ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್‌ನ ನಿದ್ದೆಗೆಡಿಸಿದ ಹೆಣ್ಣುಗಳು

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಿಟ್ಲರ್ ಸತ್ತು ನಾಳೆಗೆ (ಏಪ್ರಿಲ್ 30) 73 ವರ್ಷಗಳಾಗುತ್ತವೆ. ಏಳು ದಶಕಗಳು ಕಳೆದರೂ ಹಿಟ್ಲರ್ ಒಂದಲ್ಲ ಒಂದು ಬಗೆಯಲ್ಲಿ ನಮ್ಮನ್ನು ಕೆಣಕುತ್ತಲೇ ಇದ್ದಾನೆ. ವರ್ಷಗಳ ಕಾಲ ಜಗತ್ತನ್ನೇ ನಡುಗಿಸಿದ, ಜನಾಂಗೀಯ ವಾದ- ಉಗ್ರ ರಾಷ್ಟ್ರೀಯತೆಗಳ ಹೆಸರಲ್ಲಿ ಒಂದು ಜನಸಮೂಹವನ್ನೇ ಕೊಂದು ಗುಡ್ಡೆ ಹಾಕಿದ, ಎರಡನೆಯ ವಿಶ್ವಯುದ್ಧದ ಖಳನಾಯಕನಾದ ಈ ಹಿಟ್ಲರ್‌ನನ್ನು ಬಿಡದೇ ಕಾಡಿದ್ದು ಯಹೂದಿಗಳು ಮಾತ್ರವಲ್ಲ, ಹತ್ತಾರು ಹೆಣ್ಣುಗಳೂ!

ಅವನನ್ನು ಕಾಡಿದ ಹೆಣ್ಣುಗಳಲ್ಲಿ ಕೆಲವರು ಅವನ ಸಖಿಯರಾದರೆ, ಇನ್ನು ಕೆಲವರು ಅವನ ಸಿದ್ಧಾಂತವನ್ನು ಮೈಮನವೆಲ್ಲ ಪೂಸಿಕೊಂಡು ಜಗತ್ತು ಕಂಡಿರದ ಹಿಂಸೆಗಳನ್ನು ಯಹೂದಿಗಳಿಗೆ ನೀಡಿದವರು. ಮತ್ತೆ ಕೆಲವರು ಅವನ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸಿ ಕೊಲೆಯಾದವರು!

ಅವನ ಪ್ರೇಯಸಿಯರು

ಜಗತ್ತಿನ ಇತಿಹಾಸ ಎಂದೂ ಮರೆಯದ ವ್ಯಕ್ತಿಯಾಗಿ, ಇಡೀ ಮಾನವ ಜನಾಂಗಕ್ಕೆ ಸಾವಿನ ದೊರೆಯಾಗಿ ಉಳಿದುಹೋಗಿರುವ ಹಿಟ್ಲರ್‌ನಿಗೆ ಗುಪ್ತವಾಗಿ ಕನಿಷ್ಠ ಎಂಟು ಹೆಣ್ಣುಗಳೊಂದಿಗಾದರೂ ಸಂಪರ್ಕವಿತ್ತು ಎನ್ನುತ್ತವೆ ಕೆಲವು ಅಧ್ಯಯನಗಳು! ಅವರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇನ್ನಿಬ್ಬರು ಆತ್ಮಹತ್ಯೆಗೆ ಯತ್ನಿಸಿ ಅಸಹಾಯಕರಾದರು. ಕೊನೆಯಲ್ಲೊಬ್ಬಳು ಅವನೊಂದಿಗೆ ಸೈನೈಡ್ ಸೇವಿಸಿ ಗುಂಡಿಕ್ಕಿಕೊಂಡು ಸತ್ತುಹೋದಳು.

ರಾಷ್ಟ್ರದ ಉನ್ನತಿ, ಅಭಿವೃದ್ಧಿಗಾಗಿ ಮದುವೆಯಾಗದೆ ಉಳಿದಿದ್ದೇನೆ ಎಂದು ಸಾರುತ್ತಿದ್ದ ಹಿಟ್ಲರ್‌ನ ವೈಯಕ್ತಿಕ ಬದುಕಿನ ಬಗೆಗೆ ಹತ್ತಾರು ನೋಟಗಳು, ಊಹಾಪೋಹಗಳು ಚಾಲ್ತಿಯಲ್ಲಿವೆ! ಆತನಿಗೆ ಲೈಂಗಿಕ ಬದುಕಲ್ಲಿ ಆಸಕ್ತಿಯೇ ಇರಲಿಲ್ಲ ಎನ್ನುವ ವಾದವೂ ಒಳಗೊಂಡಂತೆ ಅವನದು ವಿಚಿತ್ರ ಲೈಂಗಿಕ ಬದುಕು ಎನ್ನುವವರೂ ಇದ್ದಾರೆ.

ತನಗಿಂತ ಅತಿ ಕಡಿಮೆ ವಯಸ್ಸಿನ ಹೆಣ್ಣುಗಳ ಜೊತೆ ಮಾತ್ರ ಅವನ ಸಂಗ! ತಾ ಹೇಳುವುದ ಚಾಚೂ ತಪ್ಪದೆ ಕೇಳುವ ಹೆಣ್ಣುಗಳು ಮಾತ್ರ ಅವನ ಅಂತರಂಗದ ಸಖಿಗಳಾಗುತ್ತಿದ್ದರು. ಅವನ ಮೊದಲ ಸಖಿ ಮರಿಯಾ ರೀಟರ್ ಅವನಿಗಿಂತ ಹದಿಮೂರು ವರ್ಷಗಳಷ್ಟು ಕಿರಿಯಳು!

ಎಂಟು ಹೆಣ್ಣುಗಳಲ್ಲಿ ಬಹುದಿನಗಳ ಕಾಲ ಅವನ ಪ್ರೀತಿಗೆ, ದಾಹಕ್ಕೆ ಜೊತೆಯಾದ ಘೆಲಿ ರಾಬೆಲ್ ಅವನಿಗಿಂತ ಹತ್ತೊಂಬತ್ತು ವರ್ಷಗಳಷ್ಟು ಕಿರಿಯಳು! ಮತ್ತೆ ಆತನ ಆತ್ಮಸಖಿಯಾಗಿದ್ದ ಇವಾ ಬ್ರಾನ್ ಅವನಿಗಿಂತ ಇಪ್ಪತ್ಮೂರು ವರ್ಷಗಳಷ್ಟು ಕಿರಿಯಳು. ಇವಳೇ ಉಳಿದ ಹೆಣ್ಣುಗಳಿಗಿಂತ ಆತನನ್ನು ತೀವ್ರವಾಗಿ ಕಾಡಿದವಳು ಎನ್ನಲಾಗುತ್ತದೆ.

14 ವರ್ಷಗಳ ಕಾಲದ ಇವರಿಬ್ಬರ ದೀರ್ಘ ಸಂಬಂಧ ಹೊರಗಿನ ಜಗತ್ತಿಗೆ ತಿಳಿದಿರಲಿಲ್ಲ! ಇವಳೊಂದಿಗೆಯೇ ಹಿಟ್ಲರ್ ಗುಂಡಿಕ್ಕಿಕೊಂಡು ಸತ್ತು ಹೋದುದು. ಸಾಯುವ ಮುಂಚೆ ಆಕೆಯನ್ನು ಮದುವೆಯಾಗಿದ್ದ ಎನ್ನುತ್ತವೆ ಕೆಲವು ದಾಖಲೆಗಳು! ಈ ಎಂಟು ಹೆಣ್ಣುಗಳೊಂದಿಗಿನ ಅವನ ಪ್ರಣಯ ಗಳಿಗೆಗಳು ವಿಚಿತ್ರವಾದವುಗಳು!

ತುಂಬಾ ಕಟ್ಟುನಿಟ್ಟಿನ ಮಿಲಿಟರಿ ಬದುಕನ್ನು ರೂಢಿಸಿಕೊಂಡಿದ್ದ ಹಿಟ್ಲರ್ ಮಂಚದ ಮೇಲೂ ಅದನ್ನೇ ಬಯಸುತ್ತಿದ್ದನಂತೆ! ಸ್ವಚ್ಛತೆ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಿದ್ದ ಅವನು ಬಟ್ಟೆಗಳನ್ನೂ ಬಿಚ್ಚದೆ ರಾಸಕ್ರೀಡೆ ಆಡುತ್ತಿದ್ದ ಎಂದರೆ ಯಾರಿಗೆ ತಾನೆ ನಗು ಬರುವುದಿಲ್ಲ! ತನ್ನ ಮೊದಲ ಪ್ರೇಯಸಿಯಾದ ಮರಿಯಾ ರೀಟರ್‌ಳನ್ನು ತನ್ನ ಬಲಿಷ್ಠ ತೋಳುಗಳಿಂದ ಸೆಳೆದು ಅಪ್ಪುವಾಗ ಅವನ ಬಲು ಇಷ್ಟದ ಎರಡು ನಾಯಿಮರಿಗಳು ಒಂದೇ ಸಮನೆ ಬೊಗಳಿವೆ! ಹೇಳಿಕೇಳಿ ಸಿಟ್ಟಿನ ಅಧಿಪತಿ ಅವನು! ಅದೂ ಅಪರೂಪಕ್ಕೆ ಜರುಗುವ ಕಾಮದೌತಣದ ರಸಗಳಿಗೆಯಲ್ಲಿ ಹೀಗೆ ಕೆರಳಿಸಿದರೆ!?

ಗೋಡೆಯಲ್ಲಿ ನೇತಾಡುತ್ತಿದ್ದ ತನ್ನ ಕುದುರೆ ಚಾಟಿಯನ್ನು ಎಳೆದು ಆ ಎರಡು ನಾಯಿಗಳಿಗೆ ಮನಸೋ ಇಚ್ಛೆ ಬಾರಿಸಿದ್ದಾನೆ! ಅವುಗಳು ಆತನ ಬಲು ಇಷ್ಟದ ನಾಯಿಮರಿಗಳು! ಇದನ್ನು ನೋಡಿದ್ದೇ ಮರಿಯಾಳ ಮನಸ್ಸು ಹೇಗೆಲ್ಲ ತುಡಿದಿರಬೇಕು! ಹಿಟ್ಲರ್ ಮೂವತ್ತೇಳರ ಪ್ರಾಯದವ. ಅವಳೊ ಹದಿನಾರರ ಪೋರಿ. ಆಕೆಯೊಂದಿಗೆ ಸುಮಾರು ದಿನಗಳ ಕಾಲ ಸಂಬಂಧವನ್ನಿಟ್ಟುಕೊಂಡಿದ್ದ ಹಿಟ್ಲರ್ ಆಕೆಯನ್ನು ಮದುವೆಯಾಗುತ್ತೇನೆಂದು ಹೇಳಿದ್ದನಂತೆ!

ಹೀಗೆ ಮುಂದುವರಿಯುತ್ತಿದ್ದ ಇವರಿಬ್ಬರ ಪ್ರೇಮ ಸಲ್ಲಾಪಗಳು ಒಂದು ಹಂತದಲ್ಲಿ ನಿಂತುಹೋಗಿವೆ. ಅವನ ಸುತ್ತ ಜನರ ಉದ್ಘೋಷಗಳು, ಹೆಣ್ಣುಗಳ ಸರತಿ ಸಾಲನ್ನು ನೋಡಿ ಸಹಿಸದ ಅವನ ಮೊದಲ ಪ್ರೇಯಸಿ ಮರಿಯಾ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ನೇತಾಡಿದಳು.

ಅದೃಷ್ಟಕ್ಕೆ ಅವಳನ್ನು ಯಾರೋ ನೋಡಿ ಬದುಕಿಸಿದರು! ಇವಳಂತೆಯೇ ಹಿಟ್ಲರ್‌ನ ಪ್ರೇಮಪಾಶಕ್ಕೆ ಸಿಲುಕಿ ವಿಚಲಿತಗೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡವರು ಇಬ್ಬರು: ಘೆಲಿ ರೊಬೆಲ್ ಮತ್ತು ಯುನಿಟಿ ಮಿಟ್ ಫೋರ್ಡ್.

ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ಸೋತಿದ್ದ ಅವನ ಬಹುಕಾಲದ ಪ್ರೇಯಸಿ ಇವಾ ಬ್ರಾನ್ ಕೊನೆಗೆ ಅವನೊಂದಿಗೇ ಸತ್ತುಹೋದಳು. ಯುದ್ಧದಲ್ಲಿ ಸೋಲುವ ಕ್ಷಣ ಬಂದದ್ದೇ ಇಬ್ಬರೂ ನೂರಾರು ಅಡಿ ಭೂಮಿಯ ಕೆಳಗಿನ ಅವನ ಗುಪ್ತ ಬ್ಯಾಂಕರ್- ನೆಲಮಾಳಿಗೆ- ಒಳಗೆ ಹೋಗಿ ಸೈನೈಡ್ ಸೇವಿಸಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಜರ್ಮನಿಯ, ಅಷ್ಟೇ ಯಾಕೆ ಯುರೋಪಿನ ಸಾವಿರಾರು ಜನರ ಅಂದಿನ ಹೀರೊ ಆಗಿದ್ದ ಅವನ ಜೊತೆ ಮಂಚ ಹಂಚಿಕೊಳ್ಳಲು ಅದೆಷ್ಟೊ ಹೆಣ್ಣುಗಳು ಕನಸಿದ್ದಾರೆ. ಹಾಗೆಯೇ ಕೆಲವು ಅಧ್ಯಯನಕಾರರು ಇವನಿಗೆ ‘ಹೋಮೊಸೆಕ್ಸುವಲ್ ಅಬ್ಸೆಷನ್’ ಕೂಡ ಇತ್ತು ಎನ್ನುತ್ತಾರೆ. ಅದನ್ನು ಅದುಮಿಟ್ಟುಕೊಂಡ ಕಾರಣವೇ ಅವನು ತನ್ನ ಆರ್ಯಕುಲದ ಸ್ವಚ್ಛತಾ ಮಿಷನ್‌ನಲ್ಲಿ ಸಲಿಂಗಕಾಮಿಗಳನ್ನು ಕೊಲ್ಲಿಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ದ್ವಿ ಲೈಂಗಿಕತೆಯುಳ್ಳವನೂ ಆಗಿದ್ದ ಅವನು ಗಂಡಸರು- ಹೆಂಗಸರು ಇಬ್ಬರೊಂದಿಗೂ ಸಂಬಂಧ ಇರಿಸಿಕೊಂಡಿದ್ದ ಎನ್ನುವ ವಾದವೂ ಇದೆ. ಇನ್ನು ಕೆಲವರಂತೂ ಆತನಿಗೆ ಸೆಕ್ಸ್ ಭಾವನೆಗಳೇ ಇರಲಿಲ್ಲ. ಅವನಿಗೆ ಆ ಶಕ್ತಿಯೇ ಇರಲಿಲ್ಲ ಮತ್ತು ಅವನೊಬ್ಬ ಸಿಂಗಲ್ ಬೀಜದ ಸಿಂಗಳೀಕ ಎಂದಿದ್ದಿದೆ!

ಹಿಟ್ಲರನ ಲೈಂಗಿಕ ಬದುಕಿನ ಕುರಿತಾಗಿ ಇಂತಹ ದಂತಕತೆಗಳು ಓಡಾಡುತ್ತಿವೆ. ರಾಷ್ಟ್ರದ ಅಭಿವೃದ್ಧಿಗಾಗಿ ತಾನು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ತನಗೆ ಕುಟುಂಬವೆಂಬುದೇ ಇಲ್ಲ ಎನ್ನುತ್ತಾ ಗೌಪ್ಯವಾಗಿ ಹೆಣ್ಣುಗಳ ಸಂಗ ಮಾಡಿ ರಹಸ್ಯವಾಗಿ ಠೇಂಕರಿಸುತ್ತಿದ್ದ ಹಿಟ್ಲರ್‌ನಿಗೆ ಹೆಣ್ಣಿನ ಕುರಿತಾಗಿ ಇದ್ದ ಚಿಂತನೆಗಳೇ ಬೇರೆಯ ತೆರನಾದವು. ಅವನ ಗೌಪ್ಯ ಲೈಂಗಿಕ ಬದುಕಿಗೆ ವ್ಯತಿರಿಕ್ತವಾದವು!

ಜರ್ಮನಿಯ ಸಾರ್ವಭೌಮ ಹಿಟ್ಲರ್ ತನ್ನ ದೇಶದ ಸ್ತ್ರೀಕುಲದ ಬಗ್ಗೆ ಕೆಲ ನೀತಿಗಳನ್ನು ಕಟ್ಟುನಿಟ್ಟಾಗಿ ರೂಢಿಗೆ ತಂದಿದ್ದಾನೆ. ಹೆಣ್ಣಿನ ಸ್ವಾತಂತ್ರ್ಯವನ್ನು ಯಾವುದೇ ಕನಿಕರವಿಲ್ಲದೆ ಕಿತ್ತುಕೊಳ್ಳುತ್ತಿದ್ದ ಆ ಕಾನೂನುಗಳಿಗೆ ಕಮ್ಯುನಿಸ್ಟರಿಂದ ಮತ್ತು ಸ್ತ್ರೀಪರ ಸಂಘಟನೆಗಳಿಂದ ಎದ್ದ ಪ್ರತಿರೋಧದ ನಡುವೆಯೂ ಅವುಗಳನ್ನು ಜಾರಿಗೆ ತಂದ. ಮುಂದೆ ತನ್ನ ಕುಲದ ವಿರೋಧಿಯಾದ ಯಹೂದಿ ಹೆಣ್ಣುಗಳಿಗೆಂದೇ ಪ್ರತ್ಯೇಕ ಕಾನ್ಸಂಟ್ರೇಷನ್ ಕ್ಯಾಂಪ್‌ಗಳನ್ನು ನಿರ್ಮಿಸಿ ಅವರನ್ನು ಅಲ್ಲಿ ತುಂಬಿ ಚಿತ್ರವಿಚಿತ್ರವಾಗಿ ಹಿಂಸಿಸಿ ಕೊಲ್ಲಿಸಿದ.

ಗಂಡಸು, ಹೆಂಗಸರಿಗೆ ಪ್ರತ್ಯೇಕವಾಗಿದ್ದ ಈ ಕ್ಯಾಂಪ್ ಮತ್ತು ಗ್ಯಾಸ್ ಚೇಂಬರ್‌ಗಳನ್ನು ನಿರ್ವಹಿಸಲು ನೂರಾರು ತಂಡಗಳನ್ನು ನೇಮಿಸಲಾಗಿತ್ತು. ಅಲ್ಲಿ ಯಹೂದಿಗಳಿಗೆ ನರಕಯಾತನೆ ತೋರಿಸುವ ಆರ್ಯನ್ ಕುಲದ ನಿಜ ಸೇನಾನಿಗಳಿಗೆ ಹಿಟ್ಲರ್ ಸನ್ಮಾನ ಮಾಡುತ್ತಿದ್ದ. ಅವರನ್ನು ತುಂಬು ಹೃದಯದಿಂದ ಹೊಗಳುತ್ತಿದ್ದ.

ಹೀಗೆ ಅವನ ಈ ಪ್ರೀತಿಗೆ ಭಾಜನರಾದ ಮಹಿಳಾ ವಿಭಾಗದ ಆರು ಮಹಿಳಾ ಸೇನಾನಿಗಳು ಇತಿಹಾಸದ ಪುಟಗಳಲ್ಲಿ ಅಳಿಸಿ ಹಾಕಲಾಗದ ಸ್ಥಾನ ಪಡೆದಿದ್ದಾರೆ. ಯಹೂದಿ ಹೆಂಗಸರಿಗೆ ಹಿಂಸೆ ನೀಡಿ ಕೊಂದು ವಿಜೃಂಭಿಸಿದ್ದಾರೆ. ಅವರಲ್ಲಿ ಮೊದಲನೆಯವಳು ಜ್ವಾನಾ ಬೊರ್‌ಮನ್. ಹಿಟ್ಲರ್ ಬಹು ಇಷ್ಟಪಡುತ್ತಿದ್ದ ಮಹಿಳಾ ಸೇನಾನಿಗಳಲ್ಲಿ ಇವಳು ಮುಂಚೂಣಿಯಲ್ಲಿದ್ದವಳು. ‘ವುಮನ್ ವಿತ್ ಡಾಗ್ಸ್’ ಎಂಬ ಬಿರುದು ಹೊಂದಿದ್ದ ಆಕೆ ಯಹೂದಿ ಹೆಂಗಸರಿಗೆ ಹಿಂಸೆಯ ಮೇಲೊಂದು ಹಿಂಸೆ ಕೊಡುತ್ತಾ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಖುಷಿಪಟ್ಟಿದ್ದಾಳೆ.

ಮೈಮೇಲಿನ ಗಾಯಗಳ ಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ತಿವಿಯುತ್ತಾ ಯಹೂದಿ ಹೆಂಗಸರು ಕಿರುಚಾಡುವುದನ್ನು ಕಿವಿ ತುಂಬಿಸಿಕೊಂಡಿದ್ದಾಳೆ.

ತನ್ನ ನಾಯಿಗಳನ್ನು ಬಿಟ್ಟು ಆ ಹೆಂಗಸರ ದೇಹಗಳು ಚಿಂದಿಯಾಗುತ್ತಿರುವುದನ್ನು ನೋಡುತ್ತಾ ಸುಖಿಸಿದ್ದಾಳೆ. ಜೈಲಿನಲ್ಲಿರುವ ಮೂಳೆ ಮಾಂಸಗಳ ಚಕ್ಕಳದಂತಹ ಹೆಣ್ಣುಗಳನ್ನು ಹುಡುಕಿ ಎತ್ತಿಕೊಂಡು ಬಂದು ತೂಕ ಹಾಕಿಸಿ ತಾ ನಿರೀಕ್ಷಿಸಿರುವ ತೂಕದ ಮಾಪನ ತೋರಿಸಿದ್ದೇ ಕೇಕೆ ಹಾಕಿ ನಗುತ್ತಾ ಅವರುಗಳನ್ನು ಬೆಂಚಿನ ಮೇಲೆ ಮಲಗಿಸಿ ಅವರ ಒಂದೊಂದೇ ಅಂಗಾಂಗಗಳನ್ನು ನಿಧಾನವಾಗಿ ಕತ್ತರಿಸುತ್ತಾ ತೇಗು ಬಿಡುತ್ತಿದ್ದಿದ್ದಾಳೆ!

ಅವರುಗಳು ಇನ್ನೇನು ಸಾಯಬೇಕು ಎನ್ನುವಾಗ ಮುಂದುವರೆದು ಕತ್ತರಿಸದೆ ಅವರ ರೋದನೆಯನ್ನು ನೋಡುತ್ತಾ ಕುಣಿಯುತ್ತಿದ್ದಳಂತೆ! ಹಿಟ್ಲರ್ ಇವಳ ಈ ಮಹತ್ಕಾರ್ಯವನ್ನು ಮೆಚ್ಚಿ ಹೋದ ಕಡೆಯೆಲ್ಲ ಇವಳದೇ ಮಾತು ಆಡುತ್ತಿದ್ದ!

ಅವನನ್ನು ಕಾಡಿದ ಎರಡನೆಯ ಹಿಂಸಾನಂದದ ಹೆಣ್ಣು ಹೆರ್ಟಾ ಬೊಥೆ. ಕೊಟ್ಟಿರುವ ಕೆಲಸವನ್ನು ಮಾಡದೆ ತಪ್ಪಿಸಿಕೊಳ್ಳುವ ಅಥವಾ ಅಸಮರ್ಥರಾಗಿರುವ ಯಹೂದಿ ಹೆಣ್ಣುಗಳನ್ನು ಅಲ್ಲಿಯೇ ನಿಲ್ಲಿಸಿ ತನ್ನ ಆಳುದ್ದದ ಬಂದೂಕಿನಲ್ಲಿ ಶೂಟ್ ಮಾಡುತ್ತಿದ್ದಳಂತೆ. ಐಲ್ ಕೋಚ್ ಎನ್ನುವವಳಂತೂ ರಣ ಭಯಂಕರಿ! ಯಹೂದಿ ಹೆಂಗಸರನ್ನು ಕೊಂದು ಅವರ ಚರ್ಮಗಳಿಂದ ಬ್ಯಾಗ್; ಮೂಳೆಗಳಿಂದ ಟೇಬಲ್‌ಲ್ಯಾಂಪ್ ಮಾಡಿಕೊಂಡು ಸುಖಿಸಿದವಳು ಈ ಐಲ್.

ಇವರುಗಳಂತೆಯೇ ಹಿಟ್ಲರನ ಪ್ರಶಂಸೆಗೆ ಪಾತ್ರವಾದ ಹೆಂಗಸರು ಮರಿಯಾ ಮ್ಯಾಂಡೆಲ್, ಹೆರ್ಟಾ ಒಬೆರ‍್ಷುಹರ್! ಇರ‍್ಮಾ ಗ್ರೇಸ್ ಅನ್ನುವ ಮತ್ತೊಂದು ಮಹಿಳಾ ಎಸ್.ಎಸ್ ಪಡೆಯ ಹೆಣ್ಣಿನ ಬದುಕು ಬಹುಶಃ ಈ ಎಲ್ಲಾ ಹೆಣ್ಣುಗಳ ಬದುಕುಗಳನ್ನು ಪ್ರತಿನಿಧಿಸುತ್ತದೆ!

ದೂರದ ಹಳ್ಳಿಯ ಬಡ ವ್ಯವಸಾಯಗಾರನ ಮಗಳಾಗಿ ಹುಟ್ಟಿ ತನ್ನ ಹದಿನೈದನೇ ವಯಸ್ಸಿಗೇ ಶಾಲೆಯನ್ನು ತೊರೆದು ಅಂಗಡಿಯಲ್ಲಿ ಕೆಲ ಕಾಲ ದುಡಿದು ನಂತರ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿ ಆಮೇಲೆ ಸೇನೆ ಸೇರಿಕೊಂಡವಳು. ಅವಳನ್ನು ರೆವನ್‌ಸಬ್ರೆಕ್‌ನ ಕಾನ್ಸಂಟ್ರೇಷನ್ ಕ್ಯಾಂಪಿಗೆ ಕಳುಹಿಸಲಾಯಿತು. ಕೆಳ ಹಂತದ ಸೇನಾನಿಯಾಗಿ ಸೇರಿಕೊಂಡವಳು ತನ್ನೊಳಗಿನ ಹಿಂಸಾತ್ಮಕ ನೆಲೆಗೆ ನೀರೆರೆದು ಬೃಹದಾಕಾರವಾಗಿ ಬೆಳೆಯುತ್ತಾ ಹೋದಳು.

ಹಿಟ್ಲರನ ಪ್ರೀತಿಯ ಹೆಣ್ಣು- ಸೇನಾನಿಯಾಗಿ ರೂಪುಗೊಂಡು ಇಡೀ ನಾಜಿ ಜರ್ಮನ್ ಸೇನೆಯ ಎರಡನೆಯ ಕಮಾಂಡರ್ ಆಗಿ ಮೆರೆದಳು. ಮೂವತ್ತು ಸಾವಿರ ಯಹೂದಿ ಹೆಣ್ಣುಗಳಿದ್ದ ಕ್ಯಾಂಪ್‌ನ ಮುಖ್ಯಸ್ಥೆಯಾಗಿದ್ದ ಅವಳು ಮಾಡಿದ ಕೊಲೆಗಳು, ಹಿಂಸೆಗಳು ಭಯಾನಕವಾದವುಗಳು! ಒಣಕಲು ಕಡ್ಡಿಯಂತಾಗಿರುವ ಯಹೂದಿ ಹೆಣ್ಣುಗಳನ್ನು ಆರಿಸಿಕೊಂಡು ಅವರ ಜನನಾಂಗಗಳಿಗೆ ಕಬ್ಬಿಣದ ಸಲಾಕೆಗಳು, ಗಾಜಿನ ಚೂಪಾದ ಕಡ್ಡಿಗಳನ್ನು ತಿವಿದು ಆನಂದದಿಂದ ಕೂಗಿಕೊಂಡಿದ್ದಾಳೆ.

ಆ ಹೆಣ್ಣುಗಳಿಂದ ಹಾಡುಗಳನ್ನು ಹಾಡಿಸುತ್ತಾ ನರ್ತಿಸುವಂತೆ ಒತ್ತಾಯಿಸುತ್ತಾ ಒಬ್ಬೊಬ್ಬರನ್ನೇ ವಿವಸ್ತ್ರಗೊಳಿಸಿ ಹಿಂಸಿಸಿ ಗ್ಯಾಸ್ ಚೇಂಬರ್‌ಗೆ ಕಳುಹಿಸುತ್ತಿದ್ದಳಂತೆ.

ಎರಡನೆಯ ವಿಶ್ವಯುದ್ಧದಲ್ಲಿ ಹಿಟ್ಲರ್ ಸೋತು ಆತ್ಮಹತ್ಯೆ ಮಾಡಿಕೊಂಡ ನಂತರ ವಾರ್ ಕ್ರಿಮಿನಲ್‌ಗಳಾಗಿ ಇವರಲ್ಲಿ ಕೆಲವರನ್ನು ಬಂಧಿಸಲಾಯಿತು. ಹಲವರಿಗೆ ಕಠಿಣ ಸಜೆ ನೀಡಲಾಯಿತು, ಕೆಲವರು ಆತ್ಮಹತ್ಯೆ ಮಾಡಿಕೊಂಡು ಮಣ್ಣಾದರು. ಹಿಟ್ಲರ್ ಬದುಕಿದ್ದಾಗ ತಮ್ಮ ವಿಶಿಷ್ಟ ನಡಾವಳಿಯಿಂದ ಅವನನ್ನು ಅತಿಯಾಗಿ ಆಕರ್ಷಿಸಿದ್ದವರು.

ಆದರೆ ಅಂದಿನ ಜರ್ಮನಿಯಲ್ಲಿದ್ದವರೆಲ್ಲರ ಮನಸ್ಥಿತಿ ಹೀಗೇನೂ ಇರಲಿಲ್ಲ. ಹಿಟ್ಲರನ ಉಗ್ರ ರಾಷ್ಟ್ರೀಯವಾದವನ್ನು, ಜನಾಂಗೀಯ ವಾದವನ್ನು ವಿರೋಧಿಸುವ ಜರ್ಮನ್ನರೂ ಇದ್ದರು. ಅವರಲ್ಲಿ ಕಮ್ಯುನಿಸ್ಟರು, ಸಾಮಾಜಿಕ ಕಾರ್ಯಕರ್ತರು ವಿದ್ಯಾರ್ಥಿಗಳು, ಸ್ಕೂಲ್ ಮೇಷ್ಟ್ರುಗಳು, ಕಾರ್ಮಿಕರು, ಡಾಕ್ಟರು, ರೈತಾಪಿ ವರ್ಗದವರು, ಪತ್ರಕರ್ತರು, ವಕೀಲರು ಹೀಗೆ ವಿವಿಧ ಸ್ತರಗಳ ಜನ ಇದ್ದರು.

ಅವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೂ ಜಾಸ್ತಿಯಿತ್ತು. ಅಂತಹ ಹೆಣ್ಣುಗಳಲ್ಲಿ ಕೆಲವರು ಹಿಟ್ಲರ್‌ನನ್ನು ಬಿಡದೇ ಕಾಡಿದ್ದರು. ಅವನ ಸಿದ್ಧಾಂತವನ್ನು ಬೀದಿಗಿಳಿದು ಪ್ರತಿಭಟಿಸಿ, ಜನರನ್ನು ಸಂಘಟಿಸಿ ಹೋರಾಟಕ್ಕಿಳಿದು, ಪೊಲೀಸರಿಂದ ಬಂಧನಕ್ಕೊಳಗಾಗಿ, ನ್ಯಾಯಾಲಯಗಳಿಂದ ಸಾವಿನ ಜುಲ್ಮಾನೆ ಪಡೆದಂತಹವರು, ಆ ದಿಟ್ಟ ಹೆಣ್ಣುಗಳು! 

ಹಿಟ್ಲರ್‌ನ ಫ್ಯಾಸಿಸ್ಟ್ ಸಿದ್ಧಾಂತವನ್ನು ವಿರೋಧಿಸಿ ಬೀದಿಗಿಳಿದ ಸಂಘಟನೆಗಳು ಹಲವು. ಜರ್ಮನ್ನರೇ ಆಗಿದ್ದ ಆ ಸಂಘಟನೆಗಳ ಸದಸ್ಯರು ಸಾವಿಗೂ ಹೆದರದೆ ಮುನ್ನುಗ್ಗಿದ್ದರು; ಜರ್ಮನ್ ಕಮ್ಯುನಿಸ್ಟರು, ಕಾರ್ಮಿಕ -ಮಹಿಳಾ ಸಂಘಟನೆಗಳು, ವೈಟ್‌ರೋಸ್ ಮೂವ್‌ಮೆಂಟ್, ರೆಡ್ ಆರ್ಕೆಸ್ಟ್ರಾ ಎಂಬಂತಹ ಹತ್ತಾರು ಸಂಘಟನೆಗಳ ಪ್ರತಿಭಟನೆಯ ತೊರೆಗಳು ಬುಗ್ಗನೆದ್ದು ಕಲ್ಲಿನ ಗೋಡೆಗಳನ್ನು ನೆಲಸಮಗೊಳಿಸಲು ಮುನ್ನುಗ್ಗುತ್ತಿದ್ದವು.

ವಿರೋಧ ವ್ಯಕ್ತಪಡಿಸುವವರನ್ನು ಯಾವುದೇ ಮುಲಾಜಿಲ್ಲದೆ ಶಿಕ್ಷಿಸುತ್ತಿದ್ದ ಗಳಿಗೆ ಅದು. ಸಾವು ಖಚಿತ ಎಂದು ಗೊತ್ತಿದ್ದೂ ನುಗ್ಗಿದ ಅವರ ಮನಸ್ಥಿತಿಗಳ ಬಗ್ಗೆ ಫೇಸ್‌ಬುಕ್, ಟ್ವಿಟರ್ ಕಾಲದಲ್ಲಿ ಕೂತು ನಾವು ಅದನ್ನು ಹೇಗೆ ಅರ್ಥಮಾಡಿಕೊಳ್ಳುವುದೊ ನಾ ಅರಿಯೆ!

ಹತ್ತು ಸಾವಿರಕ್ಕಿಂತ ಹೆಚ್ಚಿನ ಹೆಣ್ಣುಗಳನ್ನು ಕೊಂದಿರುವ ಉದಾಹರಣೆಗಳು ಕಣ್ಣ ಮುಂದಿದ್ದರೂ ನುಗ್ಗಿದ ಆ ಕಾಲದ ಹೆಣ್ಣುಗಳನ್ನು ನೋಡಲು ನಮಗೆ ಮತ್ತೆರಡು ಕಣ್ಣುಗಳು ಬೇಕೇನೊ! ಕೇವಲ ಇಪ್ಪತ್ತೊಂದರ ಪ್ರಾಯದ ಸೋಫಿ ಸ್ಕಾಲ್ ಎಂಬ ಜರ್ಮನ್ ಹುಡುಗಿಯ ಧೈರ್ಯ ಹಿಟ್ಲರ್‌ನನ್ನೇ ಕೆರಳಿಸಿತೆಂದರೆ ಆಕೆಗೆ ಅದೆಷ್ಟು ಗಟ್ಟಿ ಗುಂಡಿಗೆಯಿದ್ದಿರಬೇಕು!

ಇವಳ ವಯಸ್ಸಿನ ಬಹುತೇಕ ಹುಡುಗಿಯರು ಆರ್ಯನ್ ಕುಲದ ಶ್ರೇಷ್ಠತೆಯಲ್ಲಿ, ಜರ್ಮನಿ ರಾಷ್ಟ್ರಭಕ್ತಿಯ ಅಮಲಿನಲ್ಲಿ ತೇಲುತ್ತಾ ರಾಷ್ಟ್ರಸೇವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾಗ ಸೋಫಿ ಸ್ಕಾಲ್‌ನಂತಹ ಕೆಲವೇ ಕೆಲವು ವಿದ್ಯಾರ್ಥಿಗಳು ಹಿಟ್ಲರ್‌ನನ್ನು, ಅವನ ಜನಾಂಗೀಯ ದ್ವೇಷವನ್ನು, ಉಗ್ರರಾಷ್ಟ್ರೀಯತೆಯ ಹಿಂಸೆಯನ್ನು ವಿರೋಧಿಸಿ ಬೀದಿಗಿಳಿದು ಮಾನವೀಯತೆಯ ಪರವಾಗಿ ಕೂಗುತ್ತಾ ದೇಶದ್ರೋಹಿಗಳೆನಿಸಿಕೊಂಡರು; ತಮ್ಮದೇ ದೇಶದ, ಧರ್ಮದ ಜನರ ದ್ವೇಷದ ನಿಲುವುಗಳನ್ನು ಖಂಡಿಸುತ್ತಾ ಜೀವಪರ ಮೌಲ್ಯಗಳಿಗಾಗಿ ಹಂಬಲಿಸಿದರು.

ಸೋಫಿ ಸ್ಕಾಲ್ ಎಂಬ ಹದಿಹರೆಯದ ಈ ಹುಡುಗಿ ವೈಟ್‌ರೋಸ್ ಮೂವ್‌ಮೆಂಟ್ ಎಂಬ ವಿದ್ಯಾರ್ಥಿ ಸಂಘಟನೆಗೆ ಸೇರಿದವಳು. ಬೀದಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕರಪತ್ರ ಹಂಚುತ್ತಾ ಹಿಟ್ಲರ್‌ನ ದ್ವೇಷ ರಾಜಕಾರಣವನ್ನು, ಅಮಾನವೀಯ ಕಾನೂನುಗಳನ್ನು ಶಾಂತಿಯುತವಾಗಿ ವಿರೋಧಿಸುತ್ತಿದ್ದವಳು.

ಇವಳ ಸಹಪಾಠಿಗಳಲ್ಲಿ ಅನೇಕರಿಗೆ ಹಿಟ್ಲರನೇ ದೇವರಾಗಿದ್ದರೆ ಇವಳಿಗೆ ಅವನೊಬ್ಬ ಸೇಟನ್ (ದೆವ್ವ)! ಅವನನ್ನು ನಿಂದಿಸಿ ಬರೆಯುತ್ತಾ, ಮಾತನಾಡುತ್ತಾ ರಸ್ತೆಗಳಲ್ಲಿ ನಿಂತು ತನ್ನಂಥ ಕೆಲವೇ ಕೆಲವು ವಿದ್ಯಾರ್ಥಿಗಳ ಜೊತೆ ಘೋಷಣೆಗಳನ್ನು ಕೂಗುತ್ತಿದ್ದಳು. ಇಂತಹ ಹುಡುಗರನ್ನು ಎತ್ತಿಕೊಂಡು ಹೋದ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಹಿಟ್ಲರ್‌ನಿಗೆ ಇವರ ವಿಷಯ ತಿಳಿದು ಕೆಂಡದ ಮೇಲೆ ಕುಳಿತವನಂತೆ ಎಗರಾಡಿ ಆ ಎಳೆಯರ ತಲೆಯನ್ನು ಗಿಲೆಟಿನ್‌ನಲ್ಲಿಟ್ಟು ಕಡಿಯಿರಿ ಎಂದು ಸೂಚನೆ ನೀಡಿದ್ದಾನೆ.

ಸಾವಿನ ನಂತರವೂ ಸೋಫಿ ಸ್ಕಾಲ್ ಹಿಟ್ಲರ್‌ನನ್ನು ಕಾಡಿದ್ದಾಳೆ. ಅವಳನ್ನು ನ್ಯಾಯಾಲಯದಲ್ಲಿ ನಿಲ್ಲಿಸಿ ದೋಷಾರೋಪ ಪಟ್ಟಿಗಳನ್ನು ಹೊರಿಸಿದಾಗ ಅಂಜದೆ ಅವಳಾಡಿದ ಮಾತುಗಳು ಅವನನ್ನು ಕೆಣಕಿವೆ! ‘ನಾ ಹೋಗುವೆ, ಸಾವಿಗೆ ಅಂಜುವುದಿಲ್ಲ, ಆದರೆ ನನ್ನ ಸಾವು ನನ್ನಂತಹ ಸಾವಿರಾರು ಜನರನ್ನು ಹುಟ್ಟು ಹಾಕುತ್ತದೆ, ಇದು ಸತ್ಯ’ ಎಂದ ಅವಳ ಆ ಮಾತು ಹಿಟ್ಲರ್‌ನ ನಿದ್ರೆಗೆಡಿಸಿ ರಾಷ್ಟ್ರಭಕ್ತಿ ಮತ್ತು ಜನಾಂಗ ಪ್ರೇಮ ಎಂಬ ತನ್ನ ಆಯುಧಗಳನ್ನು ಜನಸಾಮಾನ್ಯರ ನಡುವೆ ಮತ್ತಷ್ಟು ಆಳವಾಗಿ ಬಿತ್ತಲು ಕಾರ್ಯೋನ್ಮುಖನಾಗಿದ್ದಾನೆ.

ಆದರೆ ಅವನನ್ನು ಕೆಣಕುವ ಹೆಣ್ಣುಗಳ ಪ್ರಯತ್ನ ಸೋಫಿ ಸ್ಕಾಲ್‌ನೊಂದಿಗೇ ಮುಗಿದುಹೋಗಲಿಲ್ಲ. ಹತ್ತು ಹಲವು ಹೆಣ್ಣುಗಳು ಜರ್ಮನಿಯಲ್ಲಿ ಮಾತ್ರವಲ್ಲದೆ ಯುರೋಪಿನ ವಿವಿಧ ದೇಶಗಳಲ್ಲೂ ಹಿಟ್ಲರ್‌ನ ನಿದ್ರೆ ಹಾಳು ಮಾಡಿ ಕಂಗೆಡಿಸಿದ ಹತ್ತಾರು ಉದಾಹರಣೆಗಳಿವೆ. ಜರ್ಮನಿಯವಳೇ ಆದ ಕಮ್ಯುನಿಸ್ಟ್ ಪಕ್ಷದ ಲಿಲೊ ಹೆರ‍್ಮನ್ನ್; ರಷ್ಯಾದ ಪ್ರಾಂತ್ಯವೊಂದನ್ನು ನಾಜಿ ಸೇನೆ ವಶಪಡಿಸಿಕೊಂಡಾಗ ಅದರ ವಿರುದ್ಧ ಸೆಟೆದು ನಿಂತು ಹೋರಾಡಿದ ರಷ್ಯಾದ ಜೋಯಾ ಕೋಸ್‌ಮೊಡಮ್‌ಯಾನಸ್ಕಾಯ, ಡೆನ್ಮಾರ್ಕ್‌ನ ಮೊನಿಕಾ ವೆಚ್ಫಿಲ್ಡ್ ಹೀಗೆ ಹಲವಾರು ದಿಟ್ಟ ಹೆಣ್ಣುಗಳಿದ್ದಾರೆ!

ಇವರೆಲ್ಲರಿಗೆ ಮುಂಚೂಣಿಯಾಗಿ ಇದ್ದವಳು ರೋಸಾ ಲಕ್ಸಂಬರ್ಗ್! ಹಿಟ್ಲರ್ ಅಧಿಕಾರಕ್ಕೆ ಬರುವ ಮುಂಚೆಯೇ ಜರ್ಮನಿಯ ಪೊಲೀಸನೊಬ್ಬ ಇವಳ ಹಣೆಗೆ ಗುಂಡಿಟ್ಟು ಕೊಂದಿದ್ದ. ಯಹೂದಿ ಹೆಂಗಸಾಗಿದ್ದ ಈಕೆ ಕಮ್ಯುನಿಸ್ಟ್ ಪಕ್ಷದ ಬುದ್ಧಿಜೀವಿ. ಅವರೊಂದಿಗೆ ಸೇರಿ ಬಡಜನರ ಹೋರಾಟವನ್ನು ಕಟ್ಟಲು ಯೋಜನೆಗಳನ್ನು ರೂಪಿಸುತ್ತಿದ್ದವಳು. ಇಂದಿಗೂ ಅವಳನ್ನು ಲೇಡಿ ಚೆಗುವಾರ ಎಂದೇ ಗುರುತಿಸಲಾಗುತ್ತಿದೆ.

ಹಿಟ್ಲರ್ ಅಧಿಕಾರಕ್ಕೇರುವ ಮುಂಚೆಯೇ ರೋಸಾ ಲಕ್ಸಂಬರ್ಗ್ ಸಾವನ್ನಪ್ಪಿದ್ದರೂ ಒಂದಲ್ಲ ಒಂದು ಬಗೆಯಲ್ಲಿ ಅವನನ್ನು ಕಾಡಿದವಳೇ! ನಂತರವೂ ಹಿಟ್ಲರ್ ಅವಳ ಬರಹಗಳನ್ನು ಹುಡುಕ್ಹುಡುಕಿ ಸುಟ್ಟು ಹಾಕಿಸಿದ.

ದ್ವೇಷದಿಂದ ಹೊರಟ ಹಿಟ್ಲರ್‌ನ ಇಂತಹ ರಾಜಕೀಯ ನಡೆ ಲಕ್ಷಾಂತರ ಜನರನ್ನು ಕೊಂದು ಕೊನೆಗೆ ರಕ್ತದಲ್ಲೇ ಅಂತ್ಯಗೊಂಡಿತು. ಆದರೆ ಅವನು ಹುಟ್ಟುಹಾಕಿದ ಹಿಂಸೆ ಅದೆಷ್ಟೋ ಸಾಮಾನ್ಯ ಹೆಣ್ಣು- ಗಂಡುಗಳಲ್ಲಿ ಮರುರೂಪು ಪಡೆದು ರಾಷ್ಟ್ರೀಯತೆಯ, ಜನಾಂಗವಾದದ ಹೆಸರಲ್ಲಿ ಮನುಷ್ಯರನ್ನು ಕೊಲ್ಲುತ್ತಾ ಇಂದಿಗೂ ಒಂದಲ್ಲ ಒಂದು ಬಗೆಯಲ್ಲಿ ಠೇಂಕರಿಸುತ್ತಿರುವ ಕಾರಣವಾದರೂ ಏನು? ಶತಶತಮಾನಗಳಿಂದ ಜಗತ್ತಿನಲ್ಲಿರುವ ಜನಾಂಗೀಯ ದ್ವೇಷವೆ? ಅಥವಾ ಮನುಷ್ಯರ ಒಳಗೆ ಭದ್ರವಾಗಿ ಕೂತಿರುವ ಹಿಂಸಾನಂದವೆ? ಯುದ್ಧದಾಹಿ ಪ್ರಭುತ್ವಗಳೆ? ಬಂಡವಾಳಶಾಹಿ ವ್ಯವಸ್ಥೆಯ ಕ್ರೂರ ನರ್ತನವೆ? ಸಿದ್ಧಾಂತಗಳ ಹುಚ್ಚು ವಿಶ್ವಾಸವೆ?

ಆರ್ಯನ್, ಜರ್ಮನ್ ಎಂಬ ಜನಾಂಗೀಯ/ ರಾಷ್ಟ್ರೀಯ ರೋಗ ಅವನನ್ನು ಮಾತ್ರ ಬಲಿ ತೆಗೆದುಕೊಳ್ಳದೆ ಇಡೀ ಮಾನವಕುಲವನ್ನೇ ಇಂದಿಗೂ ಹಿಂಡಿಹಿಪ್ಪೆ ಮಾಡುತ್ತಿದೆ. ಅವನು ಬೆಳೆಸಿ ನೀರುಣಿಸಿದ ದ್ವೇಷ, ಹಿಂಸೆಗಳು ಕಾಲ ಜರುಗಿದಂತೆ ಅವನಿಂದ ನರಳಿದ ಯಹೂದಿಯರನ್ನೂ ಆವರಿಸಿಕೊಳ್ಳಲು ಕಾರಣವೇನು? ಯಹೂದಿಯರನ್ನು ಮಾತ್ರವಲ್ಲದೆ ಜಗತ್ತಿನ ಬಹುತೇಕ ದೇಶ– ಧರ್ಮಗಳನ್ನು ಹಿಡಿದುಕೊಂಡಿರುವ ಅವುಗಳ ಮೂಲ ಯಾವುದು?

ಸೌಮ್ಯ, ಶಾಂತ, ತಾಳ್ಮೆಯ ಪ್ರತೀಕ ಎಂದು ಹೇಳಲಾಗುವ ಕೋಮಲ ಹೆಣ್ಣುಗಳೂ ಇವನ ಕಾಲದಲ್ಲಿ ಹಿಂಸೆಗಿಳಿದುದ್ದನ್ನು ಹೇಗೆ ಅರ್ಥೈಸಿಕೊಳ್ಳುವುದು? ಈ ಪ್ರಶ್ನೆಗಿಂತ ಮಗದೊಂದು ಪ್ರಶ್ನೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ, ಆ ಪ್ರಶ್ನೆ ಹೀಗಿದೆ: ಹಿಂಸೆ ಎಂದರೇನು? ಮನುಷ್ಯರ ಅಸಹಜ ಗುಣವೇ ಹಿಂಸೆ? ಈ ಪ್ರಶ್ನೆಗೆ ನನ್ನಂತಹವರ ಉತ್ತರ: ಇಲ್ಲ! ಹಿಂಸೆ ಎನ್ನುವುದು ನಮ್ಮೊಳಗಿನ ಸದಾ ಉರಿಯುವ ಬೆಂಕಿ!

ಹಿಂಸೆಯನ್ನು ನಾವಿನ್ನೂ ವಿಕ್ಟೋರಿಯನ್ ಯುಗದ ಸಾಂಪ್ರದಾಯಿಕ ಅರ್ಥದಲ್ಲೇ ಗ್ರಹಿಸುತ್ತಿರುವ ಕಾರಣವೇ ಹಿಟ್ಲರ್‌ನಂತಹವರು ಇಂದು ಜಗತ್ತಿನೆಲ್ಲೆಡೆ ಹಿಂಸೆಯನ್ನು ಮೆರೆಸಲು ಸಾಧ್ಯವಾಗುತ್ತಿರುವುದು ಮತ್ತದನ್ನು ದ್ವೇಷದ ಸರಕಾಗಿ ಬಳಸಿಕೊಳ್ಳುತ್ತಿರುವುದು.

ಈಗ ತುರ್ತಾಗಿ ಆಗಬೇಕಾಗಿರುವುದು ಹಿಂಸೆಯನ್ನು ತಡೆಯುವ ಆಯುಧಗಳಲ್ಲ; ಶಾಂತಿ- ಅಹಿಂಸೆ ಎಂಬ ಮನುಷ್ಯ ಜನ್ಮದ ಅಸಹಜ ಗುಣಗಳ ಪಠಣವಲ್ಲ, ಬದಲಿಗೆ ಹಿಂಸೆಯನ್ನು ಮನುಷ್ಯ ಸಹಜ ಸ್ವಭಾವ ಎಂದು ಒಪ್ಪಿಕೊಂಡು ಅದರ ಮೇಲೆ ಹೇರಿರುವ ಬೂರ್ಜ್ವಾ ಮೂಟೆಗಳನ್ನು ಇಳಿಸಬೇಕಿರುವ ಕ್ರಿಯೆ! ಹಿಂಸೆಯ ಕುರಿತಾದ ವಿಚಾರಗಳು ಮರುವ್ಯಾಖ್ಯಾನಗೊಳ್ಳಬೇಕಿದೆ.

ನಮ್ಮ ನಡುವಿನ ಶ್ರೇಷ್ಠ ಚಿಂತಕ ಡಿ.ಆರ್. ನಾಗರಾಜ್ ತಮ್ಮ ಒಂದು ಲೇಖನದಲ್ಲಿ ಹಿಂಸೆಯ ಕುರಿತಾಗಿ ಹೀಗೆ ಬರೆಯುತ್ತಾರೆ: ರಕ್ತ ಎಲ್ಲಿಂದ ಚಿಮ್ಮುತ್ತಿದೆ ಎಂದು ತಿಳಿಯಲು ಅದರ ಮೂಲಕ್ಕೆ ಕೈ ಹಾಕುವ ಮಾನಸಿಕ ಧೈರ್ಯ ಬೇಕು. ಉದಾರವಾದಿ ಮತ್ತು ಮಾನವತಾವಾದಿ ಕಾಳಜಿಗಳಿಗೆ ಆ ಬಗೆಯ ನೈತಿಕ, ಬೌದ್ಧಿಕ ಧೈರ್ಯ, ಗಟ್ಟಿ ಗುಂಡಿಗೆ ಇಲ್ಲ. ಯಾವುದು ಹಿಂಸೆಯನ್ನು ಮಹಾಕಾವ್ಯದ ದೃಷ್ಟಿಕೋನದಿಂದ ವರ್ಣಿಸಲಾಗದೊ ಅದು ಹಿಂಸೆಯನ್ನು ತಡೆಗಟ್ಟಲಾರದು ಕೂಡ. 

ನಮ್ಮ ಕಾಲದ ಪ್ರಖರ ಚಿಂತಕನಾದ ಲೂಯಿ ಅಲ್ಥೂಸರ್‌ನ ಮಾತಿನಂತೆ ಶತಮಾನಗಳಿಂದ ಸಮಾಜದಲ್ಲಿ ಚಾಲ್ತಿಯಲ್ಲಿರುವ ಮಾನವೀಯತೆ ಎಂಬ ಅಡುಗೂಲಜ್ಜಿ ಥಿಯರಿಯನ್ನು ವಿಮರ್ಶೆಗೊಳಪಡಿಸಿ ಹಿಂಸೆಯ ಪದರುಗಳನ್ನು ಬಿಡಿಸಿಕೊಳ್ಳಬೇಕಿದೆ.

ನವ್ಯೋತ್ತರ ತತ್ವಜ್ಞಾನದ ದಾದಾ ಮಿಷೆಲ್ ಫುಕೊ ಹೇಳುವಂತೆ ಸಹಜ ಮನುಷ್ಯನೆನ್ನುವ ಒಂದು ಅಸ್ತಿತ್ವವೇ ಸತ್ತುಹೋಗಿರುವ ಈ ಸಮಾಜದಲ್ಲಿ ನಿರ್ಮನುಷ್ಯೀಕರಣಗೊಳ್ಳುವುದೇ ಮಾನವೀಯಗೊಳ್ಳಲು ಉಳಿದಿರುವ ಒಂದೇ ಹಾದಿ. ಅಂದರೆ ಪ್ರಭುತ್ವ/ ಸಂಸ್ಥೆಗಳಿಂದ ನಮಗೆ ಅಂಟಿಕೊಂಡಿರುವ ಎಲ್ಲಾ ಬಗೆಯ ಅಸ್ಮಿತೆಗಳನ್ನು ಕಳಚಿ ಸಹಜ ಮನುಷ್ಯನಾಗುವುದೇ ಹಿಂಸೆಯನ್ನು ಅರ್ಥಮಾಡಿಕೊಳ್ಳುವ ಹಾದಿ.

ಗಂಡು ಹೆಣ್ಣು ಎಂಬ ಅಸ್ತಿತ್ವಗಳನ್ನೇ ವಿರೋಧಿಸಿದ್ದ ರೋಸಾಳನ್ನೂ, ಮನುಷ್ಯ ಸತ್ತುಹೋದ ಎಂದು ಸಾರುವ ಮಿಷೆಲ್ ಫುಕೊನನ್ನೂ, ಮಾನವೀಯತೆ ಎಂಬುದು ಒಂದು ಸುಳ್ಳಿನ ಕಂತೆ ಎನ್ನುವ ಅಲ್ಥೂಸರನನ್ನೂ ನಿಮ್ಮೆದುರು ಇಟ್ಟು ಈ ಹಂತದಿಂದ ನಿಮ್ಮೊಳಗೆ ಮತ್ತೊಂದು ಸಂವಾದವನ್ನು ಶುರುಮಾಡಲು ಬಯಸುತ್ತೇನೆ. 

**

ಶಾಂತಿಯ ಬಾವುಟಕ್ಕೆ ನೆತ್ತರ ಕಲೆ

ಜಗತ್ತಿನೆಲ್ಲೆಡೆ ಸಮಾಜವಾದೀ ರಾಷ್ಟ್ರಗಳನ್ನು ಕಟ್ಟಿ, ದುಡಿವ ವರ್ಗಗಳಿಗೆ ಸ್ವಾತಂತ್ರ್ಯ ಸಿಗಬೇಕೆಂದು ಕನಸುತ್ತಿದ್ದ ರೋಸಾ, ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಜನರನ್ನು ಸಂಘಟಿಸಿ ತನ್ನ ರಾಷ್ಟ್ರ ಜರ್ಮನಿಯ ಯುದ್ಧದಾಹಿ ನಿಲುವುಗಳೆದುರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಳು; ಸೇನೆ ಮತ್ತು ಜನಸಾಮಾನ್ಯರು ಈ ಯುದ್ಧದಲ್ಲಿ ಭಾಗವಹಿಸದೆ ದೇಶದೊಳಗಿರುವ ವರ್ಗ ತಾರತಮ್ಯವನ್ನು ಹೋಗಲಾಡಿಸಲು ಆಂತರಿಕ ಯುದ್ಧಕ್ಕೆ ಕರೆ ಕೊಡಬೇಕು ಎಂದು ಸಾರ್ವಜನಿಕವಾಗಿ ಕರೆ ಕೊಡುತ್ತಿದ್ದಳು.

ಜರ್ಮನಿ ಆ ಸಮಯದಲ್ಲಿನ್ನೂ ಯಹೂದಿ ದ್ವೇಷ, ಉಗ್ರರಾಷ್ಟ್ರವಾದ ಮತ್ತು ಫ್ಯಾಸಿಸ್ಟ್ ನಿಲುವುಗಳನ್ನು ಹೊಂದಿರಲಿಲ್ಲ; ಹಿಟ್ಲರ್ ಇನ್ನೂ ಅಧಿಕಾರಕ್ಕೇರದ ಸಮಯ ಅದು. ಕಮ್ಯುನಿಸ್ಟರನ್ನು ಮಾತ್ರ ವಿರೋಧಿಸುತ್ತಿದ್ದ ಅಂದಿನ ಜರ್ಮನಿಯ ಬಲಪಂಥೀಯ ಸರ್ಕಾರ ರೋಸಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಲು ತೀರ್ಮಾನಿಸಿತ್ತು. ಸರ್ಕಾರದ ಈ ತೀರ್ಮಾನ ಜಾರಿಯಾಗುವುದರೊಳಗೇ ಪೊಲೀಸ್ ಅಧಿಕಾರಿಗಳ ತಂಡವೊಂದು ಅವಳನ್ನು ಮತ್ತು ಅವಳ ಪ್ರಿಯಕರನನ್ನು ಬಂಧಿಸಿ ರಸ್ತೆಯಲ್ಲಿ ಇಳಿಸಿ ಅವಳ ಹಣೆಗೆ ಗುಂಡಿಟ್ಟು ಕೊಂದು ಬರ್ಲಿನ್ ನಗರದ ಸ್ತ್ರೀ ನದಿಯ ಕಾಲುವೆಯೊಂದರಲ್ಲಿ ಎಸೆಯಿತು.

**

ಹಿಂಸಾನಂದರ ಜನಾಂಗೀಯ ದ್ವೇಷ

ಹಿಟ್ಲರ್ ನಡೆಸಿದ ನರಮೇಧ ನಮ್ಮಲ್ಲಿ ಅನೇಕರಿಗೆ ತಿಳಿದೇ ಇದೆ. ಮೊದಲನೆಯ ವಿಶ್ವಯುದ್ಧದಲ್ಲಿ ಜರ್ಮನಿ ಸೋತು ದುಃಸ್ಥಿತಿಗೆ ಬೀಳಲು ಯಹೂದಿಗಳೇ ಕಾರಣ ಎಂಬಲ್ಲಿಂದ ಶುರುವಾದ ಅವನ ಯಹೂದಿ ವಿರೋಧಿ ಹೋರಾಟ ಯುರೋಪ್‌ನಲ್ಲಿ ಶತಶತಮಾನಗಳಿಂದ ಅಂತರ್ಗತವಾಗಿದ್ದ ಜನಾಂಗೀಯ ದ್ವೇಷವನ್ನು ಚೆನ್ನಾಗಿಯೇ ಬಳಸಿಕೊಂಡಿತು.

ಪುರಾತನ ಕಾಲದಿಂದಲೂ ಇದ್ದ ಕ್ರಿಶ್ಚಿಯನ್ ವರ್ಸಸ್ ಯಹೂದಿ ಅಥವಾ ಆರ್ಯನ್ ವರ್ಸಸ್ ಸೆಮಿಟಿಕ್ ಜನಾಂಗಗಳ ನಡುವಿನ ದ್ವೇಷ ಮೆಲ್ಲಗೆ ರಾಜಕೀಯ ತಿರುವು ಪಡೆದು ಉಗ್ರ ರಾಷ್ಟ್ರೀಯತೆಯ ಸೋಗಿನಲ್ಲಿ ಸುಮಾರು ಹನ್ನೆರಡು ಮಿಲಿಯನ್ ಯಹೂದಿಗಳನ್ನು ಕೊಂದುಹಾಕಿಸಿತು. ಹಿಟ್ಲರ್‌ನ ಯಹೂದಿ ದ್ವೇಷ ರಾಜಕಾರಣದ ಸುಳಿಯಲ್ಲಿ ಮೈಮರೆತ ಜರ್ಮನಿ ಯಹೂದಿಗಳನ್ನು ಹುಡುಕಿ ಹುಡುಕಿ ಹಿಡಿದು ಅವರನ್ನು ಸಾಯಿಸಲೆಂದೇ ನಿರ್ಮಿಸಿದ ಕೋಣೆಗಳಿಗೆ ತುಂಬುವ ಹಂತಕ್ಕೆ ಬದಲಾಯಿತು.

ಯಹೂದಿಗಳನ್ನು ಮಾತ್ರವಲ್ಲದೆ ಕಮ್ಯುನಿಸ್ಟರನ್ನು, ಅವನ ರಾಷ್ಟ್ರೀಯವಾದವನ್ನು ವಿರೋಧಿಸುತ್ತಿದ್ದವರನ್ನು, ಜಿಪ್ಸಿಗಳನ್ನು, ಅಂಗವಿಕಲರನ್ನು, ಸಲಿಂಗಕಾಮಿಗಳನ್ನು ಕಾನ್ಸಂಟ್ರೇಷನ್ ಕ್ಯಾಂಪಿಗೆ ತಳ್ಳಿ ಹಿಂಸೆ ನೀಡಿ, ಅನ್ನ ನೀರು ಕೊಡದೆ ಕೂಡಿ ಹಾಕಿ ಕೊನೆಗೊಂದು ದಿನ ಸರತಿಯಲ್ಲಿ ಅವರುಗಳನ್ನು ಗ್ಯಾಸ್ ಛೇಂಬರ್‌ಗೆ ತಳ್ಳಿ ಉಸಿರುಗಟ್ಟಿಸಿ ಸಾಯಿಸಲಾಗುತ್ತಿತ್ತು.

ತನ್ನ ವಿರೋಧಿಗಳಿಗೆ ಚಿತ್ರ ವಿಚಿತ್ರ ಹಿಂಸೆ ನೀಡುವ ಜನರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಹಿಟ್ಲರ್ ಅವರುಗಳಿಗೆ ಭಕ್ಷೀಸು ನೀಡಿ ಉತ್ತೇಜಿಸುತ್ತಿದ್ದ ಕೂಡ. ಯಹೂದಿಗಳನ್ನು ವಿರೋಧಿಸುವ ಹುಮ್ಮಸ್ಸಿನಲ್ಲಿದ್ದ ಜನ ತಾ ಮುಂದು ನೀ ಮುಂದು ಎಂದು ಬಂದು ಹಿಂಸಾನಂದ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ತಮ್ಮ ಅಧ್ಯಕ್ಷನ ಮೆಚ್ಚಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ತಿಳಿದಿದ್ದ ಹಿಂಸಾನಂದರು ಅದೆಷ್ಟೊ ಭಂಗಿಗಳನ್ನು ಪ್ರಯತ್ನಿಸಿ ಸುಸ್ತಾಗುತ್ತಿದ್ದರು.

**

ಗಿಲೆಟಿನ್ ಯಂತ್ರ

ಗಿಲೆಟಿನ್ ಎನ್ನುವುದು ಕೈದಿಗಳ ತಲೆ ಕಡಿಯಲೆಂದೇ ತಯಾರಿಸಲ್ಪಟ್ಟಂತಹ ಸಾವಿನ ಯಂತ್ರ! 18ನೇ ಶತಮಾನದಲ್ಲಿ ಫ್ರೆಂಚ್‌ನಲ್ಲಿ ನಡೆದ ಕ್ರಾಂತಿ ಸಂದರ್ಭದಲ್ಲಿ ರಾಜಪ್ರಭುತ್ವ ಕಂಡು ಹಿಡಿದಿದ್ದ ಈ ಮೆಷಿನ್‌ಗೆ ಹಿಟ್ಲರ್ ಮರುರೂಪು ಕೊಟ್ಟು ತನ್ನ ವಿರೋಧಿಗಳನ್ನು ಶಿಕ್ಷಿಸಲು ಬಳಕೆಗೆ ತಂದ! ಈ ಯಂತ್ರ ಬಳಸಿ ಸಾವಿರಾರು ಜನರ ತಲೆಗಳನ್ನು ಕಡಿದುಹಾಕಲಾಯಿತು.

ಮನುಷ್ಯರ ತಲೆಗಳನ್ನು ಈ ಯಂತ್ರದ ವೃತ್ತಾಕಾರದೊಳಗೆ ತೂರಿಸಲ್ಪಟ್ಟು, ನಂತರ ಅದರ ಮೇಲಿರುವ ಚೂಪಾದ ಕತ್ತಿ ಹಲಗೆಯನ್ನು ಅದುಮಿ ಒಂದೇ ಏಟಿಗೆ ತುಂಡರಿಸಲಾಗುತ್ತಿತ್ತು. ಹಾಗೆ ತುಂಡರಿಸಿದ ನಂತರವೂ ಮನುಷ್ಯರ ಮಿದುಳು ಕನಿಷ್ಠ ಇಪ್ಪತ್ತು ಸೆಕೆಂಡ್ ಆದರೂ ಕ್ರಿಯಾಶೀಲವಾಗಿರುತ್ತಿತ್ತಂತೆ.

ತುಂಡರಿಸಿದ ಕೆಲವು ತಲೆಗಳೊಳಗಿನ ಕಣ್ಣುಗಳು ಪಿಳಿಪಿಳಿ ಎಂದು ಆಡಿಸುತ್ತಿದ್ದರೆ ತಲೆ ಕಡಿದಾತ ಆ ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಹಾಕಿದ ಕಥೆಗಳೂ ಇವೆ. ಕೆಲವು ಗಿಲೆಟಿನ್‌ಗಳು ಚೂಪಾಗಿರದೆ ಮನುಷ್ಯರ ತಲೆಗಳು ಅರ್ಧ ಕಡಿಯಲ್ಪಟ್ಟು ಇನ್ನರ್ಧ ನೇತಾಡುತ್ತಿದ್ದ ಸಂದರ್ಭಗಳು ಇದ್ದವು. ಸರಿಯಾಗಿ ಕತ್ತರಿಸುವ ಗಿಲೆಟಿನ್ ಆಪರೇಟರ್‌ಗಳಿಗೆ ಪ್ರತಿ ತಿಂಗಳು ಸಂಬಳದಲ್ಲಿ ಹೆಚ್ಚಳವಿರುತ್ತಿತ್ತು.

ಇನ್‌ಕ್ರಿಮೆಂಟ್ ದುಪ್ಪಟ್ಟು ಸಿಗುತ್ತಿತ್ತು. ಆ ಹಣದ ಆಸೆಯಲ್ಲಿ ದೇಶದ್ರೋಹಿಗಳ ತಲೆ ಕಡಿಯಲು ಬಹು ಉತ್ಸಾಹ ತೋರುತ್ತಿದ್ದವರಲ್ಲಿ ಜೋಹನಾನ್ ರಿಚ್ಚರ್ಟ್ ಮುಖ್ಯವಾದವನು. ಅವನ ಕಾರ್ಯದಕ್ಷತೆ ನೋಡಿ ಹಿಟ್ಲರನೇ ಮೆಚ್ಚುಗೆ ಸೂಸಿದ್ದಾನೆ.

ಅವನ ಸಂಬಳವನ್ನು ಎರಡರಷ್ಟು ಹೆಚ್ಚಿಸಿ ಮತ್ತಷ್ಟು ಉತ್ತೇಜಿಸಿದ್ದಾನೆ. ಗಿಲೆಟಿನ್‌ನಲ್ಲಿ ಮನುಷ್ಯರ ತಲೆ ಕಡಿದು ಹೇರಳವಾಗಿ ದುಡ್ಡು ಸಂಪಾದಿಸಿದ ಇವನು ಮ್ಯೂನಿಕ್ ನಗರದ ಮುಖ್ಯಬೀದಿಯಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದಾನೆ. ಮುಖ್ಯವೆನಿಸುವ ಕೇಸ್‌ಗಳು ಮಾತ್ರ ಇವನ ಬಳಿ ಬರುವುದು. ಹಾಗೆ ಬಂದ ಕೇಸ್‌ಗಳಲ್ಲಿ ಸೋಫಿ ಸ್ಕಾಲ್‌ದೂ ಒಂದು.

ಇಪ್ಪತ್ತರ ಹರೆಯದ ಈ ಬಾಲೆಯನ್ನು ಕಡಿಯುವಾಗಿನ ಅನುಭವಗಳನ್ನು ಜೋಹನಾನ್ ವಿವರಿಸಿರುವ ದಾಖಲೆಗಳಿವೆ. ತನ್ನ ದೇಶದ ಸಭ್ಯ ಹೆಂಗಸರಿಗೆ ವಿರುದ್ಧವಾಗಿದ್ದ ಇವಳನ್ನು ಒಂದೇ ಏಟಲ್ಲಿ ತುಂಡರಿಸಬೇಕೆಂದು ನಿಂತು ಅವಳ ಕಣ್ಣುಗಳನ್ನು ನೋಡುತ್ತಾನೆ.ಚೂರಾದರೂ ತಪ್ಪಿತಸ್ಥಳಾದ ಭಯ ಕಾಣುತ್ತಿದೆಯೆ? ಇಲ್ಲ ಒಂದಿನಿತೂ ಇಲ್ಲ!

ಧೈರ್ಯದ ಕೆಂಗಣ್ಣು ಅವನನ್ನೇ ಚಣ ಹೆದರಿಸಿದೆ! ಅವಳನ್ನು ಗಿಲೆಟಿನ್ ಯಂತ್ರದ ಮೇಲೆ ಮಲಗಿಸಿ ಅವಳ ತಲೆಯನ್ನು ರಂಧ್ರದಲ್ಲಿ ತೂರಿಸಿದಾಗ ಅವಳು ಜೋರು ಧ್ವನಿಯಲ್ಲಿ ‘ಸ್ವಾತಂತ್ರ್ಯ ಚಿರಾಯುವಾಗಲಿ’ (ಲಾಂಗ್ ಲಿವ್ ಫ್ರೀಡಂ)  ಎಂದು ಕೂಗಿ ಕತ್ತಿಯ ಚೂಪಾದ ಹಲಗೆಗೆ ಕಣ್ಣು ತೆರೆದೇ ಕುತ್ತಿಗೆ ಕೊಟ್ಟಿದ್ದಾಳೆ. ತಾ ಕಂಡ ಅತಿ ಧೈರ್ಯವಂತ ಆರೋಪಿಗಳಲ್ಲಿ ಇವಳು ಮೊದಲಿಗಳು ಎನ್ನುತ್ತಾನೆ ಜೋಹನಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT