ಜಮಖಂಡಿ: ಉತ್ತರಭಾರತದ ಗಂಗಾ ನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿ ಈ ಭಾಗದ ರೈತರ ಜೀವನಾಡಿ ಕೃಷ್ಣೆಗೆ ಸೋಮವಾರ ರಾತ್ರಿ ಇದೇ ಮೊದಲ ಬಾರಿಗೆ ಸಂಭ್ರಮದಿಂದ ಕೃಷ್ಣಾರತಿ ಜರುಗಿತು. ಕೃಷ್ಣಾ ತೀರದ ರೈತರು ಹಾಗೂ ವಿವಿಧ ಕಡೆಗಳಿಂದ ಬಂದ ಸಾವಿರಾರು ಜನರು ಕಣ್ತುಂಬಿಕೊಂಡರು.
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ ಹತ್ತಿರ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಮಾಜಿ ಸಚಿವ ಮುರುಗೇಶ ನಿರಾಣಿ 59ನೇ ಜನ್ಮದಿನದ ಪ್ರಯುಕ್ತ ಸೋಮವಾರ ಕೃಷ್ಣ ಜನ್ಮಾಷ್ಟಮಿಯಂದು ವಾರಣಾಸಿಯ ಗಂಗಾರತಿ ತಂಡ ಹಾಗೂ ನಂಜನಗೂಡಿನಲ್ಲಿ ಕಾವೇರಿ ಆರತಿ ನಡೆಸುವ ಯುವ ಬ್ರಿಗೇಡ್ ತಂಡಗಳಿಂದ ಎರಡು ಗಂಟೆಗಳ ಕಾಲ ಆರತಿ ಪೂಜೆ ನಡೆಯಿತು.
ಒಂದು ತಂಡ ನದಿ ಪಕ್ಕದ ವೇದಿಕೆಯ ಮೇಲೆ ಕೃಷ್ಣಾರತಿ ಮಾಡಿದರೆ ಇನ್ನೊಂದು ತಂಡ ನದಿಯಲ್ಲಿ ಬೋಟ್ ನಿಲ್ಲಿಸಿ ಬೋಟ್‌ನಲ್ಲಿ ಕೃಷ್ಣಾರತಿ ಮಾಡಿತು. ಹಿಪ್ಪರಗಿ ಬ್ಯಾರೇಜ್ ಹಾಗೂ ನದಿ ಪಕ್ಕದಲ್ಲಿ ದೀಪಾಲಂಕಾರ ಮಾಡಿ ಸಿಂಗರಿಸಿದ್ದರು.
ವಾರಣಾಸಿಯಿಂದ ಬಂದಿದ್ದ ಆಚಾರ್ಯ ರನದೀಪ, ಪಂಡಿತರಾದ ಅಮೀತ ಪಾಂಡೆ, ಸತ್ಯಂ ಮಿಶ್ರಾ, ಗೋವಿಂದ ತೀವಾರಿ, ಪ್ರಿನ್ಸ್ ಮಿಶ್ರಾ, ಹನುಮಾನಜೀ ಅವರು ಪೂಜೆಯ ಮುನ್ನ ಶಂಖನಾದದೊಂದಿಗೆ ಆರಂಭಿಸಿದ ಕೃಷ್ಣಾರತಿಗೆ ನೆರೆದ ಜನತೆ ಭಕ್ತಿಯಿಂದ ನಮಿಸಿದರು.
ಕಂಕಣವಾಡಿ, ಮೈಗೂರ, ಮುತ್ತೂರ ಗ್ರಾಮದಿಂದ ತರಿಸಿರುವ ಐದು ಬೋಟ್‌ಗಳಲ್ಲಿ ಶ್ರೀಗಳು, ಪಂಡಿತರು, ಅರ್ಚಕರು, ಮಹಿಳೆಯರು ಹಾಗೂ ಗಣ್ಯರ ನೇತೃತ್ವದಲ್ಲಿ ಎಂ.ಆರ್.ಎನ್. ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ನದಿಯಲ್ಲಿ ಹೋಗಿ ಪೂರ್ವಾಭಿಮುಖವಾಗಿ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ವಿವಿಧ ಗ್ರಾಮಳಿಂದ ಮಹಿಳೆಯರು ಆರತಿಯೊಂದಿಗೆ ಬಂದು ನದಿಗೆ ಆರತಿ ಮಾಡಿ ಪರಸ್ಪರ ಉಡಿ ತುಂಬಿದೆಉ. ಹೋಳಿಗೆ ಸಮೇತ ವಿವಿಧ ಸಿಹಿ ಪದಾರ್ಥಗಳನ್ನು ನದಿಗೆ ಅರ್ಪಿಸಿದರು. ಕಲಾತಂಡದವರಿಂದ ಭರತನಾಟ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆದವು.
ಗಂಗಾರತಿ ಮಾದರಿಯಲ್ಲಿ ಪ್ರತಿ ವರ್ಷ ಕೃಷ್ಣಾರತಿಯನ್ನು ಇನ್ನೂ ಅದ್ದೂರಿಯಾಗಿ ಮಾಡಲು ಕೃಷ್ಣಾರತಿ ಸೇವಾ ಸಮಿತಿಯನ್ನು ಅಧಿಕೃತವಾಗಿ ರಚಿಸಿ ಅದಕ್ಕೆ ರೈತರೇ ದೇಣಿಗೆ ನೀಡಲು ನಿರ್ಧರಿಸಿದರು. ರೈತ ಸೋಮನಾಥಗೌಡ ಪಾಟೀಲ ₹ 50 ಸಾವಿರ ದೇಣಿಗೆ ನೀಡಿದರು.
ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ತೇರದಾಳ ಶಾಸಕ ಸಿದ್ದು ಸವದಿ, ಆಲಗೂರ ಪಂಚಮಸಾಲಿ ಪೀಠದ ಮಹಾದೇವ ಶಿವಾಚಾರ್ಯ ಶ್ರೀ, ಹುಕ್ಕೇರಿ ಚಂದ್ರಶೇಖರ ಶ್ರೀ, ನೀಡಸೋಸಿ ನಿಜಲಿಂಗೇಶ್ವರ ಶ್ರೀ, ಬನಹಟ್ಟಿಯ ಶರಣ ಬಸವ ಶಿವಾಚಾರ್ಯ ಶ್ರೀ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಹುಲ್ಯಾಳ ಹರ್ಷಾನಂದ ಶ್ರೀ, ಪಿ.ಎನ್. ಪಾಟೀಲ, ಸಿ.ಪಿ. ಜನವಾಡ ಲಕ್ಷ್ಮಣ ನಿರಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.