ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಸ್ಥಗಿತಕ್ಕೆ ಮಾಲೀಕರ ನಿರ್ಧಾರ

ಕೊರಟೀಕೆರೆ: ತಿಂಗಳಿಂದ ಪಾವತಿ ಆಗದ ಟ್ಯಾಂಕರ್ ಬಿಲ್– 4 ಗ್ರಾಮಗಳಿಗೆ ನೀರು ಪೂರೈಕೆ
Last Updated 16 ಏಪ್ರಿಲ್ 2018, 7:02 IST
ಅಕ್ಷರ ಗಾತ್ರ

ಅಜ್ಜಂಪುರ: ಟ್ಯಾಂಕರ್‌ಗಳಿಗೆ ಬಿಲ್‌ ಪಾವತಿಯಾಗದೇ ಇರುವುದರಿಂದ ಕೊರಟೀಕೆರೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸ್ಥಗಿತಗೊಳಿಸಲು ಟ್ಯಾಂಕರ್ ಮಾಲೀಕರು ನಿರ್ಧರಿಸಿದ್ದಾರೆ.

ಮಳೆ ಕೊರತೆಯಿಂದ ಅಂತರ್ಜಲ ಇಳಿಮುಖಗೊಂಡು, ಕೊಳವೆ ಬಾವಿಗಳು ಬತ್ತಿರುವ ಈ ಗ್ರಾಮಗಳಿಗೆ ಕುಡಿಯುವ ನೀರು ನೀರು ಪೂರೈಕೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈವರೆಗೆ ನೀರು ಪೂರೈಸಿದ ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿ ಆಗದೇ ಇರುವುದರಿಂದ ನೀರು ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಟ್ಯಾಂಕರ್ ಮಾಲೀಕರು ನೀಡಿದ್ದಾರೆ.

‘ನೀರಿಗೆ ತತ್ವಾರ ಎದುರಾಗಿದ್ದ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗುತ್ತಿತ್ತು. ನೀಡುತ್ತಿದ್ದ ಅಲ್ಪವೂ-ಸ್ವಲ್ಪವೂ ನೀರಿಂದ ಮನೆ ನಿರ್ವಹಿಸುತ್ತಿದ್ದೆವು. ಆದರೆ ಹಣ ಪಾವತಿ ಆಗಿಲ್ಲ ಎಂಬ ಕಾರಣದಿಂದ ನೀರು ಪೂರೈಕೆ ನಿಲ್ಲಿಸುತ್ತೇವೆ ಎಂದು ಟ್ಯಾಂಕರ್ ಮಾಲೀಕರು ತಿಳಿಸಿದ್ದಾರೆ. ಇದರಿಂದ ನೀರಿಗಾಗಿ ದೂರದ ತೋಟಗಳಿಗೆ ಹೋಗಿ ನೀರು ತರುವ ದುಃಸ್ಥಿತಿ ಬರಲಿದೆಯೋ ಎನೋ’ ಎಂದು ಕೊರಟೀಕರೆಯ ಗಂಗಜ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಕೊರಟೀಕೆರೆ ಪಂಚಾಯಿತಿ ವ್ಯಾಪ್ತಿಯ ಪ್ರತೀದಿನ ಸೋಮೇನಹಳ್ಳಿಗೆ ಒಂದು, ಕೊರಟೀಕೆರೆ, ನಾಗವಂಗಲ, ಹೊಸೂರು ಗ್ರಾಮಗಳಿಗೆ ತಲಾ 5 ಟ್ಯಾಂಕರ್ ನೀರು ಪೂರೈಸಲು ಭೂಮಿಕ ಮತ್ತು ಆಂಜನೇಯ ಕನ್ಟ್ರಕ್ಷನ್ ಗಳಿಗೆ ಮಾ.21 ರಂದು ಟೆಂಡರ್ ನೀಡಿತ್ತು. ಈ ಗುತ್ತಿಗೆದಾರರು ಸ್ಥಳೀಯ ಟ್ಯಾಂಕರ್ ಮಾಲೀಕರಿಗೆ ಪ್ರತೀ 10 ದಿನಗಳಿಗೊಮ್ಮೆ ನೀರು ಪೂರೈಕೆ ಹಣ ನೀಡುವ ಷರತ್ತಿನ ಮೇಲೆ ಉಪ ಗುತ್ತಿಗೆ ನೀಡಿದ್ದರು. ಈದರೆ ಏಪ್ರಿಲ್‌ 15 ಕಳೆದರೂ ಟ್ಯಾಂಕರ್ ಮಾಲೀಕರಿಗೆ ನೀರಿನ ಬಿಲ್ ಪಾವತಿಸಿಲ್ಲ. ಇದು ಟ್ಯಾಂಕರ್ ಮಾಲೀಕರ ಅಸಮಾಧಾನಕ್ಕೆ ತುತ್ತಾಗಿದೆ. ಬಹುತೇಕರು ನೀರು ಪೂರೈಕೆ ನಿಲ್ಲಿಸಲು ತೀರ್ಮಾನಿಸಿದ್ದಾರೆ. ಇದು ಪಂಚಾಯಿತಿ ವ್ಯಾಪ್ತಿಯ ಜನರಿಗೆ ನೀರಿನ ಸಮಸ್ಯೆಯನ್ನು ತಂದೊಡ್ಡಲಿದೆ.

ನೀರಿಗೂ ಹಣ ಕೊಟ್ಟು, ಡ್ರೈವರ್‌ಗಳಿಗೂ ಸಂಬಳ ನೀಡಿ, ಟ್ರ್ಯಾಕ್ಟರ್ ಡೀಸೆಲ್‌ಗೂ ಸ್ವಂತ ಹಣ ನೀಡಿ ಕಳೆದ ಮಾರ್ಚ್ 21ರಿಂದ ಹಳ್ಳಿಗಳಿಗೆ ನೀರು ಪೂರೈಸಿದ್ದೇವೆ. 10 ದಿನಗಳಿಗೊಮ್ಮೆ ಬಿಲ್ ನೀಡುವ ಭರವಸೆ ನೀಡಿತ್ತದಾರೂ 25 ದಿನ ಕಳೆದರೂ ಹಣ ಕೈಸೇರಿಲ್ಲ’ ಎಂದು ನೀರು ಟ್ಯಾಂಕರ್ ಮಾಲೀಕ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ಯಾಂಕರ್‌ ಬಿಲ್ ಪಡೆಯಲು ಟ್ರ್ಯಾಕ್ಟರ್‌ಗೆ ಸಂಬಂಧಿಸಿದ ದಾಖಲೆಗಳು, ಇನ್ಸೂರೆನ್ಸ್, ಡ್ರೈವರ್ ಲೈಸೆನ್ಸ್, ಟ್ಯಾಂಕರ್ ಲೈಸೆನ್ಸ್, ನೀರು ಪೂರೈಕೆಯ ಬಿಲ್ ನೀಡಬೇಕು. ಇದನ್ನು ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆರ್ ಎಫ್ ಒ, ಇಒ, ಎಇಇ ಅವರಿಂದ ಸಹಿ ಹಾಕಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಬೇಕು. ಕಳುಹಿಸಿದ ಬಳಿಕ ಸಂಬಂದ ಪಟ್ಟ ಕಚೇರಿ ವಿಚಾರಿಸಿದರೆ ಬಿಲ್ ಕಳುಹಿಸಿದ್ದೇವೆ ಹೋಗಿ ಎಂದು ಹೇಳುತ್ತಾರೆ ಆದರೆ ಪಂಚಾಯಿತಿಯಲ್ಲಿ ವಿಚಾರಿಸಿದರೆ ಹಣ ಬಂದಿಲ್ಲ’ ಎನ್ನುತ್ತಾರೆ ಮತ್ತೊಬ್ಬ ಮಾಲೀಕ ಸುನಿಲ್.

‘ನೀರು ಪೂರೈಕೆ ಮಾಡಿದ್ದಲ್ಲದೇ, ಹಣ ಪಡೆಯಲು ಕಚೇರಿ ಹಾಗೂ ಅಧಿಕಾರಗಳ ಹಿಂದೆ ಅಲೆಯುವುದು ನಿತ್ಯದ ಗೋಳಾಗಿದೆ. ಶೀಘ್ರ ಹಣ ನೀಡದಿದ್ದರೆ ನೀರು ಪೂರೈಕೆ ಸ್ಥಗಿತಗೊಳಿಸುತ್ತೇವೆ’ ಎಂದು ಟ್ಯಾಂಕರ್ ಮಾಲೀಕರಾದ ಮಹೇಶ್ವರಪ್ಪ, ದೇವರಾಜು ಎಚ್ಚರಿಸಿದ್ದಾರೆ.

ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ₹40 ಲಕ್ಷ ಮೀಸಲಿಟ್ಟಿದ್ದು, ಇದರಿಂದ ಕುಡ್ಲೂರು ಭಾಗದಲ್ಲಿ ಬಾಕಿ ನೀಡಬೇಕಾದ ₹ 20 ಲಕ್ಷ ಪಾವತಿಸಲಾ
ಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಗಂಗಾಧರ ಮೂರ್ತಿ ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ ಇದೇ ಹೇಳಿಕೆಯನ್ನು ಕಳೆದರೆಡು ಬಾರಿ ನೀರಿಗಾಗಿ ಕುಡ್ಲೂರು ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನೆ ಸಮಯದಲ್ಲಿ ಜನಸಮಾನ್ಯರ ಮುಂದೆ ಹೇಳಿದ್ದರು.ಆದರೆ ಅದು ಕಾರ್ಯಗತ ಆಗಿಲ್ಲ.

ಜಿಲ್ಲಾಡಳಿತ ಗಮನ ಹರಿಸಲಿ

2017-18 ರ ಜುಲೈನಿಂದ ಡಿಸೆಂಬರ್ ವರೆಗೆ ಕುಡ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಸಿದ ಟ್ಯಾಂಕರ್ ಮಾಲೀಕರಿಗೆ ಪಾವತಿಸಬೇಕಾದ ₹20 ಲಕ್ಷ ಬಿಲ್ ಬಾಕಿ ಇದ್ದು, ಹಲವಾರು ಬಾರಿ ನೀರಿನ ಸಮಸ್ಯೆ ಬಗ್ಗೆ ಪ್ರತಿಭಟನೆ ನಡೆದಾಗಲೂ ಹಿಂದಿನ ಬಾಕಿ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿ, ಮರಳುತ್ತಾರೆ. ಆದರೆ ಈವರೆಗೂ ಬಾಕಿ ಮೊತ್ತ ವಿತರಣೆ ಆಗಿಲ್ಲ. ಹೀಗಾದರೆ ಯಾವೊಬ್ಬ ಟ್ಯಾಂಕರ್ ಮಾಲೀಕರೂ ನೀರು ಪೂರೈಕೆ ಮುಂದಾಗಲ್ಲ. ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎನ್ನುತ್ತಾರೆ ಕೊರಟೀಕೆರೆ ಗ್ರಾಮ ಪಂಚಾಯಿತಿ ಸದಸ್ಯ ಧರಣೇಶ್.

**

ಕೊರಟೀಕರೆ ಭಾಗದಲ್ಲಿ ಟ್ಯಾಂಕರ್ ನೀರು ಪೂರೈಸಿದವರಿಗೆ ಇನ್ನೆರಡು ದಿನಗಳಲ್ಲಿ ಹಣ ನೀಡಲಾಗುವುದು - ಗಂಗಾಧರಪ್ಪ, ತಾಲ್ಲೂಕು ಪಂಚಾಯಿತಿ ಇಒ.

**

ಜೆ.ಒ.ಉಮೇಶ್‌ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT