ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಬೇಗೆಗೆ ಬಸವಳಿದ ವಿಜಯಪುರ ಜನ

40 ಡಿಗ್ರಿ ಸೆಲ್ಷಿಯಸ್‌ ದಾಟಿದ ಗರಿಷ್ಠ ತಾಪಮಾನ; ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚುವ ಆತಂಕ
Last Updated 26 ಏಪ್ರಿಲ್ 2018, 14:01 IST
ಅಕ್ಷರ ಗಾತ್ರ

ವಿಜಯಪುರ: ಏಪ್ರಿಲ್‌ ಅಂತ್ಯದಲ್ಲೇ ಬಿಸಿಲ ಝಳ ಹೆಚ್ಚಿದೆ. ಬೆಳಿಗ್ಗೆ ಒಂಬತ್ತು ಗಂಟೆ ಆಸುಪಾಸಿಗೆ ಸೂರ್ಯ ಕಿರಣಗಳು ಕೆಂಡ ಕಾರುವಂತಹ ಅನುಭವ. ಮುಸ್ಸಂಜೆವರೆಗೆ ಮನೆಯಿಂದ ಹೊರಗೆ ಇಣುಕಲು ಸಾಧ್ಯವಿಲ್ಲದಂತಹ ವಾತಾವರಣ.

ಮನೆಯೊಳಗಿದ್ದರೆ ಬಿಸಿಯ ದ್ವೀಪದ ಅನುಭವ. ನೆಲಕ್ಕೆ ಕಾಲಿಟ್ಟರೂ ತಟ್ಟುವ ತಾಪ. ವಸ್ತುವೊಂದನ್ನು ಮುಟ್ಟಿದರೂ ಬಿಸಿಯ ಸ್ಪರ್ಶ. ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವೇ ಇಲ್ಲ. ಆಗಾಗ್ಗೆ ಬೀಸುವ ಬಿಸಿ ಗಾಳಿ ಉತ್ಸಾಹವನ್ನೇ ಬತ್ತಿಸುತ್ತಿದೆ.

ಬಿಸಿಲಿನ ಪ್ರಖರತೆ, ಬಿಸಿ ಗಾಳಿಗೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಭೂಮಿ ಕಾದ ಕಾವಲಿಯಂತಾಗಿದೆ. ರಾತ್ರಿಯಿಡಿ ಕಾವನ್ನು ಹೊರ ಉಗುಳುತ್ತಿದೆ. ಇದು ಬಿಸಿ ಗಾಳಿಯಾಗಿ ಪರಿವರ್ತನೆಗೊಂಡು, ಉಸಿರಾಟವೂ ಕಷ್ಟ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ.

‘ಬಿಸಿಲು ಭಾಳಾ ಆಗೈತ್ರಿ. ನಸುಕಿನಲ್ಲಿ ಲಗೂನೆ ಬೆಳಕಾಗತೈತಿ. ಮುಂಜಾನೆಯೇ ಬಹುತೇಕ ಕೆಲಸ ಮುಗ್ಸಿಕೊಳ್ತೀವಿ. ಮಧ್ಯಾಹ್ನದ ಅಡುಗೆನೂ ಮಾಡಿಟ್ಟು ಕೊಳ್ತೀವಿ. ಇನ್ನ ಉರಿಯೋ ಒಲೆ ಮುಂದಕ್ಕ ಹೋಗೋದು ರಾತ್ರಿಗ. ಎಷ್ಟ್‌ ನೀರ್‌ ಕುಡುದ್ರೂ ದಾಹ ಇಂಗಲ್ಲ. ಮಧ್ಯಾಹ್ನದ ವೇಳೆ ಸ್ವಲ್ಪ ದೂರ ಅನಿವಾರ್ಯವಾಗಿ ಹೊರ ಬೀಳಬೇಕು ಅಂದ್ರೂ ಆಗ್ತಿಲ್ಲ. ಕೆಲವೊಮ್ಮೆ ಹೋದಾಗ ತಲೆ ಸುತ್ತಿ ಬಿದ್ದೀನಿ. ವಾಂತಿಯೂ ಆಗೈತಿ. ದವಾಖಾನೆಗಳಲ್ಲಿ ಜನರ ಪಾಳಿ ಹಚ್ಚೈತ್ರೀ. ಕೆಟ್ಟ್‌ ಬಿಸಿಲು ಹೈರಾಣ ಮಾಡಿತ್ರೀ’ ಎಂದು ವೃದ್ಧೆ ಚಂದ್ರಭಾಗ ಸಾಳುಂಕೆ ತಿಳಿಸಿದರು.

‘ಬಿಸಿಲ ಝಳಕ್ಕೆ ಒಂದೂಕಾಲು ವರ್ಷದ ನನ್ನ ಕೂಸು ತತ್ತರಿಸಿದೆ. ರಾತ್ರಿಯಿಡೀ ನಿದ್ದೆಯಿಲ್ಲದೆ ಹಾಸಿಗೆಯಲ್ಲಿ ಹೊರಳಾಡುತ್ತದೆ. ಎರಡ್ಮೂರು ಬಾರಿ ನೀರು ಕುಡಿಸಿದರೆ ಸಮಾಧಾನವಾಗುತ್ತೆ. ಯಾವಾಗಲೂ ಎಚ್ಚರಗೊಳ್ಳದ ದೊಡ್ಡ ಮಗಳು ಸಹ ಆಗಾಗ್ಗೆ ಎಚ್ಚರಗೊಂಡು ನೀರು ಬೇಡುತ್ತಾಳೆ. ಇನ್ನೂ ಒಂದೂವರೆ ತಿಂಗಳು ಹೇಗೆ ನಿಭಾಯಿಸಬೇಕು ಎಂಬುದೇ ಅರಿವಾಗದಾಗಿದೆ’ ಎನ್ನುತ್ತಾರೆ ಗೃಹಿಣಿ ಲಕ್ಷ್ಮೀ.

‘ಎಷ್ಟೇ ಅನಿವಾರ್ಯದ ಕೆಲಸ ಬಂದರೂ ಬೆಳಿಗ್ಗೆ 11 ಗಂಟೆಯೊಳಗೆ ಮುಗಿಸಿಕೊಳ್ಳಲು ಯತ್ನಿಸುವೆ. ಸಂಜೆ 5, 6 ಗಂಟೆವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತೇವೆ. ಬಿಸಿಲ ಧಗೆಯ ದಾಹ ತೀರಿಸಿಕೊಳ್ಳಲು ಹೆಚ್ಚು ಹೆಚ್ಚು ತಂಪಿನ ನೀರು ಕುಡಿಯುತ್ತಿದ್ದೇವೆ’ ಎನ್ನುತ್ತಾರೆ ವಿಜಯಪುರದ ಮಹೇಶ ಚಟ್ಟೇರ, ಎಸ್‌.ಬಿ.ಪಾಟೀಲ.

ಬಿಸಿಲು ಹೆಚ್ಚಳದ ಭೀತಿ

‘ಮೇ ತಿಂಗಳ ಎರಡನೇ ವಾರದ ಬಳಿಕ ಇರುವಂತಹ ಬಿಸಿಲು ಈಗಲೇ ಜಿಲ್ಲೆಯಲ್ಲಿದೆ. ಹಿಂದಿನ ವರ್ಷ ಮಳೆ ಕಡಿಮೆಯಾಗಿದ್ದರಿಂದ ಬಿಸಿಲ ಝಳ ಹೆಚ್ಚಿದೆ. ಮಳೆ ಸುರಿಯದಿದ್ದರೆ ಇನ್ನಷ್ಟು ಹೆಚ್ಚಲಿದೆ. ಪ್ರಸ್ತುತ ನಮ್ಮ ಹವಾಮಾನ ಕೇಂದ್ರದಲ್ಲಿ ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿದೆ’ ಎಂದು ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದ ತಾಂತ್ರಿಕ ಅಧಿಕಾರಿ ಶಂಕರ ಕುಲಕರ್ಣಿ ತಿಳಿಸಿದರು.

‘ನಮ್ಮ ಹವಾಮಾನ ಮುನ್ಸೂಚನಾ ಕೇಂದ್ರ ನಗರದ ಹೊರ ವಲಯದಲ್ಲಿದೆ. ಇಲ್ಲಿನ ವಾತಾವರಣದ ಜತೆಗೆ ಹೊರಗಿನ ವಾತಾವರಣ ಹೋಲಿಸಿದರೆ ಕೊಂಚ ವ್ಯತ್ಯಾಸ ಕಂಡು ಬರಲಿದೆ. ನಗರ, ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಅಲ್ಲಿನ ತಾಪಮಾನ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಕನಿಷ್ಠ 1ರಿಂದ 2 ಡಿಗ್ರಿ ಸೆಲ್ಷಿಯಸ್‌ ಹೆಚ್ಚಿರುತ್ತದೆ’ ಎಂದು ಹೇಳಿದರು.

ಮಧ್ಯಾಹ್ನದ ಸಂಚಾರ ಬೇಕಿಲ್ಲ

‘ಬಿಸಿಲು ವಿಪರೀತ ಹೆಚ್ಚಿದೆ. ವೃದ್ಧರು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಐದು ವರ್ಷದೊಳಗಿನ ಮಕ್ಕಳು, 50 ವರ್ಷ ದಾಟಿದವರು ಕಡು ಬೇಸಿಗೆಯಲ್ಲಿ ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಸಂಚರಿಸುವುದು ಸೂಕ್ತವಲ್ಲ’ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಂದ್ರ ಕಾಪಸೆ.

‘ಮಧ್ಯಾಹ್ನದ ವಿಪರೀತ ಬಿಸಿಲಿನಲ್ಲಿ ಅಶಕ್ತರು ತಿರುಗಾಡಿದರೆ ದೇಹದಲ್ಲಿನ ನೀರಿನಂಶ ಬಿಸಿಲ ಧಗೆಗೆ ಕಡಿಮೆಯಾಗಬಹುದು. ಇದು ಸನ್‌ಸ್ಟ್ರೋಕ್‌ಗೂ ಕಾರಣವಾಗಲಿದೆ. ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬೀಳಬಹುದು. ತಲೆ ತಿರುಗುವ ಸಾಧ್ಯತೆಗಳು ಹೆಚ್ಚು.

ಹೆಚ್ಚೆಚ್ಚು ಶುದ್ಧ ನೀರನ್ನು ಕುಡಿಯಬೇಕು. ಎಳನೀರು, ಜ್ಯೂಸ್‌ ಸೇರಿದಂತೆ ತಣ್ಣನೆಯ ನೀರು ಸೇವನೆ ಆರೋಗ್ಯಕರ. ಹಿರಿಯರು, ಮಕ್ಕಳು ಯಾವುದೇ ಕಾರಣಕ್ಕೂ ಮಧ್ಯಾಹ್ನದ ವೇಳೆ ಹೊರಗೆ ಸಂಚರಿಸುವುದು ಒಳ್ಳೆಯದಲ್ಲ’ ಎಂದು ಹೇಳಿದರು.

**
ಬಿಸಿಲಿಗೆ ತತ್ತರಿಸಿ ಅನಾರೋಗ್ಯಕ್ಕೆ ಈಡಾದವರು, ಸನ್‌ಸ್ಟ್ರೋಕ್‌ಗೆ ಒಳಗಾದ ಪ್ರಕರಣ, ವಾಂತಿ–ಭೇದಿ ಪ್ರಕರಣ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ
ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರಚಿಕಿತ್ಸಕ
**
ಅನಿವಾರ್ಯವಿದ್ದರೆ ಮಾತ್ರ ಹೊರಗೆ ಬೀಳ್ತೀವಿ. ಲಗ್ನಕ್ಕೂ ಹೋಗ್ತಿಲ್ಲ. ಪರಿಚಿತರು ಹೋದರೆ ಅವರ ಕೈಗೆ ಆಯೇರಿ ಕೊಡ್ತಿದ್ದೇವೆ. ಮಣ್ಣಿಗೆ ಮಾತ್ರ ಅನ್ಯ ಮಾರ್ಗವಿಲ್ಲದೆ ಹೋಗ್ತೀವಿ
ಚಂದ್ರು ಚೌಧರಿ, ವಿಜಯಪುರ ನಿವಾಸಿ
**

ಮೇ ಮೊದಲ ವಾರದಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ. ಒಂದು ವೇಳೆ ಮಳೆ ಬರದಿದ್ದರೆ ತಾಪಮಾನ ಇನ್ನಷ್ಟು ಹೆಚ್ಚಲಿದೆ. 42, 43 ಡಿಗ್ರಿ ಸೆಲ್ಷಿಯಸ್‌ ಮುಟ್ಟುವ ನಿರೀಕ್ಷೆಯಿದೆ
ಶಂಕರ ಕುಲಕರ್ಣಿ, ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ, ಕೃಷಿ ಮಹಾವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT