ಗಡಿದಾಟಿದ ಶಾಸಕರ ಬಿಡಲು ಸಾಧ್ಯವೇ: ಆಯನೂರು ಪ್ರಶ್ನೆ

7

ಗಡಿದಾಟಿದ ಶಾಸಕರ ಬಿಡಲು ಸಾಧ್ಯವೇ: ಆಯನೂರು ಪ್ರಶ್ನೆ

Published:
Updated:

ಶಿವಮೊಗ್ಗ: 34 ಸ್ಥಾನ ಗೆದ್ದವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದಾದರೆ 104 ಸ್ಥಾನ ಗಳಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಆಗಬಾರದೇ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದರು.

ಶಾಸಕರು ಗಡಿ ದಾಟಿ ಬಂದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ನಮಗೂ ಕಬ್ಬಡ್ಡಿ ಆಟ ಗೊತ್ತು. ಚೆನ್ನಾಗಿಯೇ ಕ್ಯಾಚ್ ಹಾಕುತ್ತೇವೆ. ಕಾಂಗ್ರೆಸ್, ಜೆಡಿಎಸ್ ಆಂತರಿಕ ಕಲಹಕ್ಕೆ ಬಿಜೆಪಿ ಹೊಣೆಯಲ್ಲ. ನಾವು ಗಾಳ ಹಾಕಿ ಮೀನು ಹಿಡಿಯುತ್ತಿಲ್ಲ. ದಡಕ್ಕೆ ಬಂದ ಮೀನುಗಳನ್ನು ಹಿಡಿಯದೇ ಬಿಡುವುದಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಛಾಟಿ ಬೀಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ. ಅವರ ಮೆದುಳಿಗೂ, ಬಾಯಿಗೂ ಸಂಪರ್ಕ ತಪ್ಪಿಹೋಗಿದೆ. ಹಿಂದೆ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಆಪರೇಷನ್ ಮಾಡಿಯೇ ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ನಡೆಸಿದ್ದರು. ಲೋಕಾಯುಕ್ತಕ್ಕೆ ಮೊದಲಿದ್ದ ಅಧಿಕಾರ ನೀಡಿದ್ದರೆ 10 ಬಾರಿ ಜೈಲಿಗೆ ಹೋಗಬೇಕಿತ್ತು ಕುಟುಕಿದರು.

ಸರ್ಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ದೂರುತ್ತಿದ್ದಾರೆ. ಸಚಿವ ಎಚ್‌್.ಡಿ. ರೇವಣ್ಣ ಸರ್ವಾಧಿಕಾರಿಯಂತೆ ವರ್ತಸುತ್ತಿದ್ದಾರೆ. ಹಾವು ಮುಂಗುಸಿಯಂತಿದ್ದ ಕುಮಾರಸ್ವಾಮಿ, ಶಿವಕುಮಾರ್ ಒಂದಾಗಿರುವ ಕಾರಣ ಸಿದ್ದರಾಮಯ್ಯ ಮೂಲೆ ಗುಂಪಾಗಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಹತಾಶೆಯಿಂದ ತಮ್ಮ ಶಿಷ್ಯರನ್ನು ಛೂ ಬಿಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಭಿನ್ನಮತೀಯ ಚಟುವಟಿಕೆ ಗರಿಗೆದರಿದೆ ಎಂದು ವಿಶ್ಲೇಷಿಸಿದರು.

ಯಡಿಯೂರಪ್ಪ ಅವರನ್ನು ಥರ್ಡ್‌ಕ್ಲಾಸ್ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಟೀಕಿಸಿದ್ದಾರೆ. ಅದಕ್ಕಾಗಿಯೇ ಸೊರಬದ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಬಿಎಸ್‌ವೈ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗೆ ಇಲ್ಲ. ಯಡಿಯೂರಪ್ಪ ಅವರ ಹಿರಿತನ ಗಮನಿಸಬೇಕು. ಮಧುಬಂಗಾರಪ್ಪ ಸೋಲಿನ ಹತಾಶೆಯಿಂದ ಮಾತನಾಡಬಾರದು ಎಂದು ಕಿವಿಮಾತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಚ್.ಸಿ. ಬಸವರಾಜಪ್ಪ, ಅನಿತಾ ರವಿಶಂಕರ್, ಮಧುಸೂದನ್, ಹಿರಣ್ಣಯ್ಯ, ಅಶೋಕ್ ಪೈ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !