ಶನಿವಾರ, ಡಿಸೆಂಬರ್ 14, 2019
24 °C
ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪದಲ್ಲಿ ಘಟನೆ: ಕಾರಣ ನಿಗೂಢ

ಬಾದಾಮಿ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಆಸ್ಟ್ರೇಲಿಯಾ ವ್ಯಕ್ತಿಯ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಆಸ್ಟ್ರೇಲಿಯಾದ ಪ್ರವಾಸಿ ವಿಲಿಯಮ್ಸ್ ಕೆರಿಯನ್‌ ಜೇಮ್ಸ್ ಎಂಬುವರ ಮೇಲೆ ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ವಿಲಿಯಮ್ಸ್ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸೋಮವಾರ ತಡರಾತ್ರಿ ಆಸ್ಪತ್ರೆಗೆ ಕರೆತಂದಾಗಲೂ ಅವರ ಕೈ–ಕಾಲು ಕಟ್ಟಿದ ಸ್ಥಿತಿಯಲ್ಲಿಯೇ ಇತ್ತು. ಮಕ್ಕಳ ಕಳ್ಳನಿರಬಹುದು ಎಂಬ ಅನುಮಾನದಿಂದ ಗ್ರಾಮಸ್ಥರು ಥಳಿಸಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಘಟನೆ ಸಂಬಂಧ ಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ಟ್ರೇಲಿಯಾದ ಮೇಲ್ಬರ್ನ್ ನಿವಾಸಿ 35 ವರ್ಷದ ವಿಲಿಯಮ್ಸ್, ಬಾದಾಮಿ ಸ್ಮಾರಕಗಳ ವೀಕ್ಷಣೆಗೆ ಬಂದಿದ್ದು, ರಾತ್ರಿ ಅಲ್ಲಿಂದ 15 ಕಿ.ಮೀ ದೂರದ ಕೊಂಕಣಕೊಪ್ಪ ಗ್ರಾಮಕ್ಕೆ ಹೋಗಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಅವರು, ಸ್ಥಳೀಯ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಸ್ಥಳೀಯರು ವಿಲಿಯಮ್ಸ್ ಕೈ–ಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಸ್ಪಷ್ಟಪಡಿಸಿದ್ದಾರೆ. 

ವಿಲಿಯಮ್ಸ್ ಗ್ರಾಮದ ಓಣಿಗಳಲ್ಲಿ ಸಂಚರಿಸುವಾಗ ಅನುಮಾನಗೊಂಡ ಕೆಲವರು ವಿಚಾರಿಸಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ತಪ್ಪು ಗ್ರಹಿಕೆ ಉಂಟಾಗಿ ಹಲ್ಲೆ ನಡೆದಿರಬಹುದು ಎಂದೂ ಪೊಲೀಸರು ಶಂಕಿಸಿದ್ದರು.

ಬಾದಾಮಿಯ ಯಾವುದೇ ಹೋಟೆಲ್‌ನಲ್ಲಿ ವಿಲಿಯಮ್ಸ್ ಹೆಸರಿನ ವಿದೇಶಿಯರು ವಾಸ್ತವ್ಯ ಹೂಡಿಲ್ಲ. ಹೀಗಾಗಿ ಬಾಗಲಕೋಟೆಯ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಕರಣ ಸಂಬಂಧ ಬೆಳಗಾವಿಯ ಗುಪ್ತಚರ ವಿಭಾಗದ ಎಸ್‌ಪಿ ಚನ್ನಬಸವಣ್ಣ ಮಾಹಿತಿ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)