7
ಹಿಂದುಸ್ತಾನಿ ಸೇವಾದಳ ನೇತೃತ್ವ: ರಾಷ್ಟ್ರೀಯ ಭಾವೈಕ್ಯ ಸಮಾವೇಶ ಆಯೋಜನೆ

ಕವಲು ಹಾದಿಯಲ್ಲಿ ದೇಶ: ಬಿ.ಕೆ.ಹರಿಪ್ರಸಾದ್

Published:
Updated:
ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ–ಕಾಲೇಜು ಮಕ್ಕಳು ಹಾಗೂ ಶಿಕ್ಷಕರು

ಬಾಗಲಕೋಟೆ: ‘ಗಾಂಧೀಜಿ ಹಾಕಿಕೊಟ್ಟ ಹೆಜ್ಜೆಯಲ್ಲಿ ಸಾಗಬೇಕೊ, ಇಲ್ಲವೇ ಅವರನ್ನು ಕೊಂದ ಗೋಡ್ಸೆಯ ಮಾರ್ಗದಲ್ಲಿ ನಡೆಯಬೇಕೊ ಎಂಬ ಸಂದಿಗ್ಧತೆಯ ಕವಲು ಹಾದಿಗೆ ದೇಶ ಬಂದು ನಿಂತಿದೆ’ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇಲ್ಲಿನ ಹಿಂದುಸ್ತಾನಿ ಸೇವಾದಳ ಟ್ರಸ್ಟ್, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ಪರ ನಿಂತವರೇ ಇಂದು ರಾಷ್ಟ್ರಪ್ರೇಮದ ಬಗ್ಗೆ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯುವ ಜನತೆ ಎಚ್ಚರದಿಂದ ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಜಾತಿ–ಧರ್ಮ ಎನ್ನದೇ ಲಕ್ಷಾಂತರ ಜನರ ತ್ಯಾಗ–ಬಲಿದಾನದಿಂದ ಈ ದೇಶ ಸ್ವಾತಂತ್ರ್ಯ ಪಡೆದಿದೆ. ಆದರೆ ಬ್ರಿಟಿಷರ ರೀತಿ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ದ್ವೇಷ–ಅಸೂಯೆಯಿಂದ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ’ ಎಂಬುದನ್ನು ಅವರು ಅರಿಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಮಾಡುವ ಊಟ ಪರೀಕ್ಷಿಸುವ ಜೊತೆಗೆ ಯಾವ ರೀತಿಯ ಬಟ್ಟೆ ಹಾಕಬೇಕು. ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಿರ್ದೇಶಿಸುವ ಕೆಲಸ ನಡೆಯುತ್ತಿದೆ. ಅಪ್ಪ–ಅಮ್ಮ, ಗುರುಗಳು ಹೇಳಿದಂತೆ ಕೇಳಬೇಕು ಹೊರತು ಯಾರದ್ದೋ ಬೆದರಿಕೆಗೆ ಅಲ್ಲ. ಹಿಂದುತ್ವದ ಹೆಸರಲ್ಲಿ ಗಲಭೆ ಮಾಡುವವರು ಸಂವಿಧಾನ ವಿರೋಧಿಗಳು’ ಎಂದರು.

ದೆಹಲಿಯ ನ್ಯಾಷನಲ್ ಯೂತ್ ಪ್ರಾಜೆಕ್ಟ್‌ನ ನಿರ್ದೇಶಕ ಎಸ್.ಎನ್.ಸುಬ್ಬರಾವ್ ಮಾತನಾಡಿ, ‘ಬಂದೂಕು ಹಿಡಿದು ಬಲವಂತವಾಗಿ ಹಿಂದಿ ಕಲಿಸಲು ಸಾಧ್ಯವಿಲ್ಲ. ಇದನ್ನು ಆಳುವವರು ತಿಳಿಯಬೇಕು. ದೇಶ ತುಂಡಾಗದೆ ಅಖಂಡವಾಗಿ ಉಳಿಯಲು ದಕ್ಷಿಣದ ಭಾಷೆಗಳನ್ನು ಉತ್ತರದವರೂ ಕಲಿಯಬೇಕು’ ಎಂದರು.

‘ರಷ್ಯಾ, ಹಿಂದಿನ ಅಖಂಡ ಪಾಕಿಸ್ತಾನ, ಪಕ್ಕದ ಶ್ರೀಲಂಕಾ ದೇಶಗಳು ಭಾಷೆಯ ಬಲವಂತ ಹೇರಿಕೆಯಿಂದ ಅನುಭವಿಸಿದ ತೊಂದರೆ ನಮ್ಮ ಕಣ್ಣೆದುರು ಇದೆ. ದೇಶದ ಅಖಂಡತೆಯಲ್ಲಿ ಅದು ಒಳಗೊಂಡಿರುವ 1652 ಭಾಷೆಗಳೂ ಸೇರಿವೆ. ಭಾವೈಕ್ಯತೆಗೆ ಧರ್ಮದ ರೀತಿ ಭಾಷೆಯೂ ಮುಖ್ಯ. ಹಾಗಾಗಿ ಪ್ರೀತಿಯಿಂದ, ದೊಡ್ಡ ಮನಸ್ಸಿನಿಂದ ಬೇರೆಯವರಿಗೆ ಹಿಂದಿ ಕಲಿಸಿ ನಾವು ಅವರ ಭಾಷೆ ಕಲಿಯುವ ಕಾರ್ಯ ಉತ್ತರದವರಿಂದ ಆಗಬೇಕಿದೆ’ ಎಂದು ಹೇಳಿದರು.

‘ಅಶೋಕ, ಬುದ್ಧ, ಮಹಾವೀರ, ಗಾಂಧೀಜಿಯ ಭಾರತ ಇಂದು ಭ್ರಷ್ಟಾಚಾರಿ ಭಾರತವಾಗಿ ಬದಲಾಗಿದೆ. ಎಲ್ಲೆಡೆ ಸ್ವಾರ್ಥವೇ ಕಾಣಸಿಗುತ್ತಿದೆ. ಅವಕಾಶ ಸಿಕ್ಕರೆ ತಿನ್ನು, ಲೂಟಿ ಮಾಡು ಎಂಬ ಭಾವನೆ ನೋಡುತ್ತಿದ್ದೇವೆ. ಬದಲಾವಣೆ ಮೃತ್ಯು ದಂಡದಿಂದ ಬರೊಲ್ಲ. ಯುವ ಜನತೆಯ ಸುಳ್ಳು ಹೇಳೊಲ್ಲ, ಪ್ರಾಮಾಣಿಕವಾಗಿ ಇರುತ್ತೇವೆ ಎಂಬ ಸಂಕಲ್ಪ ಮಾಡಬೇಕು.ಅದು ಒಳಗಿನ ಪ್ರೇರಣೆಯಾಗಬೇಕು’ ಎಂದರು.

ಸಮಾರಂಭದಲ್ಲಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಹಿಂದೂಸ್ತಾನಿ ಸೇವಾದಳ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಛಬ್ಬಿ, ಭಾರತೀಯ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಾತಾ ಸಾಹೇಬ ಬಾಂಗಿ, ವಿಭಾಗ ಸಂಘಟಕ ಬಸವರಾಜ ಹಟ್ಟಿಗೌಡರ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !