ಬುಧವಾರ, ನವೆಂಬರ್ 25, 2020
26 °C

ಅಗಸನಕೊಪ್ಪ: ನಿಶ್ಚಿತಾರ್ಥಕ್ಕೆ ಹೊರಟಿದ್ದವರು ಮಸಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರೂರ: ಕೊಪ್ಪಳ ಜಿಲ್ಲೆ ಕುಕನೂರ ಬಳಿಯ ಹಿರೇ ಸಿಂಧೋಗಿ ಗ್ರಾಮಕ್ಕೆ ಮದುವೆ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ತೆರಳುತ್ತಿದ್ದ ಸಮೀಪದ ಅಗಸನಕೊಪ್ಪ ಗ್ರಾಮದ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದ್ದು ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಬೆಳಿಗ್ಗೆ 10 ಗಂಟೆ ಅಗಸನಕೊಪ್ಪದಿಂದ ಲಕ್ಸುರಿ ಟೆಂಪೊದಲ್ಲಿ ತೆರಳಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಟ್ಟಾಣಿ ಕ್ರಾಸ್ ಬಳಿ ಇವರ ವಾಹನಕ್ಕೆ ಅಡ್ಡಲಾಗಿ ಬಂದ ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಕಂದಕ ಬಿದ್ದು ಈ ಅವಘಡ ಸಂಭವಿಸಿದೆ.

ಅಗಸನಕೊಪ್ಪ ಗ್ರಾಮದ ಬಿಜೆಪಿ ಮುಖಂಡ, ಗ್ರಾಮ ಪಂಚಾಯ್ತಿ ಸದಸ್ಯ ಹನಮಂತ ಗೋಡಿ ಅವರ ತಾಯಿ ಭೀಮವ್ವ ಗೋಡಿ (70),  ರಂಗಪ್ಪ ನಾಗಣ್ಣವರ (78), ಶಿವಾನಂದ ನಾಗಪ್ಪ ಬಿಂಕದಕಟ್ಟಿ (60) ಮತ್ತು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಂಗಪ್ಪ ಮುಂಜಪ್ಪನವರ (50) ಮೃತಪಟ್ಟಿದ್ದಾರೆ. ಟೆಂಪೊದಲ್ಲಿದ್ದ ಇನ್ನಿತರ 10 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಜೀವಗಳೇ ಇನ್ನಿಲ್ಲ: ದಿನವಿಡೀ ಕೃಷಿ ಕಾಯಕದಲ್ಲಿ ತೊಡಗಿ, ಸಣ್ಣವರನ್ನು ಪ್ರೋತ್ಸಾಹಿಸುತ್ತ ಸಂತಸದಿಂದ ಜೀವನ ಸಾಗಿಸುತ್ತಿದ್ದ ಆ ನಾಲ್ವರು ಹಿರಿಯರನ್ನು ಕಳೆದುಕೊಂಡ ಅಗಸನಕೊಪ್ಪ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.

ತಮ್ಮರನ್ನು ಕಳೆದುಕೊಂಡ ಬಂಧು, ಬಾಂಧವರು, ಕುಟುಂಬದ ಜನರು ಬಾಯಿ ಬಡಿದುಕೊಂಡು ರೋದಿಸುತ್ತಿರುವುದು ಮನಕಲಕುವಂತಿತ್ತು. ಕುಟುಂಬಕ್ಕೆ ಹಿರಿಯರಾಗಿದ್ದ ಭೀಮವ್ವಳನ್ನು ಕಳೆದುಕೊಂಡ ಗೋಡಿ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.

ತಮ್ಮನ್ನು ಕಾಲೇಜು ಉಪನ್ಯಾಸಕರನ್ನಾಗಿ ಮಾಡಲು ಸಾಕಷ್ಟು ಕಷ್ಟಪಟ್ಟು, ಈಗಲೂ ವಿಶ್ರಮಿಸದೇ ಕೃಷಿಯಲ್ಲಿ ತೊಡಗುತ್ತಿದ್ದ ರಂಗಪ್ಪ ನಾಗಣ್ಣವರ ನಿಧನದಿಂದ ಗರ ಬಡಿದವರಂತೆ ಆಗಿದ್ದ ಅವರ ಪುತ್ರ, ಪದವಿ ಕಾಲೇಜು ಉಪನ್ಯಾಸಕ ಶಿವಾನಂದ ಅವರು, ‘ಇಷ್ಟು ವರ್ಷ ದುಡಿದ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಲು ಹೊಸ ಕಾರು ತಂದಿದ್ದೆ. ಆದರೂ ಬರಿಗಾಲಲ್ಲೇ ಅವರು ಸಂಚರಿಸುತ್ತಿದ್ದರು‘ ಎಂದು ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರಿಗೂ ಕಣ್ಣೀರು ತರಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು