ಶುಕ್ರವಾರ, ನವೆಂಬರ್ 22, 2019
26 °C

ಕಾಯಂ ಹುದ್ದೆಗೆ ಅತಿಥಿ ಉಪನ್ಯಾಸಕರ ಪರಿಗಣಿಸಿ: ಆಯನೂರು ಆಗ್ರಹ

Published:
Updated:
Prajavani

ಶಿವಮೊಗ್ಗ: ರಾಜ್ಯ ಸರ್ಕಾರ 1,247 ಪ್ರಾಚಾರ್ಯರು, ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಹುದ್ದೆಗಳಿಗೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದರು.

ಹಿಂದಿನ ಸರ್ಕಾರಗಳು ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವ ಭರವಸೆ ನೀಡಿದ್ದವು. ನೀಡಿದ ಭರವಸೆಯಂತೆ ನಡೆದುಕೊಳ್ಳಲಿಲ್ಲ.
ರಾಜ್ಯದ 412 ಪದವಿ ಕಾಲೇಜುಗಳಲ್ಲಿ ಶೇ 25ರಷ್ಟು ಕಾಯಂ ಉಪನ್ಯಾಸಕರಿದ್ದಾರೆ. ಉಳಿದವರು ಅತಿಥಿ ಉಪನ್ಯಾಸಕರು. ಕನಿಷ್ಠ ವೇತನವೂ ಸಿಗದೆ ಅವರು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳುವಾಗ ಪ್ರತಿ ಬಾರಿಯೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನ.10ರ ಒಳಗೆ ಹೊಸ ನೇಮಕಾತಿ ಮಾಡಿಕೊಳ್ಳಬೇಕು ಎಂದು ಯುಜಿಸಿ ಗಡುವು ನೀಡಿದೆ. ರಾಜ್ಯ ಸರ್ಕಾರವೂ ಸಂಪುಟ ಸಭೆಯಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಾರಿಯಾದರೂ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಬೇಕು. ಅವರ ಸೇವಾವಧಿ, ಹಿರಿತನ ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರು ಗೌರವದಿಂದ ಬದುಕಲು ಸೇವಾ ಭದ್ರತೆ ಒದಗಿಸಬೇಕು. ಕೆಲಸ ಕಾಯಂ ಮಾಡಬೇಕು. ಅಲ್ಲಿಯವರೆಗೂ ಯುಜಿಸಿ ನಿಯಮಾವಳಿ ಪ್ರಕಾರ ಮಾಸಿಕ ₨ 50 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

‘ಅತಿಥಿ ಉಪನ್ಯಾಸಕರು ನ.5ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರ ತಕ್ಷಣ ಗಮನಹರಿಸಬೇಕು. ಅವರಿಗೆ ನ್ಯಾಯ ನೀಡಬೇಕು. ಕಾಯಂಗೊಳಿಸದಿದ್ದರೆ ಹೋರಾಟ ರೂಪಿಸಲಾಗುವುದು. ಹೋರಾಟದ ನೇತೃತ್ವ ನಾನೆ ವಹಿಸುವೆ. ಸರ್ಕಾರ ಅದಕ್ಕೆ ಅವಕಾಶ ನೀಡಬಾರದು’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎನ್.ಜೆ.ರಾಜಶೇಖರ್, ಕೆ.ಜಿ.ಕುಮಾರಸ್ವಾಮಿ, ಎಚ್.ಸಿ.ಬಸವರಾಜಪ್ಪ, ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ.ಎಚ್.ಸೋಮಶೇಖರ್ ಶಿಮೊಗ್ಗೆ, ಡಾ.ಎಂ.ಸಿ.ನರಹರಿ, ಅರುಣ್ ಕುಮಾರ್, ರಾಜೇಶ್ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)