ಬಾಗಲಕೋಟೆ: ಬಡವರ ಪರ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ, ಜೆಡಿಎಸ್ ರಾಜಕೀಯ ಖಂಡಿಸಿ ಅಹಿಂದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ರಾಜ್ಯ ಘಟಕದ ಅಧ್ಯಕ್ಷ ಪ್ರಭುಲಿಂಗ ದಂಡಿವನರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತನಿಖೆ ಎದುರಿಸಲು ಸಿದ್ದರಾಮಯ್ಯ ಅವರು ಸಿದ್ಧರಿದ್ದಾರೆ. ಆದರೂ, ರಾಜಕೀಯ ಕಾರಣಕ್ಕೆ ರಾಜೀನಾಮೆ ಕೇಳಲಾಗುತ್ತಿದೆ. ಕೇಂದ್ರವು ರಾಜ್ಯ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರದ ಹಲವು ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರೆಲ್ಲರೂ ಸಚಿವರಾಗಿ ಮುಂದುವರಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿದ್ದಾರೆ’ ಎಂದರು.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ‘ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಸಿರುವುದು ಬೇಸರ ತರಿಸಿದೆ. 40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರು ಆರೋಪಮುಕ್ತರಾಗಿ ಹೊರ ಬರಲಿದ್ದಾರೆ’ ಎಂದರು.
ರಾಮು ರಾಕುಂಪಿ, ಆದರ್ಶ ನಾಶಿ, ಮಂಜುಳಾ, ಮುತ್ತಣ್ಣ ಇದ್ದರು.