ಮಲಪ್ರಭಾ ನದಿಗೆ 1 ಟಿಎಂಸಿ ಅಡಿ ನೀರು

5
ಬಾದಾಮಿ, ಹುನಗುಂದ ತಾಲ್ಲೂಕುಗಳ ಬಾಯಾರಿಕೆ ನೀಗಿಸಲು ಕ್ರಮ

ಮಲಪ್ರಭಾ ನದಿಗೆ 1 ಟಿಎಂಸಿ ಅಡಿ ನೀರು

Published:
Updated:

ಬಾಗಲಕೋಟೆ: ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳ 98 ಗ್ರಾಮಗಳ ಜನ–ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 1 ಟಿಎಂಸಿ ಅಡಿ ನೀರು ಹರಿಸುವಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಶನಿವಾರ ಆದೇಶಿಸಿದ್ದಾರೆ.

ಎರಡೂ ತಾಲ್ಲೂಕುಗಳ ಮಲಪ್ರಭಾ ನದಿ ಪಾತ್ರದಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ನದಿಯಲ್ಲಿ ನೀರು ಇಲ್ಲದೇ ಜನ–ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ನದಿಗೆ ನೀರು ಹರಿಸುವಂತೆ ಬಾದಾಮಿ ಶಾಸಕ ಸಿದ್ದರಾಮಯ್ಯ ಮುಂಜಾನೆ ಪ್ರಾದೇಶಿಕ ಆಯುಕ್ತರಿಗೆ ಕರೆ ಮಾಡಿ ಮನವಿ ಮಾಡಿದ್ದರು. ಜೊತೆಗೆ ನದಿಗೆ ನೀರು ಹರಿಸುವ ಅನಿವಾರ್ಯತೆ ಬಗ್ಗೆ ಬಾಗಲಕೋಟೆ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ವರದಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ನವಿಲುತೀರ್ಥ ಜಲಾಶಯದಲ್ಲಿ ಸದ್ಯ 3.125 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅದರಲ್ಲಿ ಪ್ರತಿ ದಿನ ಒಂದು ಸಾವಿರ ಕ್ಯುಸೆಕ್ಸ್‌ನಂತೆ ಜುಲೈ 7ರ ಸಂಜೆ 6 ಗಂಟೆಯಿಂದ 11 ದಿನಗಳ ಕಾಲ ನೀರು ಹರಿಸುವಂತೆ ಸೂಚಿಸಿದ್ದಾರೆ.

ಜೊತೆಗೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ ಮಲಪ್ರಭಾ ನದಿಯಿಂದ ಮೂರು ಬಹುಗ್ರಾಮ ಯೋಜನೆಗಳಡಿ 58 ಗ್ರಾಮಗಳ ಜನ–ಜಾನುವಾರುಗಳಿಗೆ ಕುಡಿಯವ ಉದ್ದೇಶಕ್ಕಾಗಿ ನೀರಿನ ಅಗತ್ಯತೆಯನ್ನು ಮನಗಂಡು ಅಲ್ಲಿನ ಜಿಲ್ಲಾಧಿಕಾರಿ ಮಾಡಿದ ಮನವಿ ಪರಿಗಣಿಸಿ ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ನದಿಗೆ ಹರಿಸುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸದಂತೆ, ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವಂತೆ ಸೂಚಿಸಲಾಗಿದೆ. ನೀರಿನ ದುರ್ಬಳಕೆ ತಡೆಯಲು ಪೊಲೀಸ್‌, ನೀರಾವರಿ, ಕಂದಾಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ತಂಡ ರಚಿಸಿ ದಿನದ 24 ಗಂಟೆಯೂ ನಿಗಾ ವಹಿಸುವಂತೆ ಹೇಳಿದ್ದಾರೆ.

ನದಿಗುಂಟ ಅಳವಡಿಸಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಆ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆಯುವಂತೆ ಪ್ರಾದೇಶಿಕ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !