ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮದಲ್ಲಿ ಜ.13, 14ಕ್ಕೆ ಸ್ವಾಭಿಮಾನಿ ಶರಣ ಮೇಳ: ಚನ್ನಬಸವಾನಂದ ಸ್ವಾಮೀಜಿ

Last Updated 6 ಜನವರಿ 2023, 9:40 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಕೂಡಲಸಂಗಮ ಕ್ರಾಸ್‌ ಹತ್ತಿರದ ಹೂವನೂರಿನಲ್ಲಿ ಜ.13 ಹಾಗೂ 14 ರಂದು ಸ್ವಾಭಿಮಾನಿ ಶರಣ ಮೇಳ ಆಯೋಜಿಸಲಾಗಿದೆ ಎಂದು ಸ್ವಾಭಿಮಾನ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷಗಳಿಂದ ಮಾತೆ ಮಹಾದೇವಿ ಶರಣ ಮೇಳ ಆಯೋಜಿಸುತ್ತ ಬಂದಿದ್ದರು. ಈ ಬಾರಿ ಬಸವ ಧರ್ಮ ಪೀಠದಲ್ಲಿ ಸಮ್ಮೇಳನ ನಡೆಸಲು ಅವಕಾಶ ನೀಡದ್ದರಿಂದ ಭಕ್ತರಿಗಾಗಿ ಪರ್ಯಾಯ ಮೇಳ ಆಯೋಜನೆ ಮಾಡುತ್ತಿದ್ದೇವೆ ಎಂದರು.

ಜ.13 ರಂದು ಬೆಳಿಗ್ಗೆ ಬಸವ ಐಕ್ಯ ಮಂಟಪದಿಂದ ಜ್ಯೋತಿ ತೆಗೆದುಕೊಂಡು ಮೇಳ ನಡೆಯುವ ವೇದಿಕೆಗೆ ಹೋಗಲಾಗುವುದು. ಬೆಳಿಗ್ಗೆ 11 ಗಂಟೆಗೆ ಮೇಳವನ್ನು ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್‌ ಉದ್ಘಾಟನೆ ಮಾಡಲಿದ್ದಾರೆ. ಸಮಿತಿಯ ಕಾರ್ಯದರ್ಶಿ ಮಾತೆ ಸತ್ಯಾದೇವಿ, ಕೋಶಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ರಾಜ್ಯದ ಹಾಗೂ ವಿವಿಧ ರಾಜ್ಯಗಳ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 3ಕ್ಕೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಜ.29 ರಂದು ಮುಂಬೈನಲ್ಲಿ ನಡೆಯಲಿರುವ ಲಿಂಗಾಯತ ಮಹಾರ‍್ಯಾಲಿ ಪೂರ್ವಸಿದ್ಧತೆ ಬಗ್ಗೆ ಚಿಂತನ ಗೋಷ್ಠಿ ನಡೆಯಲಿದೆ. ಸಂಜೆ 7ಕ್ಕೆ ಲಿಂಗಾಯತ ಧರ್ಮದ ಪೀಠಾರೋಹಣ ನಡೆಯಲಿದೆ. ವ್ಯಕ್ತಿಯನ್ನು ಕೂಡಿಸದೆ ವಚನ ಸಾಹಿತ್ಯ ಧರ್ಮಗ್ರಂಥದ ಪೀಠಾರೋಹಣ ಮಾಡಲಾಗುವುದು ಎಂದರು.

ಜ.14 ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, 11ಕ್ಕೆ ಸಮುದಾಯ ಪ್ರಾರ್ಥನೆ, ವಚನ ಪಾರಾಯಣ, ಕುಸುರೆಳ್ಳು ವಿನಿಮಯ ನಡೆಯಲಿದೆ. ಪ್ರಾರ್ಥನೆ ನಂತರ ಸಾಮೂಹಿಕ ವಚನ ಗಾಯನ, ವಚನ ನೃತ್ಯ ಹಾಗೂ ಶರಣ–ಶರಣೆಯರ ಸ್ಫೂರ್ತಿ ಭಕ್ತಿ ಕುಣಿತ ನಡೆಯಲಿದೆ ಎಂದು ಹೇಳಿದರು.

ಕೂಡಲಸಂಗಮದಲ್ಲಿ ಮೇಳ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ. ಹಾಗಾಗಿ, ಹೂವನೂರಿನಲ್ಲಿ ಮಾಡುತ್ತಿದ್ದೇವೆ. ಅವರ ಕಾರ್ಯಕ್ರಮಕ್ಕೆ ನಾವು ಅಡ್ಡಿ ಪಡಿಸುವುದಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಅವರು ಅಡ್ಡಿ ಪಡಿಸಬಾರದು ಎಂದರು.

ಸಮತಿ ಕೋಶಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ, ಕೆ. ಬಸವರಾಜಪ್ಪ, ಅಶೋಕ ಬೆಂಡಿಗೇರಿ, ಕಲ್ಮೇಶ ಲಿಂಗಾಯತ, ಚಂದ್ರಕಾಂತ ಇದ್ದರು.

ಮಾತೆ ಗಂಗಾದೇವಿ ಸರ್ವಾಧಿಕಾರಿ ಧೋರಣೆ

ಬಾಗಲಕೋಟೆ: ಈಗಿನ ಬಸವ ಧರ್ಮ ಫೀಠದ ಅಧ್ಯಕ್ಷರಿಗೆ ಧರ್ಮ ಪ್ರಚಾರಕ್ಕಿಂತ ವ್ಯಾಪಾರೀಕರಣ ಮುಖ್ಯವಾಗಿದೆ. ಟ್ರಸ್ಟ್‌ನಿಂದ ಉಚ್ಚಾಟನೆ ಮಾಡಲು ಅವಕಾಶವಿರದಿದ್ದರೂ, ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತುಕತೆಗೆ ಅಂಗಲಾಚಿ ಬೇಡಿಕೊಂಡು ಹೋದರೂ, ಮಾತೆ ಗಂಗಾದೇವಿ ಅವರು ಮಾತನಾಡಲು ಸಿದ್ಧರಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

35 ವರ್ಷಗಳ ಕಾಲ ಪೀಠದಲ್ಲಿ ಮಾತೆ ಮಹಾದೇವಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆಸ್ತಿಗಾಗಿ ಈಗ ಏಕಾಏಕಿ ಹೊರ ಹಾಕಲಾಗಿದೆ. ಅವರಿಗೆ ಜ್ಞಾನಿಗಳು, ಸಂಘಟಕರು ಬೇಕಾಗಿಲ್ಲ. ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT