ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 24 ಗಂಟೆಗಳ ಟ್ರೆಡ್ ಮಿಲ್ ಓಟ ಆರಂಭ!

ಬಾಗಲಕೋಟೆ ಹಾಫ್ ಮ್ಯಾರಥಾನ್ ಹಿನ್ನೆಲೆ: ದೆಹಲಿಯ ಅರುಣ್ ಭಾರದ್ವಾಜ್ ಸಾಹಸ
Last Updated 28 ನವೆಂಬರ್ 2019, 15:22 IST
ಅಕ್ಷರ ಗಾತ್ರ

ಬಾಗಲಕೋಟೆ: ಮೈದಾನದಲ್ಲಿ ಅಥವಾ ಜಿಮ್‌ನ ಟ್ರೆಡ್‌ಮಿಲ್‌ ಮೇಲೆ 10 ನಿಮಿಷ ಓಡಿದರೂ ಏದುಸಿರು ಬಿಡುವವರನ್ನು ನಾವು ಕಾಣುತ್ತೇವೆ. ಆದರೆ ದೆಹಲಿಯ ಅರುಣ್ ಭಾರದ್ವಾಜ್ ಸತತ 24 ಗಂಟೆ ಕಾಲ ಟ್ರೆಡ್‌ಮಿಲ್‌ ಮೇಲೆ ಓಟ ಆರಂಭಿಸಿದ್ದಾರೆ!

ಬಾಗಲಕೋಟೆ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಹಾಕಿರುವ ವೇದಿಕೆಯಲ್ಲಿ ಅರುಣ್ ಗುರುವಾರ ಸಂಜೆ 7 ಗಂಟೆಗೆ ಓಟ ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಇದೇ ಹೊತ್ತಿಗೆ ಪೂರ್ಣಗೊಳಿಸಲಿದ್ದಾರೆ.

ಅರುಣ್ ಭಾರದ್ವಾಜ್ ದೆಹಲಿಯ ರಕ್ಷಣಾ ಸಚಿವಾಲಯದಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. 53 ವರ್ಷದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಟ್ರಾ ಮ್ಯಾರಥಾನ್ ಸ್ಪರ್ಧಿಯಾಗಿಯೂ ಹೆಸರು ಮಾಡಿದ್ದಾರೆ.

ಬಾಗಲಕೋಟೆಯ ರಿಯಲ್ ಸ್ಫೋರ್ಟ್ಸ್ ಅಸೋಸಿಯೇಷನ್ ರನ್ ಫಾರ್ ಹೆಲ್ತ್ ಅಂಡ್ ಚಾರಿಟಿ ಹೆಸರಿನಲ್ಲಿ ಡಿ. 1ರಂದು ಹಾಫ್ ಮ್ಯಾರಥಾನ್ ಹಮ್ಮಿಕೊಂಡಿದೆ. ಅದರ ಪ್ರಚಾರಾರ್ಥವಾಗಿ ಅರುಣ್ ಸುದೀರ್ಘ ಓಟ ಆರಂಭಿಸಿದ್ದಾರೆ.

ಓಟದ ಅವಧಿಯಲ್ಲಿ ತಿನಿಸು ಸೇವಿಸುವುದಿಲ್ಲ. ಬದಲಿಗೆ ಜ್ಯೂಸ್ ಮತ್ತು ನೀರು ಕುಡಿಯಲಿದ್ದಾರೆ. ಆಗಾಗ ಐದು ನಿಮಿಷಗಳಂತೆ 24 ಗಂಟೆಯ ಅವಧಿಯಲ್ಲಿ ಅರ್ಧ ತಾಸು ಮಾತ್ರ ಓಟ ನಿಲ್ಲಿಸಿ ಸುಧಾರಿಸಿಕೊಳ್ಳಲಿದ್ದಾರೆ ಎಂದು ರಿಯಲ್ ಸ್ಫೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ ಸುರಪುರಮಠ ’ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಬೆಂಗಳೂರಿನಲ್ಲಿ ಸತತ 24 ಗಂಟೆಗಳ ಅವಧಿಯ ಸ್ಟೇಡಿಯಂ ರನ್ ಮೂಲಕ ರಾಷ್ಟ್ರೀಯ ದಾಖಲೆಯನ್ನು ಅರುಣ್ ಮಾಡಿದ್ದಾರೆ. ತಮ್ಮ 43ನೇ ವಯಸ್ಸಿನಲ್ಲಿ ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೆ 4000 ಕಿ.ಮೀ ದೂರವನ್ನು 61 ದಿನಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

‘ತೈವಾನ್, ಆಸ್ಟ್ರೇಲಿಯಾ, ಅಮೆರಿಕ, ಡೆನ್ಮಾರ್ಕ್, ಮೆಕ್ಸಿಕೊ, ಜರ್ಮನಿ, ರಷ್ಯಾ, ಗ್ರೀಕ್‌, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಸೆರ್ಬಿಯಾ, ಹಂಗರಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಅಲ್ಟ್ರಾಮ್ಯಾರಥಾನ್‌ನಲ್ಲಿ ಅರುಣ್ ಪಾಲ್ಗೊಂಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT