ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ: ‘ಮನೆಗೊಂದು ಮರ’ ವಿಶೇಷ ಅಭಿಯಾನ

ಪರಿಸರ ಹಸಿರಾಗಿಸಲು ಮಹಾಲಿಂಗಪುರ ಪುರಸಭೆ ಸಂಕಲ್ಪ । ಸಾರ್ವಜನಿಕರಿಗೆ ಉಚಿತ ವಿತರಣೆ
Published 24 ಜೂನ್ 2023, 5:11 IST
Last Updated 24 ಜೂನ್ 2023, 5:11 IST
ಅಕ್ಷರ ಗಾತ್ರ

ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಪರಿಸರವನ್ನು ಹಸಿರಾಗಿಸುವ ಸಂಕಲ್ಪದೊಂದಿಗೆ ಪಟ್ಟಣದ ಪುರಸಭೆ ವತಿಯಿಂದ ‘ಮನೆಗೊಂದು ಮರ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕಳೆದ ತಿಂಗಳು ನಡೆದ ವಿಡಿಯೊ ಸಂವಾದದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನೀಡಿದ ಸೂಚನೆ ಮೇರೆಗೆ ಈ ಅಭಿಯಾನ ನಡೆಸಲು ಪುರಸಭೆ ಮುಂದಾಗಿದ್ದು, ಸಾಮಾನ್ಯ ನಿಧಿಯಡಿ ಸಸಿಗಳನ್ನು ಖರೀದಿಸಿ ಮನೆ ಹಾಗೂ ಶಾಲೆಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

ಲೋಕಾಪುರ ಅರಣ್ಯ ಇಲಾಖೆಯಿಂದ ಒಂದು ಸಸಿಗೆ ₹23ರಂತೆ ಒಟ್ಟು ಎರಡು ಸಾವಿರ ಸಸಿಗಳನ್ನು ಖರೀದಿಸಲಾಗಿದೆ. ಮಹಾಗನಿ, ಹೊಂಗೆ, ಪೇರು, ಅಶೋಕ, ಬೆಟ್ಟದ ನೆಲ್ಲಿ, ಬಿದಿರು, ಸಾಗವಾನಿ, ಕ್ಯಾಸಿವಾಡ, ಸೀತಾಫಲ ಸೇರಿದಂತೆ ವಿವಿಧ ಜಾತಿಯ ಅಪರೂಪದ ಸಸಿಗಳು ಲಭ್ಯವಿವೆ.

ಜಿಎಲ್‌ಬಿಸಿಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಸಸಿಗಳನ್ನು ಸಂಗ್ರಹಿಸಿಡಲಾಗಿದೆ. ಪುರಸಭೆ ಪರಿಸರ ಕಾಳಜಿ ಗಮನಿಸಿ ಮುಧೋಳ ಅರಣ್ಯ ಇಲಾಖೆಯಿಂದ 500 ಸಸಿಗಳನ್ನು ಉಚಿತವಾಗಿ ನೀಡಲಾಗಿದೆ.

ಕಳೆದ 15 ದಿನದ ಹಿಂದೆಯೇ ಸಸಿ ತಂದಿರಿಸಲಾಗಿದ್ದು, ಈಗಾಗಲೇ ಅಂದಾಜು 800 ಸಸಿಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಶಾಲೆಗಳಿಗೆ ವಿತರಿಸಲಾಗಿದೆ. ಪುರಸಭೆ ಉದ್ಯಾನವನದಲ್ಲಿಯೂ ಸಸಿಗಳನ್ನು ನೆಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿರುವ ರಸ್ತೆ ಬದಿಗೂ ಸಸಿ ನೆಡಲು ಯೋಜಿಸಲಾಗಿದೆ. ಮನೆಯ ಅಂಗಳದಲ್ಲಿ ಸಸಿ ನೆಡಲು ಸಾರ್ವಜನಿಕರನ್ನು ಉತ್ತೇಜಿಸಿ ಅವರಿದ್ದಲ್ಲಿಯೇ ಹೋಗಿ ಸಸಿ ವಿತರಿಸಲಾಗುತ್ತಿದೆ.

‘ಸಾರ್ವಜನಿಕರು ತಮ್ಮ ಮನೆಯ ಮುಂದೆ ಸ್ವಯಂ ಪ್ರೇರಿತರಾಗಿ ಸಸಿ ನೆಡಲು ಮುಂದೆ ಬರಬೇಕು. ಇದರಿಂದ ಮನೆಯ ಅಂದ, ಶುದ್ಧ ಗಾಳಿ, ಉತ್ತಮ ವಾತಾವರಣ ಲಭಿಸಲಿದೆ’ ಎಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಸಿದ್ದು ಅಳ್ಳಿಮಟ್ಟಿ ಹೇಳುತ್ತಾರೆ.

ಸಾಮಾನ್ಯ ನಿಧಿಯಡಿ ಸಸಿಗಳ ಖರೀದಿ 3 ಸಾವಿರ ಸಸಿ ವಿತರಿಸುವ ಗುರಿ ವಿವಿಧ ಜಾತಿಯ ಸಸಿಗಳು ಲಭ್ಯ

ಒಟ್ಟು 3 ಸಾವಿರ ಸಸಿ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಮಳೆ ನೋಡಿಕೊಂಡು ಇನ್ನೂ 500 ಸಸಿಗಳನ್ನು ಖರೀದಿಸಲಾಗುವುದು

-ಜಗದೀಶ್ ಈಟಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT