ಶುಕ್ರವಾರ, ಡಿಸೆಂಬರ್ 6, 2019
17 °C
ಆಸ್ಪತ್ರೆಗೆ ದಾಖಲಾಗಿದ್ದ ಆಸ್ಟ್ರೇಲಿಯಾದ ಪ್ರವಾಸಿ ಆರೋಗ್ಯದಲ್ಲಿ ಚೇತರಿಕೆ

ಕಳ್ಳನೆಂದುಕೊಂಡು ವಿದೇಶಿ ಪ್ರಜೆ ಮೇಲೆ ಹಲ್ಲೆ?

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪದಲ್ಲಿ ಮೂರು ತಿಂಗಳ ಹಿಂದೆ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳರ ಮೇಲಿದ್ದ ಗ್ರಾಮಸ್ಥರ ಆಕ್ರೋಶ, ಸೋಮವಾರ ರಾತ್ರಿ ಊರಿಗೆ ಬಂದು ಅನುಮಾನಾಸ್ಪದವಾಗಿ ವರ್ತಿಸಿದ ಆಸ್ಟ್ರೇಲಿಯಾ ಪ್ರಜೆ ವಿಲಿಯಮ್ಸ್ ಕೈರನ್ ಜೇಮ್ಸ್ ಮೇಲೆ ತಿರುಗಿದೆ ಎನ್ನಲಾಗುತ್ತಿದೆ.

ಗ್ರಾಮದಲ್ಲಿ ಆಗಸ್ಟ್ ತಿಂಗಳಲ್ಲಿ ಒಂದೇ ವಾರದ ಅಂತರದಲ್ಲಿ ಐದು ಮನೆಗಳಲ್ಲಿ ಕಳವು ನಡೆದಿತ್ತು. ಮನೆಯೊಂದರಲ್ಲಿ ₹2 ಲಕ್ಷ ನಗದು, ಐದು ತೊಲೆ ಚಿನ್ನಾಭರಣ ದೋಚಿದ್ದರು. ಇನ್ನೊಂದು ಮನೆಯಲ್ಲಿ ₹50 ಸಾವಿರ ನಗದು ಕಳವು ಆಗಿತ್ತು. ಎರಡು ಆಡು ಕೂಡ ಕಳ್ಳರ ಪಾಲಾಗಿದ್ದವು.

‘ನಾವು ವಾರಗಟ್ಟಲೆ ಗಸ್ತು ತಿರುಗಿದರೂ ಕಳ್ಳರು ಸಿಕ್ಕಿರಲಿಲ್ಲ. ಆಗಿನಿಂದಲೂ ಊರಿಗೆ ಯಾರೇ ಅಪರಿಚಿತರು ಬಂದರೂ ಅನುಮಾನದಿಂದಲೇ ನೋಡಲಾಗುತ್ತಿತ್ತು. ಆದರೂ ವಿದೇಶಿಗನ ಮೇಲೆ ಹಲ್ಲೆ ಮಾಡಿದ್ದು ತಪ್ಪು’ ಎಂದು ಗ್ರಾಮಸ್ಥ ಮಂಜು ಹೇಳಿದರು. ‘ಬಾಗಲಕೋಟೆ ಎಪಿಎಂಸಿಗೆ ಕೆಲಸಕ್ಕೆ ಹೋಗುತ್ತೇನೆ. ರಾತ್ರಿ 10 ಗಂಟೆಗೆ ಊರಿಗೆ ಬಂದಾಗ ಎಲ್ಲ ಮುಗಿದಿತ್ತು’ ಎಂದು ತಿಳಿಸಿದರು.

ಇದನ್ನೂ ಓದಿ: ಬಾದಾಮಿ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಆಸ್ಟ್ರೇಲಿಯಾ ವ್ಯಕ್ತಿಯ ಮೇಲೆ ಹಲ್ಲೆ

ಮಾಡಿನ ಬಳಿ ಅವಿತಿದ್ದ: ಬಾದಾಮಿ– ಬಾಗಲಕೋಟೆ ಮುಖ್ಯ ರಸ್ತೆಯಲ್ಲಿಯೇ ಕೊಂಕಣಕೊಪ್ಪ ಇದೆ. ಸೋಮವಾರ ರಾತ್ರಿ 9 ಗಂಟೆ ಬಸ್‌ನಲ್ಲಿ ಬಾಗಲಕೋಟೆಗೆ ಟಿಕೆಟ್ ತೆಗೆದುಕೊಂಡಿದ್ದ ವಿಲಿಯಮ್ಸ್ ಕೊಂಕಣಕೊಪ್ಪದಲ್ಲಿಯೇ ಇಳಿದು, ನೇರವಾಗಿ ಊರೊಳಗೆ ಹೋಗಿ ಅಲ್ಲಿನ ಕಲ್ಮೇಶ್ವರ ಗುಡಿ ಪಕ್ಕದ ಬಸಪ್ಪ ಕಾಡನ್ನವರ ಮನೆಯ ಮಾಡಿನ ಬಳಿ ಅವಿತು ಕುಳಿತಿದ್ದರು ಎನ್ನಲಾಗಿದೆ.

ದನಗಳಿಗೆ ಮೇವು ಹಾಕಲು ಮಾಡಿನ ಬಳಿ ಬಾಲಕ ಭೀಮಶಿ ಬಂದಾಗ, ವಿಲಿಯಮ್ಸ್‌ ಅವನನ್ನು ತಳ್ಳಿದ್ದು, ಬಾಲಕ ಕಿರುಚಿಕೊಂಡಿದ್ದಾನೆ. ಗಲಾಟೆ ಕೇಳಿ ಮನೆ ಮಹಿಳೆಯರು ಧಾವಿಸಿದ್ದಾರೆ. ಅವರನ್ನು ತಳ್ಳಿಕೊಂಡು ಹೊರಹೋಗಲು ವಿಲಿಯಮ್ಸ್‌ ಯತ್ನಿಸಿದ್ದಾನೆ. ನುಗ್ಗುವ ಭರದಲ್ಲಿ ಮನೆಯ ಮಹಿಳೆಯರಿಗೂ ಏಟಾಗಿದೆ. ಆಗ ಗದ್ದಲವಾಗಿದೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಅಜಾನುಬಾಹು, ಉದ್ದ ಕೂದಲು, ಗಡ್ಡ ಬಿಟ್ಟಿದ್ದ. ಮತ್ತಿನಲ್ಲಿದ್ದಂತೆ ಕಂಡರು. ಗ್ರಾಮಸ್ಥರು ರಸ್ತೆವರೆಗೂ ಎಳೆದೊಯ್ದು ಬಸ್‌ ಹತ್ತಿಸಲು ಮುಂದಾದರು. ಅದಕ್ಕೆ ವಿಲಿಯಮ್ಸ್‌ ಪ್ರತಿರೋಧ ತೋರಿದ್ದು ವಿದ್ಯುತ್ ಕಂಬಕ್ಕೆ ಕಟ್ಟಲಾಯಿತು. ನಾವೇ (ಗ್ರಾಮಸ್ಥರು) ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ನೀರವ ಮೌನ: ಗ್ರಾಮಕ್ಕೆ ‘ಪ್ರಜಾವಾಣಿ’ ಮಂಗಳವಾರ ಭೇಟಿ ಕೊಟ್ಟಾಗ ನೀರವ ಮೌನ ಇತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ಮುಂಜಾನೆಯೇ ಎಂಟು ಮಂದಿಯನ್ನು ವಿಚಾರಣೆಗೆ ಕರೆದೊಯ್ದಿ
ದ್ದರು. ಹೀಗಾಗಿ, ಆ ಬಗ್ಗೆ ಮಾತನಾಡಲು ಬಹುತೇಕರು ಹಿಂಜರಿದರು.

ಕಾಡನ್ನವರ ಕುಟುಂಬದ ಗಂಡಸರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದು, ಹೆಣ್ಣು ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದರು.

‘ವಿಲಿಯಮ್ಸ್ ಬಳಿ ಇದ್ದ ಬ್ಯಾಗ್, ಪಾಸ್‌ಪೋರ್ಟ್ ಎಲ್ಲವನ್ನೂ ರಾತ್ರಿಯೇ ಪೊಲೀಸರಿಗೆ ನೀಡಿದ್ದೇವೆ. ₹20 ಸಾವಿರ ನಗದು ಇದ್ದ ಪರ್ಸ್ ಬೆಳಿಗ್ಗೆ ದೊರಕಿದೆ. ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ’ ಎಂದು ಗ್ರಾಮಸ್ಥ ಸಿದ್ದನಗೌಡ ತಿಳಿಸಿದರು.

ಒಬ್ಬರೇ ಪ್ರವಾಸ ಬಂದಿದ್ದರು: ವಿಲಿಯಮ್ಸ್ ಕೈರನ್ ಜೇಮ್ಸ್ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿವಾಸಿ. ಸೆ. 27ರಿಂದ ಒಬ್ಬಂಟಿಯಾಗಿ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಕೇರಳದ ಕೊಚ್ಚಿಯಿಂದ ಬಾದಾಮಿಗೆ ಬಂದಿದ್ದ ಅವರು, ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)