ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲೂ ಬಾಗಲಕೋಟೆ ಮೆಣಸಿನಕಾಯಿ ಘಾಟು

ಅಮೆರಿಕ, ಕೊರಿಯಾ ಮುಂತಾದ ರಾಷ್ಟ್ರಗಳಿಗೆ ರಫ್ತು
Last Updated 24 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬಾಗಲಕೋಟೆ: ದಾಳಿಂಬೆ, ದ್ರಾಕ್ಷಿ, ಸಪೋಟ, ಪೇರಲದಂತಹ ತೋಟಗಾರಿಕೆ ಬೆಳೆಗಳಿಂದ ಖ್ಯಾತಿ ಪಡೆದಿರುವ ಜಿಲ್ಲೆಯ ಬೆಳೆಗಳ ಪಟ್ಟಿಗೆ ಈಗ ಮೆಣಸಿನಕಾಯಿ ಸೇರ್ಪಡೆಗೊಂಡಿದೆ. ಬಾಗಲಕೋಟೆ, ಹುನಗುಂದ ತಾಲ್ಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ರೈತರು ಬೆಳೆದ ‘334’ ತಳಿಯ ಕೆಂಪು ಮೆಣಸಿನಕಾಯಿ ಘಾಟು ಈಗ ವಿದೇಶದಲ್ಲಿಯೂ ಹರಡಿಕೊಂಡಿದೆ.

ಈಗಾಗಲೇ 300 ಟನ್‌ನಷ್ಟು ರಫ್ತು ಮಾಡ ಲಾಗಿದ್ದು, ಅಂದಾಜು ಇನ್ನೂ 100 ಟನ್‌ನಷ್ಟು ರಫ್ತಾಗುವ ನಿರೀಕ್ಷೆ ಇದೆ. ಕಡಲೆ, ತೊಗರಿ ಬೆಳೆದು ಅಲ್ಪ ಆದಾಯ ಪಡೆಯುತ್ತಿದ್ದ ರೈತರು, ಈಗ ಮೆಣಸಿನಕಾಯಿ ಬೆಳೆದು ಪ್ರತಿ ಎಕರೆಗೆ ₹1 ಲಕ್ಷದಿಂದ ₹ 1.25 ಲಕ್ಷ ವರೆಗೆ ಆದಾಯ ಗಳಿಸುತ್ತಿದ್ದಾರೆ.

ಹುನಗುಂದ ತಾಲ್ಲೂಕಿನ ಸೂಳೇಭಾವಿಯಲ್ಲಿರುವ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಾಗಿರುವ ರೈತರು, ಜಿಲ್ಲೆಯ ಮೆಣಸಿನಕಾಯಿ ಘಾಟನ್ನು ಎಲ್ಲೆಡೆ ಹರಡುತ್ತಿದ್ದಾರೆ. ಸಂಸ್ಥೆ ಮೂಲಕ ವಿದೇಶಕ್ಕೂ ಕಳುಹಿಸುತ್ತಿದ್ದಾರೆ.

334 ಅಥವಾ ಸೂಪರ್ 10 ಎಂಬ ತಳಿ ಬೆಳೆಯಲಾಗುತ್ತಿದ್ದು, ಪ್ರತಿ ಎಕರೆಗೆ 10ರಿಂದ 14 ಕ್ವಿಂಟಲ್‌ ಇಳುವರಿ ಪಡೆಯುತ್ತಿದ್ದಾರೆ. ಪ್ರತಿ ಕ್ವಿಂಟಲ್‌ಗೆ ₹19 ಸಾವಿರದಿಂದ ₹26 ಸಾವಿರವರೆಗೆ ಮಾರಾಟವಾಗಿದೆ. ಮೆಣಸಿನಕಾಯಿ ಮಾರುಕಟ್ಟೆಗಿಂತ ಪ್ರತಿ ಕ್ವಿಂಟಲ್‌ಗೆ
₹2 ಸಾವಿರದಿಂದ ₹3 ಸಾವಿರ ಹೆಚ್ಚಿಗೆ ದೊರೆಯುತ್ತಿದೆ. ಉತ್ತಮ ಬೆಲೆ ದೊರೆಯದ ಕಾರಣ ಯಾರೂ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ. ಈಗ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲು ಆರಂಭಿಸಿದ್ದಾರೆ.

‘ಮೊದಲು ಕಡಲೆ, ತೊಗರಿ ಬೆಳೆಯುತ್ತಿದ್ದೆವು. ಈಗ ಪ್ರತಿ ಎಕರೆಗೆ ₹50 ಸಾವಿರದಷ್ಟು ವೆಚ್ಚವಾಗುತ್ತಿದ್ದು, 1.20 ಲಕ್ಷ ಉಳಿಯುತ್ತಿದೆ’ ಎನ್ನುತ್ತಾರೆ ಹುನಗುಂದ ತಾಲ್ಲೂಕಿನ ಚಿತ್ತರಗಿಯ ರೈತ ಎನ್‌.ಸಿ. ಗೌಡರ.

‘ಮೆಣಸಿನಕಾಯಿ ಬೀಜದಿಂದ ಹಿಡಿದು ರಾಶಿ ಮಾಡುವವರೆಗೆ ರೈತರಿಗೆ ಉತ್ಪಾದಕ ಸಂಸ್ಥೆ ವತಿಯಿಂದ ಮಾರ್ಗದರ್ಶನ ಮಾಡಲಾಗುತ್ತದೆ. ರೈತರ ಹೊಲಗಳಿಗೇ ತೆರಳಿ ಸಂಗ್ರಹ ಮಾಡಲಾಗುತ್ತದೆ. ಸಾಗಾಟ ವೆಚ್ಚವನ್ನೂ ಸಂಸ್ಥೆಯೇ ಭರಿಸುತ್ತದೆ’ ಎನ್ನುತ್ತಾರೆ ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಸಜ್ಜನರ.

ವೋಲಮ್‌ ಇನ್‌ಗ್ರಿಡಿಯಂಟ್ಸ್ ಫುಡ್‌ ಲಿಮಿಟೆಡ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇಲ್ಲಿಂದ ಕೊಚ್ಚಿನ್‌ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅಮೆರಿಕ, ಕೊರಿಯಾ, ಯುರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ ಎಂದರು.

‘ಯಾವ ದೇಶಕ್ಕೆ ರಫ್ತು ಮಾಡುತ್ತೇವೆ ಎನ್ನುವ ಆಧಾರದ ಮೇಲೆ ಆ ದೇಶದ ಮಿತಿ ಪ್ರಕಾರ ಔಷಧ ಬಳಕೆ ಬಗ್ಗೆ ರೈತರಿಗೆ ಮಾರ್ಗದರ್ಶನ
ಮಾಡಲಾಗುತ್ತದೆ’ ಎನ್ನುತ್ತಾರೆ ವೋಲಮ್‌ ಇನ್‌ಗ್ರಿಡಿಯಂಟ್ಸ್‌ ಫುಡ್‌ ಲಿಮಿಟೆಡ್‌ ಮ್ಯಾನೇಜರ್‌ ಸಂತೋಷ ಯರಗಂಬಳಿಮಠ.

****

ರೈತರು ಸಂಘಟಿತರಾಗಿ, ತಂತ್ರಜ್ಞಾನ ಸರಿಯಾಗಿ ಬಳಸಿಕೊಂಡರೆ ಕೃಷಿಯಲ್ಲಿಯೂ ಲಾಭ ಪಡೆಯಬಹುದಾಗಿದೆ

-ರವಿ ಸಜ್ಜನರ, ವ್ಯವಸ್ಥಾಪಕ ನಿರ್ದೇಶಕ, ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT