ನಾಲ್ವರು ಅಂತರ ರಾಜ್ಯ ದರೋಡೆಕೋರರ ಬಂಧನ

7
ಕೆರೂರು: ಡಿ.ಸಿ.ಸಿ ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನದ ಪ್ರಕರಣ

ನಾಲ್ವರು ಅಂತರ ರಾಜ್ಯ ದರೋಡೆಕೋರರ ಬಂಧನ

Published:
Updated:

ಬಾಗಲಕೋಟೆ: ಬಾದಾಮಿ ತಾಲ್ಲೂಕು ಕೆರೂರಿನಲ್ಲಿ ಇತ್ತೀಚೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆಯಲ್ಲಿ ನಡೆದ ಕಳ್ಳತನ ಯತ್ನಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ನಗರದಲ್ಲಿ ಬುಧವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿಲೂ, ರಾಮ್‌ಬಹದ್ಧೂರ್, ಕರಿಸಿಂಗ್, ಕಿರಣ್  ಬಂಧಿತರು. ಎಲ್ಲರೂ ನೇಪಾಳದವರು. ಆದರೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಬಟಕುರ್ಕಿ ಕ್ರಾಸ್ ಬಳಿ ರಾತ್ರಿ ರಸ್ತೆಯ ಮೇಲೆ ಕಲ್ಲುಗಳನ್ನು ಅಡ್ಡಲಾಗಿಟ್ಟು ಕೆಲವರು ವಾಹನಗಳನ್ನು ತಡೆದು ದರೋಡೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅದನ್ನು ಆಧರಿಸಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೆರೂರಿನ ಡಿ.ಸಿ.ಸಿ ಬ್ಯಾಂಕ್ ಶಾಖೆಯ ಕಳ್ಳತನ ಪ್ರಯತ್ನದಲ್ಲಿ ಭಾಗಿಯಾಗಿರುವುದು ಬಯಲಾಗಿದೆ ಎಂದು ತಿಳಿಸಿದರು.

ಬಂಧಿತರ ಪೈಕಿ ಡಿಲೂ ಎಂಬಾತ 2016ರಲ್ಲಿ ಮುಂಬೈನ ಮಣಪ್ಪುರಂ ಗೋಲ್ಡ್‌ ಕಚೇರಿಯಲ್ಲಿ 28 ಕೆ.ಜಿ ಬಂಗಾರ ಕಳ್ಳತನ ಮಾಡಿದ್ದ ತಂಡದಲ್ಲಿ ಇದ್ದನು. ಕೆರೂರು ಬ್ಯಾಂಕ್‌ನಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಗೂ ಅಲಾರಾಂನ ಕೇಬಲ್ ಕತ್ತರಿಸಿ ಕಳ್ಳತನಕ್ಕೆ ಮುಂದಾಗಿದ್ದರು. ಆದರೆ ಟ್ರಜರಿ ಮುರಿಯಲು ಸಾಧ್ಯವಾಗದೇ ಮರಳಿದ್ದರು. ಅದೇ ದಿನ ಸಂಜೆ ಬ್ಯಾಂಕ್‌ನ ಹೊರಗೆ ನಿಂತಿದ್ದ ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ಕಾರಿನ ಚಿತ್ರವನ್ನು ಸ್ಥಳೀಯ ಠಾಣೆಯ ಕಾನ್‌ಸ್ಟೆಬಲ್ ತೆಗೆದಿದ್ದರು. ಆ ಸಂಖ್ಯೆಯ ವಿಳಾಸ ಆಧರಿಸಿ ಪೊಲೀಸರ ಒಂದು ತಂಡ ಅಲ್ಲಿಗೆ ತೆರಳಿತ್ತು. ಅದಕ್ಕೂ ಮುನ್ನ ಆರೋಪಿಗಳ ಬಂಧನವಾಗಿದೆ ಎಂದು ಹೇಳಿದರು.

ಆರೋಪಿಗಳು ನೇಪಾಳದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಗೂರ್ಖಾ ಒಬ್ಬರು ಆರೋಪಿಗಳಿಗೆ ನೆರವಾಗಿರುವ ಮಾಹಿತಿ ಇದೆ. ಅದನ್ನು ಪರಿಶೀಲಿಸುತ್ತಿದ್ದೇವೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !