ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ| ಜ.9, 10ಕ್ಕೆ ಸಿರಿಧಾನ್ಯ, ಸಾವಯವಸಿರಿ ಮೇಳ

Last Updated 6 ಜನವರಿ 2023, 8:26 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಜ.9 ಮತ್ತು 10 ರಂದು ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಸಿರಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನಗಳ ಬೇಡಿಕೆ ಇರುವುದರಿಂದ ಸಾವಯವ ಬೆಳೆಗಾರರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.

ಈ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ. ಸಜ್ಜೆ, ನವಣೆ, ಸಾಮೆ, ರಾಗಿ, ಜೋಳ, ಊದಲು, ಬರಗು, ಹಾರಕ ಮತ್ತು ಕೊರಲೆ ಸಿರಿದಾನ್ಯಗಳ ಮಹತ್ವ ತಿಳಿಸಲಾಗುತ್ತಿದೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯ ಸುಧಾರಣೆ ಮೇಲೆ ಆಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಜ.9 ರಂದು ಬೆಳಿಗ್ಗೆ 11ಕ್ಕೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡುವರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.15ಕ್ಕೆ ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಡಾ.ಆರ್‌.ಬಿ. ಬೆಳ್ಳಿ, 3ಕ್ಕೆ ಸಿರಿಧಾನ್ಯ ಬೆಳೆಗಳಲ್ಲಿ ಬೆಳೆ ಉತ್ಪಾದನಾ ತಾಂತ್ರಿಕತೆಗಳು ಕುರಿತು ಡಾ.ಬಸವರಾಜ ಏಣಗಿ, 3.45ಕ್ಕೆ ಸಿರಿಧಾನ್ಯಗಳ ಮೌಲವರ್ಧನೆ ಕುರಿತು ಡಾ.ಸರೋಜಿನಿ ಕರಕಣ್ಣವರ, ಸಂಜೆ 4.30ಕ್ಕೆ ಆಹಾರದಲ್ಲಿ ಆರೋಗ್ಯ ಕುರಿತು ಡಾ.ಸುರೇಖಾ ಸಂಕನಗೌಡರ, 5.15ಕ್ಕೆ ಸಿರಿಧಾನ್ಯಗಳ ಮೌಲ್ಯವರ್ಧನ ಕುರಿತು ಕಾಶಿಬಾಯಿ ಬ್ಯಾಡಗಿ ಮಾತನಾಡಲಿದ್ದಾರೆ ಎಂದರು.

ಜ.10 ರಂದು ಬೆಳಿಗ್ಗೆ ಸಾವಯವ, ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಯೋಗಿಶ ಅಪ್ಪಾಜಯ್ಯ, 11ಕ್ಕೆ ಸಿರಿಧಾನ್ಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಕುರಿತು ಡಾ.ಸಂಗಪ್ಪ ಬಿ.ಸಿ, ಕಿರುಧಾನ್ಯ ಹಾಗೂ ಸಾವಯವ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಕುರಿತು ಶಿವಕುಮಾರ ಎ.ಎಂ. ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 2ಕ್ಕೆ ಸಿರಿಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆ ಏರ್ಪಡಿಸಲಾಗಿದೆ. 100 ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟವಿರಲಿದೆ ಎಂದರು.

ಮೇಳ ಹಾಗೂ ಸಿರಿಧಾನ್ಯದ ಮಹತ್ವ ತಿಳಿಸುವುದಕ್ಕಾಗಿ ಜ.7 ರಂದು ಬೆಳಿಗ್ಗೆ 8ಕ್ಕೆ ಜಿಲ್ಲಾಡಳಿತದಿಂದ ವಿದ್ಯಾಗಿರಿ ಸರ್ಕಲ್‌ವರೆಗೆ ಸಿರಿಧಾನ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾತೋಶ್ರೀ ಉಮಾತಾಯಿ ಟ್ರಸ್ಟ್ ಅಧ್ಯಕ್ಷ ಶಂಕರಾರೂಢ ಸ್ವಾಮೀಜಿ ಮಾತನಾಡಿ, ರಾಸಾಯನಿಕ ಬಳಕೆ ಭೂಮಿ ಹಾಗೂ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಇಂತಹ ಮೇಳಗಳ ಅವಶ್ಯಕತೆ ಇದೆ ಎಂದು ಹೇಳಿದರು.

ಕೃಷಿ ಇಲಾಖೆ ಉಪ ನಿರ್ದೇಶಕರಾದ ಕೆ.ಎಸ್.ಅಗಸನಾಳ, ಎಚ್.ಡಿ.ಕೋಳೇಕರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಮೌನೇಶ್ವರಿ ಕಮ್ಮಾರ ಇದ್ದರು.

ಅಡುಗೆ, ರಂಗೋಲಿ, ಚಿತ್ರಕಲಾ ಸ್ಪರ್ಧೆ

ಬಾಗಲಕೋಟೆ: ಸಿರಿಧಾನ್ಯ ಮೇಳದ ಅಂಗವಾಗಿ ಜ.8 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಕೃಷಿ ಸಂಬಂಧಿತ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.

ಜ.9 ರಂದು ಬೆಳಿಗ್ಗೆ 8 ರಿಂದ 10 ವರೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಬೆ.9ಕ್ಕೆ ಮಹಿಳೆಯರಿಗೆ ಸಿರಿಧಾನ್ಯ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ಸಿರಿಧಾನ್ಯಗಳಿಂದ ಮನೆಯಲ್ಲಿ ಸಿದ್ಧಪಡಿಸಿಕೊಂಡು ತರುವ ಆಹಾರ ‍‍ಪ್ರದರ್ಶನ ಮಾಡಬಹುದಾಗಿದೆ. ವಿಜೇತರಿಗೆ ಬಹುಮಾನ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT