ಮುಧೋಳ: ‘ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ದರ ನಿಗದಿ ಮಾಡಿರುವುದು ಸಾಲುವುದಿಲ್ಲ. ಇದು ರೈತರಿಗೆ ಮಾಡಿರುವ ಅನ್ಯಾಯದ ಪರಮಾವಧಿ’ ಎಂದು ಕರ್ನಾಟಕ ರಾಜ್ಯ ಕಬ್ಬು ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಸುಭಾಷ ಶಿರಬೂರ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರ ಮಾಡುವ ವೆಚ್ಚ, ರಾಸಾಯನಿಕ ಗೊಬ್ಬರ ಹಾಗೂ ನಿರ್ವಹಣೆಯೊಂದಿಗೆ ಲಾಭಾಂಶ ಇಟ್ಟು ಎಫ್‌ಆರ್‌ಪಿ ದರವನ್ನು ನಿಗದಿ ಮಾಡಬೇಕು ಎಂಬ ನಿಯಮವಿದ್ದರೂ ವಾಸ್ತವಾಂಶ ಅರಿಯದೇ ಎಲ್ಲೋ ಕುಳಿತು ಎಫ್‌ಆರ್‌ಪಿ ದರ ನಿಗದಿ ಮಾಡುವುದರಿಂದ ರೈತರಿಗೆ ಅನ್ಯಾಯವಾಗಿದೆ. 2023-24 ಸಾಲಿಗೆ ಕೇವಲ ಪ್ರತಿ ಟನ್ ಕಬ್ಬಿಗೆ ₹ 100ರಷ್ಟು ಹೆಚ್ಚಳ ಮಾಡಿದ್ದಾರೆ. ಇದರಿಂದ ರೈತ ಮಾಡಿರುವ ವೆಚ್ಚವೂ ಹಿಂದಿರುಗುವುದಿಲ್ಲ ಎಂದು ದೂರಿದ್ದಾರೆ.
2022-23ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹ 3,050 ಎಫ್‌ಆರ್‌ಪಿ ದರ ನಿಗದಿ ಮಾಡಿದ್ದರು. ಪ್ರಸಕ್ತ ವರ್ಷ ಸಕ್ಕರೆ ಇಳುವರಿ ಶೇ 10.25ಕ್ಕೆ ಪ್ರತಿ ಟನ್ ಕಬ್ಬಿಗೆ ₹ 3,150 ಎಫ್‌ಆರ್‌ಪಿ ದರ ನಿಗದಿ ಮಾಡಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ತೋಟದಲ್ಲಿ ರೈತ ಮಾಡುವ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಂಡು ಶೇ 9.5 ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ₹ 4,300 ನಿಗದಿ ಮಾಡಿದಾಗ ಮಾತ್ರ ರೈತರಿಗೆ ಲಾಭವಾಗಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮರುಚಿಂತನೆ ಹಾಗೂ ವಾಸ್ತವ ವೆಚ್ಚದ ಆಧಾರದಲ್ಲಿ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
undefined undefined
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.