ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಸಂಚರಿಸದ ಆಂಬುಲೆನ್ಸ್: ರೈತರಿಗೆ ಸಂಕಷ್ಟ

Last Updated 18 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬಾಗಲಕೋಟೆ: ಚರ್ಮಗಂಟು ರೋಗದಿಂದ ನಿತ್ಯ ಹಸು, ಎತ್ತು, ಕರುಗಳು ಸಾವನ್ನಪ್ಪುತ್ತಿವೆ. ಅವುಗಳ ನೆರವಿಗೆ ಬರಬೇಕಿದ್ದ ಜಾನುವಾರುಗಳ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಯ ಆಂಬುಲೆನ್ಸ್‌ಗಳು ಸಂಚಾರ ಆರಂಭಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಚರ್ಮಗಂಟು ರೋಗದಿಂದ 17 ಸಾವಿರ (ಬಾಗಲಕೋಟೆ ಜಿಲ್ಲೆಯಲ್ಲಿ 536) ಜಾನುವಾರುಗಳು ಮೃತಪಟ್ಟಿವೆ. ಈಗಲೂ ಸಾವಿರಾರು ಹಸು, ಎತ್ತುಗಳು ಚರ್ಮಗಂಟು ರೋಗದಿಂದ ಬಳಲುತ್ತಿವೆ.

ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಗೆ 82 ಆಂಬುಲೆನ್ಸ್‌ಗಳನ್ನು (ಸಹಾಯವಾಣಿ ಸಂಖ್ಯೆ 1962) ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಗೆ 13 ವಾಹನಗಳನ್ನು ನೀಡಲಾಗಿದೆ. ಆದರೆ, ಅವಶ್ಯಕ ಸಿಬ್ಬಂದಿ ನೀಡದ್ದರಿಂದ ವಾಹನಗಳು ಶೆಡ್‌ ಸೇರಿವೆ. ನಿಂತಲ್ಲಿಯೇ ಹಾಳಾಗುವ ಭೀತಿ ಎದುರಾಗಿದೆ.

13 ವಾಹನಗಳಿಗೆ ಬೇಕಾದ ವಾಹನ ಚಾಲಕ, ವೈದ್ಯರು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿ ನೀಡಿಲ್ಲ. ಜಿಲ್ಲೆಗೆ ಮಂಜೂರಾಗಿರುವ 587 ಹುದ್ದೆಗಳ ಪೈಕಿ 290 ಹುದ್ದೆಗಳು ಖಾಲಿ ಇವೆ. ಇರುವ ಸಿಬ್ಬಂದಿಯಲ್ಲಿಯೇ ಕೆಲವರನ್ನು ಆಂಬುಲೆನ್ಸ್‌ಗಳಿಗೆ ನಿಯೋಜಿಸಿ, ಆರು ವಾಹನಗಳನ್ನು ಮಾತ್ರ ಓಡಿಸಲಾಗುತ್ತದೆ ಎಂದು ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೆಶಕ ಶಶಿಧರ ನಾಡಗೌಡ ಹೇಳಿದರು.

ಜುಲೈ ತಿಂಗಳಲ್ಲಿಯೇ ವಾಹನಗಳು ಬಂದಿವೆ. ಈಗ ಓಡುತ್ತಿರುವ ಅರ್ಧ ದಷ್ಟು ವಾಹನಗಳು ಕಾಟಾಚಾರಕ್ಕೆ ಎಂಬಂತೆ ಸಂಚರಿಸಿವೆ.

‘ದಿನಕ್ಕೆ 16 ಕಿ.ಮೀ. ಮಾತ್ರ ಎಂದರೆ ಎಷ್ಟು ಗ್ರಾಮಗಳಿಗೆ, ಎಷ್ಟು ರೈತರಿಗೆ ತಲುಪಿದೆ ಎಂಬುದು ಗೊತ್ತಾಗುತ್ತದೆ. ಸಿಬ್ಬಂದಿ ನೇಮಕದ ಬಗ್ಗೆ ಮುಖ್ಯಮಂತ್ರಿ
ಯವರೊಂದಿಗೆ ಮಾತನಾಡುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ 290 ಲಕ್ಷ ಜಾನುವಾರುಗಳಿವೆ. ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಆಂಬುಲೆನ್ಸ್ ಇದೆ. ಅಷ್ಟು ದೊಡ್ಡ ಸಂಖ್ಯೆಗೆ ಒಂದು ವಾಹನ ಸಾಲುವುದಿಲ್ಲ. ಅವೂ ಈಗ ಸಂಚರಿಸುತ್ತಿಲ್ಲ.

‘ವಾಹನಗಳಿಗೆ ಬೇಕಾದ ಸಿಬ್ಬಂದಿ ಒದಗಿಸಿಲ್ಲ. ರಾಜ್ಯ ಮಟ್ಟದಲ್ಲಿ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಅವಕಾಶವಿಲ್ಲ. ಇರುವ ಸಿಬ್ಬಂದಿ ಬಳಸಿಕೊಂಡು ಸೇವೆ ಒದಗಿಸಲು ಯತ್ನಿಸುತ್ತಿದ್ದೇವೆ’ ಎಂದು ನಾಡಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT