‘ಅದ್ಭುತ ಮಾತೃತ್ವ’ಕ್ಕೆ ಅಭಿಮನ್ಯು ಪ್ರೇರಣೆ!

7
ಭಾರತೀಯ ಪ್ರಸೂತಿ ತಜ್ಞರ ಸಂಸ್ಥೆ, ಬಿ.ವಿ.ವಿ ಸಂಘ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿ.ವಿಯ ಸಹಯೋಗ

‘ಅದ್ಭುತ ಮಾತೃತ್ವ’ಕ್ಕೆ ಅಭಿಮನ್ಯು ಪ್ರೇರಣೆ!

Published:
Updated:
ಬಾಗಲಕೋಟೆಯಲ್ಲಿ ಶನಿವಾರ ’ಅದ್ಭುತ ಮಾತೃತ್ವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ನೆರೆದಿದ್ದ ಮಹಿಳೆಯರು

ಬಾಗಲಕೋಟೆ: ಭ್ರೂಣಾವಸ್ಥೆಯಿಂದ ಹೆರಿಗೆವರೆಗೆ ತಾಯಿ–ಮಗುವಿನ ಜೀವಹಾನಿ ತಪ್ಪಿಸಲು ಭಾರತೀಯ ಪ್ರಸೂತಿ ತಜ್ಞರ ಸಂಸ್ಥೆ (FOGSI) ‘ಅದ್ಭುತ ಮಾತೃತ್ವ’ ಹೆಸರಿನಲ್ಲಿ ಕಾರ್ಯಕ್ರಮದ ಮೂಲಕ ಗರ್ಭಿಣಿಯರ ನೆರವಿಗೆ ಮುಂದಾಗಿದೆ.

35 ಸಾವಿರ ಸದಸ್ಯರ ಬಲ ಹೊಂದಿರುವ ಭಾರತೀಯ ಪ್ರಸೂತಿ ತಜ್ಞರ ಸಂಘ ಬಾಗಲಕೋಟೆ ಸೇರಿದಂತೆ ದೇಶದ 245 ನಗರಗಳಲ್ಲಿ ‘ಅದ್ಭುತ ಮಾತೃತ್ವ’ ಯೋಜನೆ ಪರಿಚಯಿಸುತ್ತಿದೆ. ಇಲ್ಲಿನ ಬಿ.ವಿ.ವಿ ಸಂಘದ ಕುಮಾರೇಶ್ವರ ಆಸ್ಪತ್ರೆ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.

ಆಸ್ಪತ್ರೆಯ ಅತ್ರೆ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜಯದೀಪ ಮಲ್ಹೋತ್ರಾ ಚಾಲನೆ ನೀಡಿದರು. ‘ಗರ್ಭದಲ್ಲಿದ್ದಾಗಲೇ ಭ್ರೂಣ ತಾಯಿಯಿಂದ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತದೆ ಎಂಬುದಕ್ಕೆ ದೃಷ್ಟಾಂತ ಎನಿಸಿದ ಮಹಾಭಾರತದ ಅಭಿಮನ್ಯುವಿನ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆದು ಈ ಕಾರ್ಯಕ್ರಮ ರೂಪಿಸಲಾಗಿದೆ’ ಎನ್ನುತ್ತಾರೆ ಕುಮಾರೇಶ್ವರ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ ನಾಗಠಾಣ.

‘ಗರ್ಭಿಣಿಯರಿಗೆ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ತಜ್ಞರು ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಆಹಾರ ಪಥ್ಯೆ ಹೇಳಿಕೊಡಲಿದ್ದಾರೆ’ ಎಂದು ತಿಳಿಸಿದರು.

ಆ್ಯಪ್ ನೀಡಿಕೆ:

‘ಮಾತೃತ್ವದ ಬಗ್ಗೆ ಸೂಕ್ತ ಮಾಹಿತಿ ಮತ್ತು ಶಿಕ್ಷಣವನ್ನು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ನೀಡುವ ಸಲುವಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅದನ್ನು ಗರ್ಭಿಣಿಯರಿಗೆ ನೀಡಲಾಗುತ್ತಿದೆ. ಜೊತೆಗೆ ಈ ಕಾರ್ಯಕ್ರಮದ ಅಡಿ ಗರ್ಭಿಣಿಯರಿಗೆ ಪ್ರತಿ ತಿಂಗಳು 9ನೇ ತಾರೀಕು ಉಚಿತವಾಗಿ ಪ್ರಸವಪೂರ್ವ ಆರೈಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 500 ಗರ್ಭಿಣಿಯರಿಗೆ ಕಾರ್ಯಕ್ರಮದಡಿ ನೆರವಿನ ಹಸ್ತ ಚಾಚುತ್ತಿದ್ದೇವೆ’ ಎನ್ನುತ್ತಾರೆ.

ಊಟೋಪಚಾರದ ಬಗ್ಗೆ ಮಾಹಿತಿ: ಕಾರ್ಯಕ್ರಮದಡಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಹಣ್ಣು, ತರಕಾರಿ, ಹಸಿರುತಪ್ಪು, ಮೊಳಕೆಕಾಳು, ಕೆನೆ ತೆಗೆದ ಹಾಲು, ಮೊಟ್ಟೆ, ಮೀನು ಮೊದಲಾದ ಪೋಷಕಾಂಶಯುಕ್ತ ಆಹಾರ ಸೇವನೆಯ ಜೊತೆಗೆ ಉಪ್ಪು ಸೇವನೆ ಪ್ರಮಾಣ ಕಡಿಮೆ ಮಾಡುವುದು. ಕೆಲಸದ ಮಧ್ಯೆ ವಿಶ್ರಾಂತಿ ಪಡೆಯುವುದು, ಸದಾ ಉಲ್ಲಾಸದಿಂಸ ಇರುವುದನ್ನು ಹೇಳಿಕೊಡಲಾಗುತ್ತಿದೆ.

‘ಮಗು ಗರ್ಭದಲ್ಲಿದ್ದಾಗಲೇ ಅದಕ್ಕೆ ಯಾವ ರೀತಿ ಸಂಸ್ಕಾರ ಕೊಡಬೇಕು ಎಂಬುದು ಕಾರ್ಯಕ್ರಮದಲ್ಲಿ ಅಡಕಗೊಂಡಿದೆ. ತಾಯಿಯ ಮಾನಸಿಕ ಸ್ಥಿತಿ, ಬುದ್ಧಿ ವಿಚಾರ, ವ್ಯವಹಾರ ಪ್ರತಿಯೊಂದು ಭ್ರೂಣಾವಸ್ಥೆಯಿಂಲೇ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಸಕಾರಾತ್ಮಕ ಚಿಂತನೆಗಳ ಮಹತ್ವದ ಬಗ್ಗೆ ನಮ್ಮ ಕೇಂದ್ರದಲ್ಲಿ ಮನದಟ್ಟು ಮಾಡಲಾಗುವುದು’ ಎಂದು ಇಲ್ಲಿನ ನವನಗರದ ಬ್ರಹ್ಮಕುಮಾರಿ ಸಂಸ್ಥೆ ನಾಗರತ್ನಾ ಹೇಳುತ್ತಾರೆ.

ಆಸಕ್ತ ಗರ್ಭಿಣಿಯರು ಉಚಿತ ನೋಂದಣಿಗಾಗಿ ಡಾ.ಎ.ಬಿ.ಚೌಧರಿ: 9480384577, ಜಯಪ್ರಕಾಶ ನಾಗಠಾಣ: 9632589299, ಚಂದ್ರು: 9972555484 ಸಂಖ್ಯೆಗೆ ಸಂಪರ್ಕಿಸಬಹುದು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !