ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಸೇರದ ₹2.11 ಕೋಟಿ ತೆರಿಗೆ ಹಣ

ಕರ ನೀಡದ್ದರಿಂದ ಹಲವಾರು ಕಾರ್ಯಗಳು ಮಂದಗತಿ
Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಸಾರ್ವಜನಿಕರಜ್ಞಾನದೇಗುಲಗಳಾಗಿರುವ ಗ್ರಂಥಾಲಯಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಬರಬೇಕಾದ ಗ್ರಂಥಾಲಯ ಕರ ಬಾರದ್ದರಿಂದ ಅಲ್ಲಿ ಕೈಗೊಳ್ಳಬೇಕಾದ ವಿವಿಧ ಕಾರ್ಯಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ.

ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ವಿಧಿಸುವ ತೆರಿಗೆಯಲ್ಲಿ ಶೇ 6ರಷ್ಟನ್ನು ಗ್ರಂಥಾಲಯ ಕರ ಎಂದೇ ಸಂಗ್ರಹಿಸಲಾಗುತ್ತದೆ. ಆದರೆ, ಹೀಗೆ ಸಂಗ್ರಹಿಸಿದ ₹2.11 ಕೋಟಿ ಮೊತ್ತವನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿವೆ.

ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಸಂಗ್ರಹಿಸಿದ ತೆರಿಗೆಯಲ್ಲಿನ ಗ್ರಂಥಾಲಯ ಕರದ ಮೊತ್ತವನ್ನು ಗ್ರಂಥಾಲಯ ಇಲಾಖೆಗೆ ಪಾವತಿಸಬೇಕು. ಅದನ್ನು ಸರಿಯಾಗಿ ಪಾವತಿಸಿದ್ದರಿಂದಾಗಿ ಗ್ರಂಥಾಲಯಗಳ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ.

ಜಮಖಂಡಿ ನಗರಸಭೆ ₹14.67 ಲಕ್ಷ, ಮುಧೋಳ ನಗರಸಭೆ ₹53.37 ಲಕ್ಷ, ರಬಕವಿ ಬನಹಟ್ಟಿ ನಗರಸಭೆ ₹30.54 ಲಕ್ಷ ಬಾಕಿ ಉಳಿಸಿಕೊಂಡಿವೆ. ಬಾಗಲಕೋಟೆ ಹಾಗೂ ಇಳಕಲ್‌ ನಗರಸಭೆಯು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂಬುದು ಗಮನಾರ್ಹ.

ಬಾದಾಮಿ ಪುರಸಭೆ ₹32.78 ಲಕ್ಷ, ಗುಳೇದಗುಡ್ಡ ₹32.19 ಲಕ್ಷ, ತೇರದಾಳ ₹14.10 ಲಕ್ಷ, ಮಹಾಲಿಂಗಪುರ ₹20.70 ಲಕ್ಷ ಬಾಕಿ ಉಳಿಸಿಕೊಂಡಿವೆ.

ಅಮೀನಗಡ ಪಟ್ಟಣ ಪಂಚಾಯಿತಿ ₹0.93 ಲಕ್ಷ, ಬೆಳಗಲಿ ₹1.08 ಲಕ್ಷ, ಹುನಗುಂದ ₹1.68 ಲಕ್ಷ, ಕೆರೂರ ₹2.05 ಲಕ್ಷ, ಲೋಕಾಪುರ ₹2.72, ಶಿರೂರ ₹0.24 ಲಕ್ಷ ಪಾವತಿಸಬೇಕಾಗಿದೆ. ಕಮತಗಿ ಪಟ್ಟಣ ಪಂಚಾಯಿತಿ ಯಾವುದೇ ಬಾಕಿ ಉಳಿಸಿಕೊಂಡಿಲ್ಲ.

ಸ್ಥಳೀಯ ಸಂಸ್ಥೆಗಳು ನೀಡುವ ಹಣವನ್ನು ಸಾಮಾನ್ಯವಾಗಿ ಪುಸ್ತಕ ಖರೀದಿ, ಸ್ಟೇಷನರಿ, ಕಟ್ಟಡಗಳ ನಿರ್ವಹಣೆ ಹಾಗೂ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಕೆಲಸಗಾರರ ಗೌರವ ಧನ ನೀಡುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ, ಸಂಸ್ಥೆಗಳು ಹಣ ಪಾವತಿಸದ ಕಾರಣ ಹಣಕಾಸಿನ ಕೊರತೆ ಎದುರಿಸುತ್ತಿವೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಾಕಷ್ಟು ವಿದ್ಯಾರ್ಥಿಗಳು ಗ್ರಂಥಾಲಯಗಳನ್ನೇ ಅವಲಂಬಿಸಿದ್ದಾರೆ. ಅನುದಾನದ ಕೊರತೆಯಿಂದಾಗಿ ಕೆಲವು ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಯಮಿತವಾಗಿ ಹಣ ಬಿಡುಗಡೆಯಾದರೆ ಈ ತೊಂದರೆ ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT