ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರ ಕಲರವ

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಲ್ಲೂ ಚೇತರಿಕೆ
Last Updated 12 ಡಿಸೆಂಬರ್ 2022, 5:04 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್‌ ಕಾರಣಕ್ಕಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ಪ್ರವಾಸೋದ್ಯಮ ಮತ್ತೆ ಚಿಗುರಿಕೊಂಡಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗಿಗಳಲ್ಲಿಯೂ ಉತ್ಸಾಹ ಮೂಡಿದೆ.

ವಿಶ್ವ ಪ್ರಸಿದ್ಧಿ ಪಡೆದಿರುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಸೇರಿದಂತೆ ವಿವಿಧ ತಾಣಗಳಿಗೆ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಮೂರು ವರ್ಷಗಳ ನಂತರ ಶಾಲಾ–ಕಾಲೇಜು ವಿದ್ಯಾರ್ಥಿಗಳ ಪ್ರವಾಸಕ್ಕೂ ಅನುಮತಿ ನೀಡಿರುವುದರಿಂದ ಮಕ್ಕಳ ಕಲರವವೂ ಹೆಚ್ಚಾಗಿದೆ.

ಅಕ್ಟೋಬರ್ ಹಾಗೂ ಡಿಸೆಂಬರ್‌ ತಿಂಗಳಲ್ಲಿ ನಿತ್ಯ ಸಾವಿರಾರು ಮಕ್ಕಳು ನೂರಾರು ವಾಹನಗಳಲ್ಲಿ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬನಶಂಕರಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರಿಂದಾಗಿ ಸಂಬಂಧಿತ ವಹಿವಾಟೂ ಚುರುಕು ಪಡೆದುಕೊಂಡಿದೆ.

ಲಾಡ್ಜಿಂಗ್, ಹೋಟೆಲ್‌, ಪ್ರವಾಸಿ ವಾಹನ ಮುಂತಾದವು ಸೇರಿದಂತೆ ಹಲವು ಜನರಿಗೆ ಉದ್ಯೋಗವಕಾಶಗಳು ಹೆಚ್ಚಿವೆ. ಕೋವಿಡ್‌ನಿಂದಾಗಿ ಪ್ರವಾಸಿಗರಲ್ಲಿದೆ ನಿರುದ್ಯೋಗಿಗಳಾಗಿದ್ದವರಿಗೆ, ನಷ್ಟಕ್ಕೆ ಈಡಾಗಿದ್ದವರಿಗೆ ಈಗ ಅನುಕೂಲ ಆಗುತ್ತಿದೆ.

ಎರಡು ವರ್ಷಗಳಿಂದ ವಸತಿ ಗೃಹಗಳಲ್ಲಿ ಜನರೇ ಇರುತ್ತಿರಲಿಲ್ಲ. ಈಗ ಬಹಳಷ್ಟು ಕೊಠಡಿಗಳು ಮುಂಗಡವಾಗಿಯೇ ಬುಕಿಂಗ್‌ ಆಗುತ್ತಿವೆ. ‘ಬಾಡಿಗೆ ಇಲ್ಲದೆ ಕಾರನ್ನು ಮನೆಯ ಮುಂದೆ ನಿಲ್ಲಿಸಬೇಕಾಗಿತ್ತು. ಈಗ ಜನರು ಪ್ರವಾಸಕ್ಕೆ ಹೊರಡುತ್ತಿರುವುದರಿಂದ ಬಾಡಿಗೆ ಸಿಗುತ್ತಿದೆ. ಸಾಲದ ಕಂತು ಪಾವತಿ, ಕುಟುಂಬ ನಿರ್ಹವಣೆ ಸರಳವಾಗಿದೆ‘ ಎನ್ನುತ್ತಾರೆ ಕಾರು ಚಾಲಕ ಶಂಕರ ದೊಡ್ಡಮನಿ.

ಬಾದಾಮಿ, ಐಹೊಳೆಯಂತಹ ಐತಿಹಾಸಿಕ ಸ್ಥಳಗಳಲ್ಲದೆ ಮುಚಖಂಡಿ ಕೆರೆ, ಸೀಮಿಕೇರಿಯ ಲಡ್ಡುಮುತ್ಯಾ ಮಠ, ಚಿಕ್ಕಸಂಗಮಕ್ಕೂ ಸ್ಥಳೀಯ ಜನರು ಭೇಟಿ ನೀಡಿ, ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಹಿಂದಿನ ವರ್ಷ 9.50 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಬಾರಿ ಅವರ ಸಂಖ್ಯೆ ಈಗಾಗಲೇ 12 ಲಕ್ಷ ದಾಟಿದೆ. ಕೂಡಲಸಂಗಮದಲ್ಲಿ ಸಂಗಮನಾಥನ ದರ್ಶನ ಹಾಗೂ ಬಸವಣ್ಣನ ಐಕ್ಯಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. 5 ಲಕ್ಷ ಭಕ್ತರು, ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದಾರೆ.800ಕ್ಕೂ ಹೆಚ್ಚು ಪ್ರವಾಸಿಗರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಬಾದಾಮಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಿತ್ಯ ಸಾವಿರಾರು ಜನರು ಭೇಟಿ ನೀಡಿ, ಶಿಲ್ಪಕಲೆಯ ಕೆತ್ತೆನ, ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ರಾಜ್ಯ ಸರ್ಕಾರವು ಪ್ರವಾಸಿ ತಾಣಗಳಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ವಸತಿ, ಪ್ರವಾಸಿ ತಾಣಗಳಲ್ಲಿನ ಕಾಮಗಾರಿಗಳ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕಿದೆ.

ಪ್ರಜಾವಾಣಿ ತಂಡ

ಬಸವರಾಜ ಹವಾಲ್ದಾರ,
ಎಸ್‌.ಎಂ. ಹಿರೇಮಠ,
ಶ್ರೀಧರಗೌಡರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT