ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢ

ಸೋಂಕಿನ ಮೂಲ ಪತ್ತೆಗೆ ಜಿಲ್ಲಾಡಳಿತದಿಂದ ಕಾರ್ಯಾಚರಣೆ ಆರಂಭ
Last Updated 3 ಏಪ್ರಿಲ್ 2020, 9:06 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಗುರುವಾರ ಬಾಗಲಕೋಟೆ ನಗರದಲ್ಲಿ ದೃಢಪಟ್ಟಿದೆ. ಸೋಂಕಿತ ವೃದ್ಧ ನಗರ ಬಿಟ್ಟು (ಟ್ರಾವೆಲ್ ಹಿಸ್ಟರಿ) ಎಲ್ಲಿಗೂ ಹೋಗಿಲ್ಲ. ಹೀಗಾಗಿ ಸೋಂಕಿನ ಮೂಲ ಪತ್ತೆಗೆ ಪ್ರಯತ್ನ ಸಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಆರ್.ರಾಜೇಂದ್ರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕಿತ ವ್ಯಕ್ತಿಯ ಮಗ ಹಾಗೂ ಮಗಳು ಇತ್ತೀಚೆಗಷ್ಟೇ ಬೆಂಗಳೂರಿನಿಂದ ಮರಳಿದ್ದರು. ಅವರಿಬ್ಬರು ಸೇರಿದಂತೆ ವೃದ್ಧನ ಪತ್ನಿ, ತಮ್ಮ, ತಮ್ಮನ ಹೆಂಡತಿ ಒಳಗೊಂಡಂತೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 10 ಮಂದಿಯನ್ನು ಈಗಾಗಲೇ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಎಲ್ಲರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ಜೊತೆಗೆ ವೃದ್ಧ ಇರುತ್ತಿದ್ದ ಅಂಗಡಿಗೆ ಯಾರಾದರೂ ಬಂದಿದ್ದು, ಅವರಿಂದ ಸೋಂಕು ಹರಡಿದೆಯೇ ಎಂಬುದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ.ಈಗಾಗಲೇ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ನಡೆದಿದೆ ಎಂದರು.

ವೃದ್ಧನ ಮನೆ ಹಾಗೂ ಅಂಗಡಿ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶ ಎಂದು ಗುರುತಿಸಲಾಗಿದೆ. ಆ ಪ್ರದೇಶದ ಒಳಗೆ ಹೋಗುವುದು, ಅಲ್ಲಿಂದ ಹೊರಗೆ ಬರುವುದು ನಿಷೇಧಿಸಲಾಗಿದೆ. ಸ್ಥಳೀಯರಿಗೆ ಹಾಲು, ದಿನಪತ್ರಿಕೆ, ಕಿರಾಣಿ ಸಾಮಗ್ರಿ, ಔಷಧಿ, ತರಕಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಜಿಲ್ಲಾಡಳಿತದಿಂದಲೇ ಮಾಡಲಾಗುವುದು. ಈಗ ಕೊಟ್ಟಿರುವ ಸಂಖ್ಯೆಗಳಿಗೆ ಕರೆ ಮಾಡಿದಲ್ಲಿ ಮನೆಗೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT