂಗವಿಕಲತೆ ಶಾಪವೆಂದು ಪರಿಗಣಿಸದೇ ಸವಾಲಾಗಿ ಸ್ವೀಕರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆ ಮತ್ತು ಕ್ರೀಡೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಓಂಗಣೇಶ್, ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT