ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಸ್ತೆಗಾಗಿ 25 ವರ್ಷದಿಂದ ಕಾಯುತ್ತಿರುವ ದೇವಾ ನಗರದ ನಿವಾಸಿಗಳು!

ರಾಮಮಂದಿರ ವೃತ್ತದ ಬಳಿ ಇರುವ ದೇವಾ ನಗರದಲ್ಲಿ ಅಭಿವೃದ್ಧಿ ನಿರ್ಲಕ್ಷ್ಯ: ಆರೋಪ
Last Updated 3 ಜನವರಿ 2023, 6:08 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಹಳೇ ಜೇವರ್ಗಿ ರಸ್ತೆಯ ರಾಮಮಂದಿರ ವೃತ್ತಕ್ಕೂ ಮೊದಲು 55ನೇ ವಾರ್ಡ್ ವ್ಯಾಪ್ತಿಯ ದೇವಾ ನಗರದ ಬಲಬದಿಯ ಮೊದಲ ಕ್ರಾಸ್‌ನ ನಿವಾಸಿಗಳ ಪರಿಸ್ಥಿತಿ ದೀಪದ ಬುಡದ ಕತ್ತಲಿನಂತಿದೆ. 50 ಮೀಟರ್ ಸಾಗಿದರೆ ಜೇವರ್ಗಿ ಸಂಪರ್ಕಿಸುವ ಪ್ರಮುಖ ರಸ್ತೆ ಇದೆ. ಆದರೆ, ಈ ಬಡಾವಣೆಯ ರಸ್ತೆ 25 ವರ್ಷಗಳಿಂದ ಡಾಂಬರೀಕರಣ ಕಂಡಿಲ್ಲ.

ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ. ನಮ್ಮ ಪರಿಸ್ಥಿತಿ ತಬರನ ಕಥೆಯಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ದೇವಾ ನಗರದ ಮೊದಲ ಕ್ರಾಸ್‌ನಲ್ಲಿ 20 ಮನೆಗಳು ಮತ್ತು ನಿವೇಶನಗಳಿವೆ. ಎಲ್ಲರೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರಿದ್ದಾರೆ. ಮನೆಯ ಕರ, ನೀರಿನ ಕರವನ್ನು ಸಕಾಲಕ್ಕೆ ಪಾವತಿಸಿದ್ದೇವೆ. ಆದರೂ, ನಮ್ಮ ಬಡಾವಣೆಯ ಅಭಿವೃದ್ಧಿಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರ ಲಾಗುತ್ತಿದೆ’ ಎಂದು ನಿವಾಸಿಗಳಾದ ಅಖಿಲ ಭಾರತ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ, ನಿವೃತ್ತ ಬ್ಯಾಂಕ್ ಅಧಿಕಾರಿ ಸುರೇಂದ್ರ ರೊಟ್ಟಿ ಹಾಗೂ ರಾಘವೇಂದ್ರ ಡಬೀರ.

‘ನಮ್ಮ ಬಡಾವಣೆಯ ರಸ್ತೆಯನ್ನು ಪ್ರಭಾವಿಗಳು ಆಕ್ರಮಿಸಿಕೊಂಡು ಒಂದು ಭಾಗ ಮುಚ್ಚಿದ್ದಾರೆ. ಇನ್ನೊಂದು ರಸ್ತೆಯನ್ನು ಯಾವುದಾದರೂ ಕಾರ್ಯಕ್ರಮದ ನಿಮಿತ್ತ ಪೆಂಡಾಲ್ ಹಾಕಿ ಬಂದ್ ಮಾಡಿದರೆ ನಾವು ಹೊರಹೋಗುವಂತೆಯೇ ಇಲ್ಲ. ಈ ಅತಿಕ್ರಮಣವನ್ನು ಪ್ರಶ್ನಿಸುವವರೂ ಇಲ್ಲ. ಪಾಲಿಕೆಯೂ ಸ್ಪಂದಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ‘ಈ ರಸ್ತೆಯ ಬಲಬದಿಯಲ್ಲಿ ಮಾತ್ರ ಮನೆಗಳನ್ನು ನಿರ್ಮಿಸಲಾಗಿದ್ದು, ಎಡಬದಿಯ ನಿವೇಶನಗಳನ್ನು ಖರೀದಿಸಿದವರು ಇನ್ನೂ ಮನೆ ಕಟ್ಟಿಲ್ಲ. ಹೀಗಾಗಿ, ಅಲ್ಲಿ ಹುಲ್ಲು ಬೆಳೆದಿದ್ದರಿಂದ ವಿಷ ಜಂತುಗಳು ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ನಿವೇಶನಗಳ ಮಾಲೀಕರಿಗೆ ಸೂಚನೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT