‘ಪ್ರಭಾರಿ’ಗಳ ಕಾರುಬಾರು ಸಲ್ಲ: ಕೆಡಿ‍‍ಪಿ ಸಭೆಯಲ್ಲಿ ಸಚಿವರ ಗಮನ ಸೆಳೆದ ಚರಂತಿಮಠ 

7
ಕಾಯಂ ಅಧಿಕಾರಿಗಳ ನೇಮಿಸಿ, ಆಡಳಿತಕ್ಕೆ ಚುರುಕು ನೀಡಲು ಶಾಸಕರ ಒತ್ತಾಯ

‘ಪ್ರಭಾರಿ’ಗಳ ಕಾರುಬಾರು ಸಲ್ಲ: ಕೆಡಿ‍‍ಪಿ ಸಭೆಯಲ್ಲಿ ಸಚಿವರ ಗಮನ ಸೆಳೆದ ಚರಂತಿಮಠ 

Published:
Updated:

ಬಾಗಲಕೋಟೆ: ’ಜಿಲ್ಲೆಯ ಎಲ್ಲ ಇಲಾಖೆಗಳಲ್ಲೂ ‘ಪ್ರಭಾರಿ’ಗಳದ್ದೇ ಕಾರುಬಾರು ಆಗಿದೆ. ಕಾಯಂ ಅಧಿಕಾರಿಗಳು ಇಲ್ಲದೇ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ’ ಎಂದು ಶಾಸಕ ವೀರಣ್ಣ ಚರಂತಿಮಠ ಕೆಡಿ‍‍ಪಿ ಸಭೆಯಲ್ಲಿ ಸಚಿವರ ಗಮನ ಸೆಳೆದರು. ಅದಕ್ಕೆ ಶಾಸಕರಾದ ಸಿದ್ದು ಸವದಿ ಹಾಗೂ ದೊಡ್ಡನಗೌಡ ಪಾಟೀಲ ಕೂಡ ದನಿಗೂಡಿಸಿದರು.

’ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರವಲ್ಲದೇ ತಾಲ್ಲೂಕು ಮಟ್ಟದಲ್ಲೂ ಬರೀ ‘ಪ್ರಭಾರಿ’ಗಳೇ ತುಂಬಿದ್ದಾರೆ. ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಅಧಿಕಾರಿಗಳೇ ಇಲ್ಲದಂತಾಗಿದೆ. ಎಂಜಿನಿಯರಿಂಗ್ ವಿಭಾಗಗಳಲ್ಲೂ ಕಾರ್ಯಪಾಲಕ ಎಂಜಿನಿಯರ್ ಹುದ್ದೆಯ ಜವಾಬ್ದಾರಿಯನ್ನು ಸಹಾಯಕ ಎಂಜಿನಿಯರ್‌ಗೆ ಕೊಡಲಾಗಿದೆ. ಅವರು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಕೆಲಸ ವೇಗ ಪಡೆಯುತ್ತಿಲ್ಲ’ ಎಂದು ಶಾಸಕರು ಒಕ್ಕೊರಲಿನಿಂದ ದೂರಿದರು.

ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ಎಷ್ಟು ಹುದ್ದೆ ಖಾಲಿ ಇವೆ. ‘ಪ್ರಭಾರಿ’ ಎಷ್ಟು ಮಂದಿ ಇದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವ ಶಿವಾನಂದ ಪಾಟೀಲ, ನಂತರ ಕಾಯಂ ಅಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

’ಯುನಿಟ್ 2ರಲ್ಲಿ ನಿವೇಶನ ಪಡೆಯದ ಸಂತ್ರಸ್ತರಿಗೆ ಗಡುವು ನಿಗದಿ ಮಾಡಿರುವುದು ಸರಿಯಲ್ಲ’ ಎಂದು ಬಿಟಿಡಿಎ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ವೀರಣ್ಣ ಚರಂತಿಮಠ, ಕೂಡಲೇ ಆ ಆದೇಶ ಹಿಂದಕ್ಕೆ ಪಡೆಯುವಂತೆ ಹೇಳಿದರು. ಅದಕ್ಕೆ ಅಧಿಕಾರಿ ಸಮ್ಮತಿ ಸೂಚಿಸಿದರು.

ಐಸಿಸಿ ಸಭೆ ನಂತರ ಕರೆಯಿರಿ:

’ಘಟಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗೆ ನೀರು ಹರಿಸಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ಆದರೆ ಅದು ಸದ್ಯಕ್ಕೆ ಆಗದ ಮಾತು. ಅಷ್ಟೊಂದು ಸಮಯವೂ ಇಲ್ಲ. ಮೊದಲು ಕಾಲುವೆಗೆ ನೀರು ಹರಿಸಿ ನಂತರ ಅದಕ್ಕೆ ಐಸಿಸಿ ಒಪ್ಪಿಗೆ ಪಡೆಯಿರಿ’ ಎಂದು ಗೋವಿಂದ ಕಾರಜೋಳ ಸಲಹೆ ನೀಡಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !