ಕಂಕಣವಾಡಿ ಬಳಿ ಸೇತುವೆಗೆ ಒತ್ತಾಯ

7
ದೋಣಿಯಲ್ಲಿ ಕಬ್ಬು ಸಾಗಾಟ ಮಾಡುವುದರಿಂದ ಗುಣಮಟ್ಟ ಕುಂಠಿತ; ರೋಗಿಗಳಿಗೆ ಸಂಕಟ

ಕಂಕಣವಾಡಿ ಬಳಿ ಸೇತುವೆಗೆ ಒತ್ತಾಯ

Published:
Updated:
Prajavani

ಜಮಖಂಡಿ: ಕಂಕಣವಾಡಿ ಗ್ರಾಮದ ಗುಹೇಶ್ವರ ಗಡ್ಡೆಯಲ್ಲಿ ಬೆಳೆದ ಕಬ್ಬನ್ನು ದೋಣಿ ಮೂಲಕ ಕೃಷ್ಣಾನದಿ ದಾಟಿಸಿ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಬೇಕಾದ ಅನಿವಾರ್ಯತೆ ಇರುವುದರಿಂದ ಕೃಷ್ಣಾನದಿಗೆ ಕಂಕಣವಾಡಿ ಬಳಿ ಸೇತುವೆ ನಿರ್ಮಿಸುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ಗುಹೇಶ್ವರ ಗಡ್ಡೆ ಕೃಷ್ಣಾನದಿಯಿಂದ ಸಂಪೂರ್ಣ ಸುತ್ತುವರಿದಿದೆ. ಗುಹೇಶ್ವರ ಗಡ್ಡೆ ಸಂಪರ್ಕಿಸಲು ಯಾವ ಕಡೆಯಿಂದಲೂ ರಸ್ತೆ ಇಲ್ಲ. ಗುಹೇಶ್ವರ ಗಡ್ಡಿಯಲ್ಲಿ ಸುಮಾರು 600 ಎಕರೆ ಫಲವತ್ತಾದ ಜಮೀನು ಇದೆ. ಆದರೆ ಜಮೀನಿನಲ್ಲಿ ಬೆಳೆದ ಕಬ್ಬು ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸಂಪರ್ಕ ಸೇತುವೆ ಇಲ್ಲ. ಜಮೀನಿನಲ್ಲಿ ಕಟಾವು ಮಾಡಿದ ಕಬ್ಬನ್ನು ಮೊದಲು ಟ್ರ್ಯಾಕ್ಟರ್‌ ಟ್ರೇಲರ್‌ನಲ್ಲಿ ತುಂಬಿ ಕೃಷ್ಣಾನದಿ ವರೆಗೆ ತರಬೇಕಾಗುತ್ತದೆ.

ಕೃಷ್ಣಾನದಿ ದಂಡೆಯ ಮೇಲೆ ಟ್ರ್ಯಾಕ್ಟರ್‌ ನಿಲ್ಲಿಸಿ ಟ್ರೇಲರ್‌ಲ್ಲಿನ ಕಬ್ಬನ್ನು ದೋಣಿಗೆ ಸ್ಥಳಾಂತರಿಸಲಾಗುತ್ತದೆ. ದೋಣಿ ಮೂಲಕ ನದಿದಾಟಿ ಇನ್ನೊಂದು ದಂಡೆಗೆ ಬಂದ ಬಳಿಕ ಕಬ್ಬನ್ನು ಮತ್ತೊಂದು ಟ್ರ್ಯಾಕ್ಟರ್‌ ಟ್ರೇಲರ್‌ಗೆ ವರ್ಗಾಯಿಸಲಾಗುತ್ತದೆ. ಹೀಗೆ ಪದೇ ಪದೇ ಕಬ್ಬು ತುಂಬುವ ಮತ್ತು ಇಳಿಸುವ ಪ್ರಕ್ರಿಯೆಯಿಂದಾಗಿ ಕಬ್ಬಿನ ಗುಣಮಟ್ಟ ಹಾಳಾಗುತ್ತದೆ. ಅಲ್ಲದೆ ತುಂಬುವಾಗ ಮತ್ತು ಇಳಿಸುವಾಗ ಸಾಕಷ್ಟು ಪ್ರಮಾಣದ ಕಬ್ಬು ಬಿದ್ದು ಹೋಗುತ್ತದೆ. ಕಬ್ಬು ಸಾಗಣೆಗೆ ಹೆಚ್ಚು ಸಮಯ ಹಿಡಿಯಲಿದೆ ಎಂಬುದು ರೈತರು ನೀಡುವ ವಿವರಣೆ.

ಒಂದು ಟನ್ ಕಬ್ಬು ತುಂಬಲು ಮತ್ತು ಇಳಿಸಲು ₹800 ಕೂಲಿ ಹಣವನ್ನು ತೆರಬೇಕಾಗುತ್ತದೆ. ಕಬ್ಬು ತುಂಬುವ ಮತ್ತು ಇಳಿಸುವ ಕಾರ್ಮಿಕರ ಕೂಲಿ ಅತ್ಯಂತ ದುಬಾರಿಯಾಗಿದೆ. ಅದರಿಂದಾಗಿ ಒಂದು ಟನ್ ಕಬ್ಬಿಗೆ ₹400 ಮಾತ್ರ ರೈತರಿಗೆ ಸಿಗುವಂತಾಗಿದೆ.

ರಾತ್ರಿ ವೇಳೆಯಲ್ಲಿ ಜನ ಮತ್ತು ಜಾನುವಾರುಗಳನ್ನು ಜಮಖಂಡಿ ನಗರದ ಆಸ್ಪತ್ರೆಗೆ ಸಾಗಿಸಬೇಕಾದರೆ ದೋಣಿಯನ್ನೇ ಅವಲಂಬಿಸಬೇಕು. ದೋಣಿ ಸಕಾಲದಲ್ಲಿ ಲಭ್ಯವಾಗದಿದ್ದರೆ ಅನಾಹುತಗಳು ಸಂಭವಿಸುತ್ತವೆ. ಹಾವು ಕಡಿತ ಮತ್ತು ಹೆರಿಗೆ ಪ್ರಕರಣಗಳು ಮಾರಣಾಂತಿಕ ಎನಿಸುತ್ತಿವೆ. ಸುಮಾರು 3-4 ವರ್ಷಗಳ ಹಿಂದೆ ಕೃಷ್ಣಾನದಿಗೆ ಮಣ್ಣಿನ ತಾತ್ಕಾಲಿಕ ಬಾಂದಾರವೊಂದನ್ನು ನಿರ್ಮಿಸಿಕೊಂಡು ಕಬ್ಬು ಸಾಗಿಸುವ ಸಾಹಸವನ್ನು ರೈತರು ಮಾಡಿದ್ದರು. ಪ್ರತಿ ವರ್ಷ ಕೃಷ್ಣಾನದಿಗೆ ಪ್ರವಾಹ ಬಂದಾಗ ತಾತ್ಕಾಲಿಕ ಬಾಂದಾರ ಕೊಚ್ಚಿಕೊಂಡು ಹೋಗುತ್ತಿತ್ತು. ಹಾಗಾಗಿ ತುಂಬಾ ದುಬಾರಿ ಎನಿಸತೊಡಗಿದ್ದರಿಂದ ಅದನ್ನು ಕೂಡ ರೈತರು ಕೈಬಿಟ್ಟಿದ್ದಾರೆ.

ಸಿದ್ದು ನ್ಯಾಮಗೌಡ ಅವರು ಶಾಸಕರಾಗಿದ್ದಾಗ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಕೈಹಾಕಿದ್ದರು. ಆದರೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಮುಳುಗಡೆ ಗ್ರಾಮ ಎಂಬ ಕಾರಣಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ದೊರೆಯುವುದಿಲ್ಲ ಎಂಬ ಕಾರಣಕ್ಕೆ ನಿರ್ಮಾಣ ಕಾಮಗಾರಿ ಸಾಕಾರಗೊಳ್ಳಲಿಲ್ಲ. ಆದರೆ, ಕಂಕಣವಾಡಿ ಮುಳುಗಡೆ ಗ್ರಾಮವಾಗಿದ್ದರೂ ಗುಹೇಶ್ವರ ಗಡ್ಡಿ ಮುಳುಗಡೆ ಆಗಿಲ್ಲ. ಆಲಮಟ್ಟಿ ಜಲಾಶಯದಲ್ಲಿ 524 ಮೀಟರ್‌ ಗೆ ನೀರು ಸಂಗ್ರಹ ಆರಂಭಿಸಿದರೆ ಮಾತ್ರ ಮುಳುಗಡೆ ಆಗಬಹುದು. ಅದು ಈಗಿನ ಪರಿಸ್ಥಿತಿಯಲ್ಲಿ ಕನಸಿನ ಮಾತಾಗಿದೆ.

ಭಾರಿ ಪ್ರಮಾಣದ ಸೇತುವೆ ನಿರ್ಮಿಸುವ ಅಗತ್ಯವಿಲ್ಲ. ಕಿರು ರಸ್ತೆವುಳ್ಳ ಸಣ್ಣ ಪ್ರಮಾಣದ ಸೇತುವೆ ನಿರ್ಮಿಸಿದರೂ ಸಾಕು. ಆದ್ದರಿಂದ ರೈತರ ಹಿತದೃಷ್ಟಿಯಿಂದ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

*
ಆಲಮಟ್ಟಿ ಜಲಾಶಯದ ಹಿನ್ನೀರನ್ನು ಚಿಕ್ಕಪಡಸಲಗಿ ಬ್ಯಾರೇಜ್‌ಗೆ ತುಂಬಿಸುವ ಕೃಷ್ಣಾತೀರ ರೈತ ಸಂಘದ ಯೋಜನೆಯಿಂದಾಗಿ ಬೇಸಿಗೆಯಲ್ಲಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಲಭ್ಯವಾಗಿದೆ.
-ಈಶ್ವರ ಕರಬಸನವರ, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !