ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಗ ಚೆಲ್ಲಿ, ಸಾಮೂಹಿಕ ಭೋಜನ

ಬಾದಾಮಿ: ಭೂತಾಯಿಗೆ ಪೂಜೆ ಸಲ್ಲಿಸಿ,ನೈವೇದ್ಯ ಅರ್ಪಿಸಿದ ರೈತರು
Last Updated 14 ಅಕ್ಟೋಬರ್ 2019, 9:11 IST
ಅಕ್ಷರ ಗಾತ್ರ

ಬಾದಾಮಿ: ಶೀಗಿ ಹುಣ್ಣಿಮೆ ನಿಮಿತ್ತ ರೈತರು ಭಾನುವಾರ ಭೂತಾಯಿಗೆ ನೈವೇದ್ಯ ಸಲ್ಲಿಸುವುದರ ಮೂಲಕ ಚರಗವನ್ನು ಚೆಲ್ಲುತ್ತಾ ಸಂಭ್ರಮದಿಂದ ಹುಣ್ಣಿಮೆಯನ್ನು ಆಚರಿಸಿದರು.

ಉತ್ತರ ಕರ್ನಾಟಕದಲ್ಲಿ ಮುಂಗಾರು ಬೆಳೆಗೆ ಕೃಷಿಕರು ಶೀಗಿ ಹುಣ್ಣಿಮೆ ದಿನ ಮತ್ತು ಹಿಂಗಾರು ಬೆಳೆಗೆ ಎಳ್ಳು ಅಮಾವಾಸ್ಯೆಯ ದಿನ ಭೂತಾಯಿಗೆ ನೈವೇದ್ಯದ ರೂಪದಲ್ಲಿ ಚರಗ ಚೆಲ್ಲುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಮಲಪ್ರಭಾ ಪ್ರವಾಹದಿಂದ ನದಿ ದಂಡೆಯ ಎಲ್ಲ ಬೆಳೆಗಳು ಕೊಚ್ಚಿ ಹೋಗಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ್ದರಿಂದ ಈ ಬಾರಿ ಶೀಗಿಹುಣ್ಣಿಮೆಯು ರೈತರಿಗೆ ಕಾರ್ಮೋಡ ಕವಿದಂತಾಗಿತ್ತು.

‘ಎದಿ ಉದ್ದ ಬೆಳೆದ ಎಲ್ಲಾ ಬೆಳಿ ನದಿ ನೀರಾಗ ಕೊಚ್ಚಿಕೊಂಡು ಹೋಗ್ಯಾವ್ರಿ. ಎಲ್ಲಿ ಶೀಗಿ ಹುಣ್ಣಿವಿ ಮಾಡ ಬೇಕು‘ ಎಂದು ಹಾಗನೂರ ಗ್ರಾಮದ ರೈತ ಶಿವಾನಂದ ದ್ಯಾವಣ್ಣವರ ಹೇಳಿದರು.

ಆದರೆ, ಮಳೆಯಾಶ್ರಿತದಿಂದ ಬೆಳೆದ ಬೆಳೆಗಳಿಗೆ ರೈತರು ಮತ್ತು ಕೃಷಿ ಮಹಿಳೆಯರು ಭೂತಾಯಿಯ ಪೂಜೆಯನ್ನು ಮಾಡಿದರು. ಬನ್ನಿಗಿಡಕ್ಕೆ ಪೂಜಿಸಿ ಹೊಲದಲ್ಲಿ ಕಲ್ಲಿನ ಪಂಚಪಾಂಡವರನ್ನು ಪೂಜಿಸಿ ನೈವೇದ್ಯ ಮಾಡುವರು. ಪಾಂಡವರ ಜತೆಗೆ ಹಿಂದೆ ಕಳ್ಳ (ಕರ್ಣ) ಎಂದು ಪೂಜಿಸಿ ನೈವೇದ್ಯವನ್ನು ನೆಲದಲ್ಲಿ ಹೂಳಿದರು.

ಬನ್ನಿ ಗಿಡದ ಪೂಜೆಯ ನಂತರ ಒಬ್ಬರು ನೈವೇದ್ಯದ ತಾಟು ಇನ್ನೊಬ್ಬರು ನೀರನ್ನು ಹಿಡಿದುಕೊಂಡು ಹೊಲದ ತುಂಬೆಲ್ಲ ಸಾಗುತ್ತ ಚರಗ ಚೆಲ್ಲುವರು. ಭೂತಾಯಿಗೆ ನೈವೇದ್ಯ ಚೆಲ್ಲುತ್ತ ಹುಲ್ಲುಲ್ಲುಗೋ… ಎಂದು ಹೇಳುವರು. ಹಿಂದೆ ತಂಬಿಗೆಯಲ್ಲಿ ನೀರು ಚಿಮುಕಿಸುತ್ತ ಚಲಾಮ್ರುಗೋ… ಎಂದು ಇಡೀ ಹೊಲವನ್ನು ಸುತ್ತು ಹಾಕಿದರು.

ಹುಣ್ಣಿಮೆಗೂ ಮುಂಚೆ ಮನೆಯಲ್ಲಿ ಕೃಷಿಕ ಮಹಿಳೆಯರು ವಿವಿಧ ಅಡುಗೆಯ ಸಿದ್ಧತೆಯನ್ನು ಮಾಡಿದ್ದರು. ಭೂತಾಯಿಗೆ ಚರಗ ಚೆಲ್ಲಲು ಸಿಹಿಯಾದ ಹೋಳಿಗೆ, ಕರಿಗಡುಬು, ಕರ್ಚಿಕಾಯಿ, ಎಳ್ಳು ಹೋಳಿಗೆ, ವೈವಿಧ್ಯಮಯ ಪಲ್ಲೆ, ಚಟ್ನಿ ಪುಡಿ, ಕೆನೆಮೊಸರು, ತರಕಾರಿ, ಖಡಕ್ ಜೋಳದ ಮತ್ತು ಸಜ್ಜೆಯ ರೊಟ್ಟಿಯನ್ನು ತಯಾರಿಸಿ ದೊಡ್ಡದಾದ ಎಣ್ಣೆಯ ಬುಟ್ಟಿಯಲ್ಲಿ ಚರಗದ ಬುತ್ತಿಯನ್ನು ಭರ್ತಿಮಾಡಿ ಬಿಳಿ ಬಟ್ಟೆಯಲ್ಲಿ ಸುತ್ತಲಾಗಿತ್ತು.

ಹೊಸ ಬಟ್ಟೆ, ಚಿನ್ನದ ಆಭರಣವನ್ನು ಧರಿಸಿಕೊಂಡು ಚಕ್ಕಡಿಯ ಮೂಲಕ ಹೊಲಕ್ಕೆ ತೆರಳಿದರು. ಈಗ ಚಕ್ಕಡಿಗಳು ಮಾಯವಾಗುತ್ತಿವದ್ದು, ಕಾರು, ಟ್ರಾಕ್ಟರ್, ಬೈಕ್, ಆಟೊ ಮೂಲಕ ಹೊಲಕ್ಕೆ ತೆರಳಿದರು. ಚೆರಗ ಚೆಲ್ಲಿದ ನಂತರ ಕುಟುಂಬದವರು, ನೆರೆಹೊರೆಯವರು ಮತ್ತು ಸ್ನೇಹಿತರು ಸಾಮೂಹಿಕವಾಗಿ ಊಟ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT