ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಬೂದಿ ಮುಚ್ಚಿದ ಕೆಂಡ; ವೀಣಾ

ಪಕ್ಷದ ವರಿಷ್ಠರನ್ನು ಭೇಟಿಯಾಗಿ ‘ಅಸಹಕಾರ’ ಗಮನಕ್ಕೆ ತರಲಾಗುವುದು
Last Updated 4 ಅಕ್ಟೋಬರ್ 2018, 11:27 IST
ಅಕ್ಷರ ಗಾತ್ರ

ಬಾಗಲಕೋಟೆ: ’ತಮ್ಮನ್ನು ಬದಲಾಯಿಸುವಂತೆ ಶಾಸಕ ಸಿದ್ದರಾಮಯ್ಯ ಅವರಿಗೆಕೆಲವರು ಮನವಿ ಸಲ್ಲಿಸಿರುವುದಕ್ಕೂ, ಇಂದಿನ ಸಾಮಾನ್ಯ ಸಭೆಗೆ ಕೋರಂ ಕೊರತೆಯಾಗಿರುವುದಕ್ಕೂ ನಂಟು ಇರಬಹುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ಸಭೆ ಮುಂದೂಡಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ವೀಣಾ ಮೇಲಿನಂತೆ ಪ್ರತಿಕ್ರಿಯಿಸಿದರು.

’ರಾಜೀನಾಮೆ ಕೊಡಿ ಎಂದು ವರಿಷ್ಠರು ಕರೆದು ಕೇಳಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ. ಪಕ್ಷದ ಹಿರಿಯರು ಆ ರೀತಿ ಸಲಹೆ ಕೊಟ್ಟಲ್ಲಿ ಆಗ ಸೂಕ್ತ ನಿರ್ಧಾರ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಪತಿ ವಿಜಯಾನಂದ ಕಾಶಪ್ಪನವರ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ವಿರುದ್ಧ ಆರೋಪ ಮಾಡಿರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೂ ಸಂಬಂಧವಿಲ್ಲ. ನಾನು ಅಧ್ಯಕ್ಷೆಯಾಗಿ ಆಯ್ಕೆಯಾದ ವೇಳೆಯೂ ಯಾವುದೇ ಕಾಲಮಿತಿ ಇಲ್ಲವೇ ಅಧಿಕಾರ ಹಂಚಿಕೆಯ ಬಗ್ಗೆ ಮಾತುಕತೆ ನಡೆದಿರಲಿಲ್ಲ. ಆ ವಿಷಯದ ಬಗ್ಗೆ ಚರ್ಚೆಯೂ ಆಗಿರಲಿಲ್ಲ’ ಎಂದು ವೀಣಾ ಹೇಳಿದರು.

’ತಮ್ಮ ವಿರುದ್ಧ ಯಾರು, ಏಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ಕೆಲವರಿಗೆ ಕರೆದು ಮಾತನಾಡಿಸಿದರೂ ಅವರು ಏನೂ ಹೇಳುತ್ತಿಲ್ಲ. ಬಹಿರಂಗವಾಗಿಯೂ ಒಪ್ಪಿಕೊಳ್ಳುತ್ತಿಲ್ಲ. ಒಳಗಡೆಯೇ ಹೀಗೆ ಮಾಡುತ್ತಿದ್ದಾರೆ. ಹೀಗೆ ವೈಯಕ್ತಿಕ ವಿರೋಧಕ್ಕೆ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.

’ಜಿಲ್ಲೆಯ ಪಕ್ಷದ ವರಿಷ್ಠರು ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಲ್ಲಾ ವಿಚಾರವನ್ನು ಅವರ ಗಮನಕ್ಕೆ ತರಲಾಗುವುದು. ಅವರ ನಿರ್ಧಾರವನ್ನು ಕಾದು ನೋಡೋಣ’ ಎಂದು ತಿಳಿಸಿದರು.

ಬಾಕ್ಸ್...

ನಾನೊಬ್ಬಳೇ ಆಕಾಂಕ್ಷಿಯಲ್ಲ: ಬಾಯಕ್ಕಾ

’ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಉಳಿದ ಅವಧಿಗೆ ನಾನೊಬ್ಬಳೇ ಅಲ್ಲ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಮಹಿಳಾ ಸದಸ್ಯರೂ ಆಕಾಂಕ್ಷಿಗಳಾಗಿದ್ದಾರೆ’ ಎಂದು ಐಹೊಳೆ ಕ್ಷೇತ್ರದ ಸದಸ್ಯೆ ಬಾಯಕ್ಕಾ ಮೇಟಿ ತಿಳಿಸಿದರು.

’ಸಾಮಾನ್ಯ ಸಭೆಯಲ್ಲಿ ಇಂದು ಕೋರಂ ಕೊರತೆಯಾಗಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದಕ್ಕೆ ನಾನು ಕಾರಣ ಅಲ್ಲ. ಆದರೂ ಮಾಧ್ಯಮಗಳಲ್ಲಿ ಅನಗತ್ಯವಾಗಿ ನನ್ನ ಹೆಸರು ಎಳೆದು ತರಲಾಗುತ್ತಿದೆ. ಮಹಿಳಾ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ಸಭೆಗೆ ಕೊಂಚ ತಡವಾಗಿ ಬಂದಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

’ಅಧಿಕಾರ ಹಂಚಿಕೆ ವಿಚಾರದಲ್ಲಿ ವೀಣಾ ಅವರಿಗೆ ವರಿಷ್ಠರು ಏನು ಹೇಳಿದ್ದಾರೊ, ಬಿಟ್ಟಿದ್ದಾರೊ ಗೊತ್ತಿಲ್ಲ. ಅಧ್ಯಕ್ಷ ಸ್ಥಾನದ ಉಳಿದ ಅವಧಿಗೆ ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ನಮ್ಮ ಮುಖಂಡರು ಹೇಳಿದ್ದಾರೆ. ಹಾಗಾಗಿ ಅವರ ಮಾರ್ಗದರ್ಶನದಂತೆ ಮುನ್ನಡೆಯುವುದಾಗಿ’ ತಿಳಿಸಿದರು.

ನಾನೂ ಟಿಕೆಟ್ ಆಕಾಂಕ್ಷಿ:

ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಮಹಿಳೆಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದಲ್ಲಿ ನಾನೂ ಕೂಡ ಪ್ರಬಲ ಆಕಾಂಕ್ಷಿ ಎಂದು ಬಾಯಕ್ಕ ಹೇಳಿದರು.

’ನನಗೂ ನಾಯಕತ್ವ ಗುಣ ಇದೆ. ನನ್ನ ಶಕ್ತಿ ನನಗೆ ಗೊತ್ತಿದೆ. ಹಾಗೆಂದು ಟಿಕೆಟ್‌ ವಿಚಾರದಲ್ಲಿ ಯಾರೊಂದಿಗೂ ಪೈಪೋಟಿಗೆ ಇಳಿಯುವುದಿಲ್ಲ. ಪ್ರತಿಸ್ಪರ್ಧಿಯೂ ಅಲ್ಲ. ಹಿಂದುಳಿದ ವರ್ಗಕ್ಕೆ ಅವಕಾಶ ದೊರೆತಲ್ಲಿ ನಾನು ಮುಂಚೂಣಿಯಲ್ಲಿರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT