ಎಂಪಿಎಂ ನೆಡುತೋಪು ಅರಣ್ಯ ಇಲಾಖೆಗೆ ನೀಡಲು ಆಗ್ರಹ

7

ಎಂಪಿಎಂ ನೆಡುತೋಪು ಅರಣ್ಯ ಇಲಾಖೆಗೆ ನೀಡಲು ಆಗ್ರಹ

Published:
Updated:
Prajavani

ಶಿವಮೊಗ್ಗ: 70 ಸಾವಿರ ಎಕರೆ ಎಂಪಿಎಂ ನೆಡುತೋಪು ಪ್ರದೇಶವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ ಪಶ್ಚಿಮಘಟ್ಟದ ಪರಿಸರ ಸಂಘಟನೆ ಸದಸ್ಯರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಭದ್ರಾವತಿ ಎಂಪಿಎಂ ಕಾರ್ಖಾನೆ ಬಾಗಿಲು ಮುಚ್ಚಿದೆ. ಹಿಂದೆ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸಲು ಜಿಲ್ಲೆಯ 525 ಸ್ಥಳಗಳಲ್ಲಿ 70 ಸಾವಿರ ಎಕರೆ  ನೆಡುತೋಪು ನೀಡಲಾಗಿತ್ತು. ಈಗ ಎಪಿಎಂ ಬಂದ್‌ ಆಗಿರುವ ಪರಿಣಾಮ ಭೂಮಿ ಅತಂತ್ರವಾಗಿದೆ. ಖಾಸಗಿ ವ್ಯಕ್ತಿಗಳು, ಪಟ್ಟಭದ್ರರು ನೆಡುತೋಪು ಅತಿಕ್ರಮಣ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವಿಭಾಗದಲ್ಲಿದ್ದ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಲಾಗಿದೆ. ನೆಡುತೋಪುಗಳಿಗೆ ರಕ್ಷಣೆ ಇಲ್ಲ. ನೆಡುತೋಪಿನಲ್ಲಿ ಇರುವ ಲಕ್ಷಾಂತರ ಮರಗಳ ಲೂಟಿಯಾಗುತ್ತಿದೆ. ಈ ಕುರಿತು ವೃಕ್ಷಲಕ್ಷ ಆಂದೋಲನ ಕಳೆದ 3 ವರ್ಷಗಳಿಂದ ನೆಡುತೋಪುಗಳ ಸಂರಕ್ಷಣೆಗೆ  ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ದೂರಿದರು.

ಎಂಪಿಎಂ ಅರಣ್ಯ ಇಲಾಖೆ ಜತೆ ಮಾಡಿಕೊಂಡ ಗುತ್ತಿಗೆ ಷರತ್ತುಗಳ ಉಲ್ಲಂಘನೆಯಾಗಿದೆ. ಈ ಭೂಮಿ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಆದರೂ ಸರ್ಕಾರ ಕ್ರಮ ಜರುಗಿಸುತ್ತಿಲ್ಲ. ಏಕಜಾತಿ ನೆಡುತೋಪು ಬೆಳೆಸಲು ಖಾಸಗಿ ಉದ್ದಿಮೆದಾರರಿಗೆ ನೆಡುತೋಪು ಭೂಮಿ ನೀಡುವ ಹುನ್ನಾರು ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಸ್ವಾಭಾವಿಕ ಅರಣ್ಯ ಬೆಳೆಸಲು ಆಗ್ರಹ: ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಅರಣ್ಯ ಒತ್ತುವರಿ ಕಾರಣದಿಂದ ನಾಶವಾಗಿದೆ. ಎಂಪಿಎಂ ಗೆ ನೀಡಿದ್ದ 70 ಎಕರೆ ಭೂಮಿಯನ್ನು ಹಿಂದಕ್ಕೆ ಪಡೆದು ಅರಣ್ಯ ಅಭಿವೃದ್ಧಿ ಪಡಿಸಿದರೆ ಈಗಾಗಲೇ ಆಗಿರುವ ಅರಣ್ಯ ನಾಶಕ್ಕೆ ಬದಲಾಗಿ ಸ್ವಾಭಾವಿಕ ಅರಣ್ಯ ಬೆಳೆಲು ಸಾಧ್ಯವಾಗುತ್ತದೆ. ಎಂಪಿಎಂ ಅರಣ್ಯ ವಿಭಾಗದಲ್ಲಿರುವ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನು ತ್ರಿಶಂಕು ಸ್ಥಿತಿಗೆ ದೂಡಬಾರದು. ಅರಣ್ಯ ಇಲಾಖೆಗೆ ನೆಡುತೋಪು ಕಾರ್ಮಿಕರನ್ನು ನಿಯೋಜನೆ ಮಾಡಬಾರದು ಎಂದು ಆಗ್ರಹಿಸಿದರು.

ಕಟಾವು ಮಾಡಿದ ನೂರಾರು ನೆಡುತೋಪುಗಳಲ್ಲಿ ಈಗಾಗಲೇ ಸ್ವಾಭಾವಿಕ ಗಿಡಮರಗಳು ಬೆಳೆದಿವೆ. ಸ್ವಲ್ಪ ರಕ್ಷಣೆ ನೀಡಿದರೂ ಸಾವಿರಾರು ಎಕರೆ ಅರಣ್ಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಕೋರ್ಟ್‌ ಮೊರೆ ಹೋಗುವುದು ಅನಿವಾರ್ಯ ಎಂದು ಎಚ್ಚರಿಸಿದರು.

ನಂತರ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಅವರನ್ನು ವೃಕ್ಷಲಕ್ಷ ನಿಯೋಗ ಭೇಟಿ ಮಾಡಿ, ಚರ್ಚೆ ನಡೆಸಿತು.

ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರತಜ್ಞ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಲಕ್ಷ್ಮೀನಾರಾಯಣ ಕಾಶಿ,  ಬಿ.ಎಚ್. ರಾಘವೇಂದ್ರ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !