ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಗುರ ಸಂಬಂಧಗಳಿಗೆ ಸಿಂಗಾರ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

‘ಉಂಗುರ‘ ಬಾಂಧವ್ಯ ಬೆಸೆಯುತ್ತದೆ, ನೆನಪುಗಳ ತೋರಣವಾಗಿ, ಪ್ರೀತಿಪಾತ್ರರ ಕಾಣಿಕೆಯಾಗಿ ನಮ್ಮ ಬೆರಳಿನೊಂದಿಗೆ ಬೆಸೆದುಕೊಳ್ಳುತ್ತದೆ.

ಬೆರಳಿಗೆ ಉಂಗುರ ತೊಡುವ ಪದ್ಧತಿ 2500 ವರ್ಷಗಳ ಹಿಂದೆಯೇ ಚಲಾವಣೆಗೆ ಬಂದಿದೆ. ಲೋಹ, ಪ್ಲಾಸ್ಟಿಕ್, ಕಲ್ಲು, ಕಟ್ಟಿಗೆ, ಮೂಳೆ, ಗಾಜು, ರತ್ನ, ವಜ್ರ, ಮಾಣಿಕ್ಯ, ನೀಲಮಣಿ ಅಥವಾ ಪಚ್ಚೆಯ ಉಂಗುರಗಳು ಇದೀಗ ಸರ್ವೇಸಾಮಾನ್ಯ.

ಮನೆಯಲ್ಲಿ ಪುಟ್ಟ ಪಾಪು ಹುಟ್ಟಿದ ಖುಷಿಗೆ ಅಜ್ಜ–ಅಜ್ಜಿ ತೊಡಿಸುವ ಮಮತೆಯ ಉಂಗುರ, ‘ಈ ಸಲ ನೀನು ಒಳ್ಳೆ ರಿಸಲ್ಟ್‌ನಲ್ಲಿ ಪಾಸಾದರೆ ಚಿನ್ನದ ಉಂಗುರ ಕೊಡಿಸುವೆ’ ಎಂದು ಪೋಷಕರು ಮಕ್ಕಳಿಗೆ ಕೊಡಿಸುವ ಖುಷಿಯ ಉಂಗುರ, ಪ್ರೀತಿಸುವವಳ ಕೋಪ ತಣಿಸಿ, ಒಲಿಸಿಕೊಳ್ಳಲು ಹುಡುಗ ತರುವ ಒಲವಿನುಂಗುರ ಜೀವಮಾನದಲ್ಲಿಯೇ ಮರೆಯುವಂಥದಲ್ಲ. ಎಲ್ಲ ಕಾಲಕ್ಕೂ, ಎಲ್ಲ ಸಂಬಂಧಗಳಿಗೂ ಮೆಚ್ಚಿ ಕೊಡಬಹುದಾದ ಸವಿನೆನಪಿನ ಕಾಣಿಕೆ, ಉಡುಗೊರೆ ಈ ಉಂಗುರ.

ಇತ್ತೀಚೆಗೆ ನಟ ನಟಿಯರು ನಿಶ್ವಿತಾರ್ಥ, ಮದುವೆ ಸಮಾರಂಭಗಳಲ್ಲಿ ತೊಡುವ ಭಾರಿ ಮೊತ್ತದ ಉಂಗುರಗಳು ಹುಬ್ಬೇರಿಸುವಂತೆ ಮಾಡುತ್ತವೆ. ಬಾಲಿವುಡ್ ನಟಿಯರು ವಿವಾಹವಾದಾಗ ಅವರಿಗೆ ಮೊದಲ ಪ್ರಶ್ನೆಯೆಂದರೆ ನಿಮಗೆ ಯಾವ ರಿಂಗ್ ಬಂತು ಎನ್ನುವುದು. ಉಂಗುರ ತೋರಿಸಿ ವಿವಾಹದ ಸವಿಸುದ್ದಿ ಹಂಚುವುದೂ ಒಂದು ಟ್ರಂಡ್ ಆಗಿಬಿಟ್ಟಿದೆ.

ನಟಿ ರಾಣಿ ಮುಖರ್ಜಿ ಪಾರ್ಟಿಯಲ್ಲಿ ಹಾಕಿಕೊಂಡ ರಿಂಗ್‌ನಿಂದಲೇ ಅವರ ವಿವಾಹದ ಬಗ್ಗೆ ಗುಲ್ಲೆದ್ದಿದ್ದು. ಫ್ಯಾಷನ್‌ಗೆ ಬಹಳ ಪ್ರಾಮುಖ್ಯತೆ ನೀಡುವ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ ಪತಿ ನೀಡಿದ್ದು ಬರೋಬ್ಬರಿ ₹3 ಕೋಟಿಯ ಉಂಗುರವನ್ನು. ತಾರೆ ಐಶ್ವರ್ಯಾ ರೈಗೆ ಹಾಕಲಾದ ಉಂಗುರವನ್ನು ವಿನ್ಯಾಸಗೊಳಿಸಿದ್ದು ಟಿನಾ ಅಂಬಾನಿ. ಅದರ ಬೆಲೆ ₹50 ಲಕ್ಷ. ವಿದ್ಯಾ ಬಾಲನ್ ಹಾಕಿದ ರಿಂಗ್ ಸಾಂಪ್ರದಾಯಿಕ ಟಚ್‌ನಿಂದಾಗಿ ಖ್ಯಾತವಾಯಿತು.

ಕನ್ನಡ ಚಿತ್ರರಂಗದ ಮುದ್ದಾದ ಜೋಡಿ  ಮೇಘನಾರಾಜ್‌ ಮತ್ತು ಚಿರಂಜೀವಿ ಸರ್ಜಾ ಇತ್ತೀಚೆಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟರು.  ನಿಶ್ಚಿತಾರ್ಥಕ್ಕೆ ಚಿರು ತಮ್ಮ ಕನಸಿನ ಕನ್ಯೆಗೆ 1,20,000 ಮೌಲ್ಯದ ಹರಳಿನುಂಗುರ ತೊಡಿಸಿದರೆ, ಮೇಘನಾ 3,00,000 ಬೆಲೆಯ ಉಂಗುರವನ್ನು ತೊಡಿಸುವ ಮೂಲಕ ತಮ್ಮ ಪ್ರೀತಿಯನ್ನು ಸಂಭ್ರಮಿಸಿದ್ದರು. ರಾಧಿಕಾ ಪಂಡಿತ್‌ ಮತ್ತು ಯಶ್‌, ರಕ್ಷಿತ್‌ ಶೆಟ್ಟಿ– ರಶ್ಮಿಕಾ ಮುಂತಾದ ಜೋಡಿಗಳು ಸಹ ಉಂಗುರ ಪ್ರೀತಿಯನ್ನು ಸಂಭ್ರಮಿಸಿವೆ.

ಸಂತಸ, ಪ್ರೀತಿಯನ್ನು ಇಮ್ಮಡಿಗೊಳಿಸಿ, ಪ್ರೀತಿಪಾತ್ರರಿಗೆ ಮರೆಯದ ಉಡುಗೆಯಾಗಿ ನೀಡಬಹುದಾದ ಕೆಲವು ಉಂಗುರಗಳ ಪರಿಚಯ ಇಲ್ಲಿದೆ.

ಸ್ಪ್ರಿಂಗ್‌ ಉಂಗುರ: ಸ್ಪ್ರಿಂಗ್ ಮಾದರಿಯ ಫಿಂಗರ್ ರಿಂಗ್‌ನ್ನು ತೋರು ಬೆರಳಿಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿರುತ್ತಾರೆ. ಉಳಿದೆಲ್ಲ ಬೆರಳುಗಳಿಗಿಂತ ಅಧಿಕ ಸುತ್ತುಗಳಿರುವ ಉಂಗುರಗಳ ವಿನ್ಯಾಸ ತೋರು ಬೆರಳಿಗೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಪಾರ್ಟಿಗಳಲ್ಲಿ ಈ ಬೆರಳಿಗೆ ಎರಡೆರಡು ಉಂಗುರಗಳನ್ನು ತೊಟ್ಟು ಬರುವುದೂ ಸಹ ಈಗಿನ ಟ್ರೆಂಡ್.

ಸಿಂಗಲ್‌ ಸ್ಟೋನ್‌ ಉಂಗುರ: ಕಾಲೇಜು ಯುವತಿಯರಿಗೆ ಪುಟ್ಟ ಪುಟ್ಟ ಬಿಳಿ ಹರಳಿನ ನಾಜೂಕು ವಿನ್ಯಾಸದ ಉಂಗುರ ಬೆರಳಿಗೆ ಹೊಸ ಲುಕ್ ನೀಡುತ್ತದೆ. ಭಾರ ಇಷ್ಟಪಡದ ಹುಡುಗಿಯರಿಗೆ, ಇಂತಹ ಉಂಗುರಗಳನ್ನು ಹುಡುಗರು ಉಡುಗೊರೆಯಾಗಿ ನೀಡಿದರೆ ಹುಡುಗಿಯರು ಸುಲಭವಾಗಿ ಪ್ರೇಮ ನಿವೇದನೆಗಳನ್ನು ಒಪ್ಪಿಕೊಳ್ಳಲೂಬಹುದು. 

ಮಲ್ಟಿಸ್ಟೋನ್‌ ಉಂಗುರ: ಮದುವೆ, ಶುಭ–ಸಮಾರಂಭಗಳಿಗೆ ಮಲ್ಟಿಸ್ಟೋನ್‌ ಮತ್ತು ಬಣ್ಣ ಬಣ್ಣದ ಹರಳಿನ ಉಂಗುರಗಳನ್ನು ಆಯ್ದುಕೊಳ್ಳಬಹುದು. ಹೂ, ಬಳ್ಳಿಗಳ ಚಿತ್ತಾರವಿರುವ, ಬದಾಮ್, ಅಲ್ಫಾಬೆಟಿಕ್ ಮಾದರಿಯ ಉಗುಂರಗಳು, ಚಿನ್ನ ಬೆಳ್ಳಿ ಮಿಶ್ರಿತ ಉಂಗುರಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

ಗೊಂಬೆ ಮಾದರಿಯ ಉಂಗುರಗಳು: ಪುಟಾಣಿ ಮಕ್ಕಳಿಗೆ ಉಡುಗೊರೆಯಾಗಿ ಕೊಡುವುದಾದರೆ ಪುಟ್ಟ ಪುಟ್ಟ, ಬಣ್ಣ ಬಣ್ಣದ ಗೊಂಬೆಗಳಿರುವ ಉಂಗುರಗಳ ಆಯ್ಕೆ ಸೂಕ್ತ. ಮಕ್ಕಳ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲದೇ, ಬಹುಕಾಲದವರೆಗೂ ಮಕ್ಕಳು ನಿಮ್ಮ ಉಡುಗೊರೆಯನ್ನು ನೆಪಿನಲ್ಲಿಕೊಟ್ಟುಕೊಳ್ಳುತ್ತವೆ.

ಸರಳವಾದ ಉಂಗುರ: ಪ್ರೀತಿಪಾತ್ರರಿಗೆ, ಗೆಳೆಯ, ಗೆಳತಿಯರಿಗೆ, ಅಪ್ಪ–ಅಮ್ಮ, ಸ್ನೇಹಿತರು ಹೀಗೆ ಸಂಬಂಧಿಕರಿಗೆ ಸಿಂಪಲ್ ಸ್ಟೋನ್‌, ಮುತ್ತಿನ, ಉಂಗುರಗಳನ್ನು ಉಡುಗೊರೆಯಾಗಿ ಕೊಡ‌ಬಹುದು.

ಹೆಚ್ಚು ಬಿಕರಿಯಾಗುವ ವಿನ್ಯಾಸಗಳು
ಸ್ಪ್ರಿಂಗ್‌ ಉಂಗುರ:
ಸ್ಪ್ರಿಂಗ್ ಮಾದರಿಯ ಲೇಯರ್‌ ಉಂಗುರವನ್ನು ತೋರು ಬೆರಳಿಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿರುತ್ತಾರೆ. ಉಳಿದೆಲ್ಲ ಬೆರಳುಗಳಿಗಿಂತ ಅಧಿಕ ಸುತ್ತುಗಳಿರುವ ಉಂಗುರಗಳ ವಿನ್ಯಾಸ ತೋರುಬೆರಳಿಗೆ ಹೆಚ್ಚು ಒಪ್ಪುತ್ತದೆ. ನಾಲ್ಕನೇ ಬೆರಳಿಗೂ ಇದು ಹೊಂದುತ್ತದೆ. ಒಂದೇ ಬೆರಳಿಗೆ ಎರಡು ಲೇಯರ್‌ ಉಂಗುರ ಧರಿಸಿ ಇಡೀ ಬೆರಳನ್ನೇ ಮುಚ್ಚಿಬಿಡುವ ಶೋಕಿ ಈಗ ಹೆಚ್ಚಾಗಿದೆ. ಬೆರಳಿನಷ್ಟೇ ಉದ್ದದ ಉಂಗುರಗಳೂ ಈಗ ಹೆಚ್ಚು ಚಾಲ್ತಿಯಲ್ಲಿವೆ.

ಒಂಟಿ ಹರಳಿನ ಉಂಗುರ: ಒಂಟಿ ಹರಳಿನ ಉಂಗುರ ಹರೆಯದ ಯುವತಿಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚು ಆಪ್ತವಾಗುತ್ತವೆ. ಆಡಂಬರವಿಲ್ಲದೆ, ಆಭರಣ ಧರಿಸುವ ಖುಷಿಯನ್ನು ಅನುಭವಿಸಲು ಕಡಿಮೆ ತೂಕದ ‘ಲೈಟ್‌ ವೆಯ್ಟ್‌’ ಉಂಗುರಗಳೇ ಸೂಕ್ತ.

ಮಲ್ಟಿಸ್ಟೋನ್‌ ಉಂಗುರ: ಮದುವೆ, ಶುಭ ಸಮಾರಂಭಗಳಿಗೆ ಮಲ್ಟಿಸ್ಟೋನ್‌ ಮತ್ತು ಬಣ್ಣ ಬಣ್ಣದ ಹರಳಿನ ಉಂಗುರಗಳನ್ನು ಆಯ್ದುಕೊಳ್ಳಬಹುದು. ಹೂ, ಬಳ್ಳಿಗಳ ಚಿತ್ತಾರವಿರುವ, ಬದಾಮ್, ಅಲ್ಫಾಬೆಟಿಕ್ ಮಾದರಿಯ ಉಂಗುರಗಳು, ಚಿನ್ನ ಬೆಳ್ಳಿ ಮಿಶ್ರಿತ ಮಲ್ಟಿಮೆಟಲ್‌ ಉಂಗುರಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

ಗೊಂಬೆ ಮಾದರಿಯ ಉಂಗುರಗಳು: ಪುಟಾಣಿಗಳಿಗೆ ಉಡುಗೊರೆಯಾಗಿ ಕೊಡುವುದಾದರೆ ಪುಟ್ಟ ಪುಟ್ಟ, ಬಣ್ಣ ಬಣ್ಣದ ಗೊಂಬೆಗಳಿರುವ ಉಂಗುರಗಳ ಆಯ್ಕೆ ಸೂಕ್ತ. ಮಕ್ಕಳ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲದೆ ಬಹುಕಾಲದವರೆಗೂ ಅವರು ನೆನಪಿನಲ್ಲಿಕೊಟ್ಟುಕೊಳ್ಳಬಹುದಾದ ಉಡುಗೊರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT