ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಾದ್ ರಸ್ತೆಯೇನೋ ಸುಂದರ.. ಪಾರ್ಕಿಂಗ್‌, ಟ್ರಾಫಿಕ್‌ ಅಧ್ವಾನ

Last Updated 6 ಜನವರಿ 2020, 10:57 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಟ್ಟಣದ ಆಜಾದ್ ರಸ್ತೆ ವಿಸ್ತರಣೆಯ ಕನಸು ನನಸಾಗಿ ಮೂರು ವರ್ಷ ಕಳೆದಿದೆ. ಹೊಸ ರಸ್ತೆ ಕಾಮಗಾರಿ ತೀರ್ಥಹಳ್ಳಿ ಪಟ್ಟಣಕ್ಕೆ ಹೊಸ ಮೆರುಗು ತಂದಿದೆ. ಆದರೆ ಈರಸ್ತೆ ಸೌಂದರ್ಯಕ್ಕೆ ಹಲವು ಸಮಸ್ಯೆಗಳು ಧಕ್ಕೆ ತಂದಿವೆ.

ಹಲವು ಸಮಸ್ಯೆಗಳಿಗೆ ಇಂದಿಗೂ ಉತ್ತರವಾಗಲೀ, ಪರಿಹಾರವಾಗಲೀ ಸಿಕ್ಕಿಲ್ಲ. ಕುವೆಂಪು ವೃತ್ತ (ಕೊಪ್ಪ ಸರ್ಕಲ್) ದಿಂದ ಬಾಳೇಬೈಲಿನ ಸುಮಾರು 1 ಕಿ. ಮೀ. ವರೆಗಿನ ನಿರ್ಮಾಣ ಕಾಮಗಾರಿಯ ಕುರಿತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ ವಾಹನ ದಟ್ಟಣೆ, ಜನರ ಓಡಾಟದಿಂದ ತುಂಬಿಹೋಗಿರುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳು, ಪಾದಚಾರಿಗಳ ಸಂಚಾರಕ್ಕೆ ಬಿಟ್ಟ ಸ್ಥಳದಲ್ಲಿ ಸರಕು ಸಾಮಗ್ರಿಗಳ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಅಂಗಡಿ, ಹೋಟೆಲ್ ಮುಂಭಾಗ ಪಾದಚಾರಿಗಳಿಗೆ ಅಳವಡಿಸಿದ ತಡೆಗೋಡೆ ನಿರ್ಮಾಣಕ್ಕೆ ಬ್ರೇಕ್ ಹಾಕಿ ವಿವಾದವನ್ನು ಉಂಟುಮಾಡಿರುವ ಹಲವು ಪ್ರಕರಣಗಳು ಇವೆ.

ವಿಶಾಲವಾದ ಪಾದಚಾರಿ ಮಾರ್ಗ, ಡಿವೈಡರ್, ಏಕಮುಖ ಸಂಚಾರ, ರಸ್ತೆಯ ಇಕ್ಕೆಲಗಳಲ್ಲಿಯೂ ಕಬ್ಬಿಣದ (ಗ್ರಿಲ್) ತಡೆಗೋಡೆ. ಅಲ್ಲಲ್ಲಿ ಬಸ್ ನಿಲುಗಡೆ, ಆಟೊ ನಿಲ್ದಾಣಗಳ ನಿರ್ಮಾಣ, ಡಿವೈಡರ್ ನಡುವೆ ಹಸಿರು, ಪಾದಚಾರಿ ಮಾರ್ಗದ ನಡುವೆ ಸುಂದರ ಗಿಡಗಳು, ಮಲೆನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸುವ ಬಸ್ ನಿಲ್ದಾಣಗಳು ಪಟ್ಟಣಕ್ಕೆ ಭೇಟಿ ನೀಡುವವರ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ.

2012ರಲ್ಲಿ ಆರಂಭವಾದ ರಸ್ತೆ ವಿಸ್ತರಣೆ ಕಾಮಗಾರಿ 2018ರ ಆರಂಭದ ವೇಳೆಗೆ ಪೂರ್ಣಗೊಂಡಿದೆ. ಪಟ್ಟಣದ ಕುವೆಂಪು (ಕೊಪ್ಪ) ವೃತ್ತದಿಂದ ಎಪಿಎಂಸಿ ವರೆಗಿನ 1 ಕಿ.ಮೀ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡಿದೆ. ರಸ್ತೆ ನಿರ್ಮಾಣಕ್ಕೆ ₹ 10 ಕೋಟಿ ವೆಚ್ಚ ಮಾಡಲಾಗಿದೆ. ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಟ್ಟ 160 ಆಸ್ತಿಗೆ ₹ 17 ಕೋಟಿಗೂ ಅಧಿಕ ಹಣ ಪರಿಹಾರವಾಗಿ ನೀಡಲಾಗಿದೆ.

ಎಪಿಎಂಸಿಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಾಳೇಬೈಲಿನವರೆಗೆ, ಕುವೆಂಪು ವೃತ್ತದಿಂದ ಕುಶಾವತಿ ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಅನುಷ್ಠಾನಗೊಳಿಸಿದೆ. ಕುವೆಂಪು ವೃತ್ತದಿಂದ ಎಪಿಎಂಸಿವರೆಗೆ ಪಾದಚಾರಿ ಮಾರ್ಗದಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಮುಕ್ತಿ ಕಾಣದ ಟ್ರಾಫಿಕ್ ಸಮಸ್ಯೆ

ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿದ್ದರೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರಕಿಲ್ಲ. ರಸ್ತೆಯ ಎರಡೂ ಭಾಗಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ. ದ್ವಿಚಕ್ರವಾಹನಗಳಿಗೆ, ಸಣ್ಣ ವಾಹನಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನ ನಿಲುಗಡೆ ಭಾಗದಲ್ಲಿ ಸಮಸ್ಯೆ ಇಲ್ಲ. ಆದರೆ, ಕಾರು ಪಾರ್ಕಿಂಗ್ ಜಾಗ ಕಿರಿದಾಗಿದ್ದು, ಮುಖ್ಯರಸ್ತೆಯ ಸಂಚಾರಕ್ಕೆ ಸ್ಥಳ ಕಡಿಮೆ ಉಳಿಯುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ದೊಡ್ಡ ದೊಡ್ಡ ಕಾರುಗಳನ್ನು ನಿಲ್ಲಿಸಿದಾಗ ರಸ್ತೆಯಲ್ಲಿ ಸ್ಥಳಾವಕಾಶ ಕಡಿಮೆಯಾಗುತ್ತದೆ. ವಾಹನವನ್ನು ವಾಪಸ್ಸು ತೆಗೆಯುವಾಗ ರಸ್ತೆಯುದ್ದಕ್ಕೂ ವಾಹನಗಳು ನಿಂತು, ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಮುಖ್ಯ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳೇ ತುಂಬಿ ಹೋಗುವುದರಿಂದ ಅನಿವಾರ್ಯವಾಗಿ ಪಟ್ಟಣದ ಸರ್ಕಾರಿ ಕಚೇರಿಗಳ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ಜಮಾವಣೆಗೊಳ್ಳುತ್ತವೆ. ಸೋಮವಾರದ ಸಂತೆ ದಿನ, ಪ್ರತಿಭಟನೆ, ಉತ್ಸವ, ಜಾತ್ರೆ ವೇಳೆ ವಾಹನ ನಿಲುಗಡೆಗೆ ಜನರು ಪರದಾಡುವಂತಾಗಿದೆ.

ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ್ದರೂ ಇದುವರೆಗೂ ಪಾರ್ಕಿಂಗ್ ವ್ಯವಸ್ಥೆ ಆಗಿಲ್ಲ. ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ಜೆಸಿ ಆಸ್ಪತ್ರೆ ಆವರಣದಲ್ಲಿ ವಾಹನಗಳನ್ನು ಹೆಚ್ಚಾಗಿ ನಿಲುಗಡೆ ಮಾಡುವುದರಿಂದ ಕಚೇರಿ ವಾಹನಗಳ ಸಂಚಾರಕ್ಕೆ ಅಡಚಣೆ ತಪ್ಪಿಲ್ಲ.

ಪಾರ್ಕಿಂಗ್ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಹೆಚ್ಚಿದ್ದು, ಮುಖ್ಯ ಬೀದಿಗೆ ಹೊಂದಿಕೊಂಡಂತೆ ಲಭ್ಯ ಇರುವ ಸ್ಥಳದಲ್ಲಿ ಸುಸಜ್ಜಿತ ಪಾರ್ಕಿಂಗ್ ನಿರ್ಮಾಣ ಮಾಡಬೇಕು ಎಂಬ ಪಟ್ಟಣ ಪಂಚಾಯಿತಿ ಯೋಜನೆ ನನೆಗುದಿಗೆ ಬಿದ್ದಿದೆ.

ಪಾಲನೆಯಾಗದ ಸಂಚಾರ ನಿಯಮಗಳು

ಪಟ್ಟಣ ವ್ಯಾಪ್ತಿಯಲ್ಲಿ ವೇಗ ಮಿತಿ ಫಲಕ ಅಳವಡಿಸಿದ್ದರೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಲ್ಲ. ಬೇಕಾಬಿಟ್ಟಿ ವಾಹನಗಳನ್ನು ನಿಷೇಧಿತ ಸ್ಥಳದಲ್ಲಿ ನಿಲ್ಲಿಸಲಾಗುತ್ತಿದೆ. ಕಾರು ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸಲಾಗುತ್ತಿದೆ. ಪಾದಚಾರಿ ಮಾರ್ಗದ ಮೇಲೆ ಕಾರು ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ದ್ವಿಚಕ್ರ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿವೆ. ಪಾದಚಾರಿ ಮಾರ್ಗದ ಆಯ್ದ ಸ್ಥಳಗಳಲ್ಲಿ ಗ್ರಿಲ್ ಅಳವಡಿಸಿಲ್ಲ. ಪ್ರಭಾವ ಬಳಸಿ ಕೆಲ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು, ಹೋಟೆಲ್ ಇರುವರಲ್ಲಿ ತಡೆಪಟ್ಟಿ ನಿರ್ಮಾಣವಾಗದಂತೆ ನೋಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ಇಂತಹ ಎಡವಟ್ಟಿನಿಂದ ಗ್ರಿಲ್ ತೆರವುಗೊಳಿಸಲು ಮುಂದಾದ ಪ್ರಸಂಗಗಳೂ ನಡೆದಿವೆ.

ಬೈಪಾಸ್ ರಸ್ತೆ

ಶಿವಮೊಗ್ಗದಿಂದ ಉಡುಪಿ, ಮಂಗಳೂರು ಕಡೆಗೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿವಮೊಗ್ಗ, ದಾವಣಗೆರೆ, ಮುಂತಾದ ಕಡೆಗೆಳಿಗೆ ಸಂಚರಿಸುವ ಭಾರಿ ಗಾತ್ರದ ವಾಹನ ಸಂಚಾರಕ್ಕೆ ಬೈಪಾಸ್ ರಸ್ತೆಯ ಅಗತ್ಯವಿದೆ. ಬಹುತೇಕ ಎಲ್ಲಾ ರೀತಿಯ ವಾಹನಗಳು ಆಜಾದ್ ರಸ್ತೆ ಮೂಲಕ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ತಲೆದೋರಿದೆ ಎಂದು ಸ್ಥಳೀಯರು ದೂರುತ್ತಾರೆ.

ಆಗುಂಬೆ ಮಾರ್ಗಕ್ಕೆ ಇಲ್ಲದ ನಿಲ್ದಾಣ

ತೀರ ಕಿರಿದಾಗಿದ್ದ ಆಗುಂಬೆ ವೃತ್ತಕ್ಕೆ ಮೆರುಗು ನೀಡಲಾಗಿದೆ. ಆಗುಂಬೆ, ಸಾಗರ, ಶಿವಮೊಗ್ಗ ಕಡೆಗೆ ಹೋಗುವ ಮಾರ್ಗವನ್ನು ವಿಸ್ತರಿಸಿ ವೃತ್ತ ನಿರ್ಮಿಸಲಾಗಿದೆ. ಸುಂದರ ಪಾರ್ಕೊಂದನ್ನು ಅಲ್ಲಿನ ಸ್ಥಳಾವಕಾಶ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಸಾಗರ ರಸ್ತೆ, ಆಗುಂಬೆ ಬಸ್ ನಿಲ್ದಾಣದಿಂದ ಶಿವಮೊಗ್ಗ ಕಡೆಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕೆ ಹೈಟೆಕ್ ಬಸ್ ನಿಲ್ದಾಣ, ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಆಗುಂಬೆ ಮಾರ್ಗದ ಪ್ರಯಾಣಿಕರಿಗೆ ಅನುಕೂಲವಾಗುಂತೆ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ.

ಪೇಟೆ ಮಹತ್ವ ಹೆಚ್ಚಿಸಿದ ರಸ್ತೆ ನವೀಕರಣ

ಆಜಾದ್ ರಸ್ತೆ ವಿಸ್ತರಣೆಯ ನಂತರ ತೀರ್ಥಹಳ್ಳಿ ಪಟ್ಟಣದ ರೂಪವೇ ಬದಲಾಯಿತು. ರಸ್ತೆ ಅಂಚಿನಲ್ಲಿದ್ದ ಮಂಗಳೂರು ಹೆಂಚಿನ ಸಣ್ಣಪುಟ್ಟ ಅಂಗಡಿಗಳಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿದವು. ವ್ಯಾಪಾರ ವಹಿವಾಟಿನ ಮಳಿಗೆಗಳು ಹೈಟೆಕ್ ಎನಿಸಿಕೊಂಡವು. ಸ್ವಚ್ಛತೆಗೆ ಹೆಚ್ಚು ಮಹತ್ವ ಬರುವಂತಾಯಿತು. ಪಾದಚಾರಿ ಮಾರ್ಗದ ನಡುವೆ ವಿದ್ಯುತ್ ಕಂಬಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುವುದು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲಿ ಮಳೆಗಾಲದ ನೀರು ಚರಂಡಿಯಲ್ಲಿ ಕಟ್ಟಿಕೊಳ್ಳುತ್ತದೆ ಎಂಬ ಅಸಮಾಧಾನದ ನಡುವೆ ಪಿಡ್ಲ್ಯೂಡಿ ಇಲಾಖೆಯ ಆಗಿನ ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ ಹಾಗೂ ಗುತ್ತಿಗೆದಾರ ಇಬ್ರಾಹಿಂ ಷರೀಫ್ ಅವರ ವಿಶೇಷ ಕಾಳಜಿಯಿಂದ ರಸ್ತೆ ಕಾಮಗಾರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT