ಸತತ ಪ್ರಯತ್ನಕ್ಕೆ ಕೈಹಿಡಿದ ಬಾಗಿಲು ಚೌಕಟ್ಟು

7
ಮೂರ್ನಾಲ್ಕು ಉದ್ಯಮಗಳು ಕೈ ಸುಟ್ಟರೂ ಪ್ರಯತ್ನ ಬಿಡದ ಸಿದ್ದಲಿಂಗಪ್ಪ

ಸತತ ಪ್ರಯತ್ನಕ್ಕೆ ಕೈಹಿಡಿದ ಬಾಗಿಲು ಚೌಕಟ್ಟು

Published:
Updated:
Prajavani

ಬಾದಾಮಿ: ಮೂರ್ನಾಲ್ಕು ಉದ್ಯಮವನ್ನು ಪ್ರಾರಂಭಿಸಿ ಕೈ ಸುಟ್ಟುಕೊಂಡರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಸಿದ್ದಲಿಂಗಪ್ಪ ಹೂಗಾರ ಅವರು ಬಾಗಿಲು ಚೌಕಟ್ಟು ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ.

ಬಾದಾಮಿಯಲ್ಲಿ ಮೂರ್ನಾಲ್ಕು ಉದ್ಯೋಗ ಆರಂಭಿಸಿ ಎಲ್ಲದರಲ್ಲೂ ವಿಫಲವಾಗಿದ್ದರು. ಇಲ್ಲಿನ ಕುಳಗೇರಿ ರಸ್ತೆಯ ಹುಡ್ಕೊ ಕಾಲೊನಿಯಲ್ಲಿ ಯಂತ್ರದ ಮೂಲಕ ಬಾಗಿಲು ಚೌಕಟ್ಟು ತಯಾರಿಸುವ ಮೂಲಕ ಸಿದ್ದಲಿಂಗಪ್ಪ ಜೀವನ ರೂಪಿಸಿಕೊಳ್ಳುವ ಜತೆಗೆ, ಇದರ ಬಗ್ಗೆ ಮಾಹಿತಿ ನೀಡಿ ಯುವಕರು ಸ್ವಂತ ಉದ್ಯೋಗ ಪ್ರಾರಂಭಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಐಟಿಐ ಓದುತ್ತಿರುವಾಗಲೇ ಒಂದೆರಡು ಉದ್ಯಮ ಮಾಡುತ್ತಿದ್ದರು. ಓದು ಪೂರ್ಣಗೊಂಡ ಬಳಿಕ ಕೆಲಸ ಅರಸುತ್ತಾ ಬೆಂಗಳೂರಿಗೆ ತೆರಳಿದರು. ಅಲ್ಲಿ ಗೋಡೆಯ ಮೇಲೆ ಬರಹ ಪ್ರಾರಂಭಿಸಿದ ಸಿದ್ದಲಿಂಗಪ್ಪ ಅದನ್ನು ಬಿಟ್ಟು ಬಾದಾಮಿಗೆ ಬಂದು 2004ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿ ನಂತರ ಚಾಲಕ ವೃತ್ತಿಯಲ್ಲಿ ತೊಡಗಿದ್ದ  ಅವರಿಗೆ ಕಲಾ ವೃತ್ತಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ಬಂದವು.

ಸಲಹೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿದ ಅವರು, ‘ಸಿದ್ದು ಆರ್ಟ್ಸ್‌’ ಪ್ರಾರಂಭಿಸಿದರು. ನಂತರ ಛಾಯಾಗ್ರಾಹಕರಾದರು. ನಂತರ ₹5 ಲಕ್ಷ ಸಾಲ ಮಾಡಿ ಫ್ಲೆಕ್ಸ್‌ ಮೆಷಿನ್ ಹಾಕಿದರು. ಇದರಲ್ಲಿ ಕೂಡ ಮೊದಲು ವರಮಾನ ಬರುತ್ತಿರಲಿಲ್ಲ. ನಂತರ ಉತ್ತಮ ಆದಾಯ ಬರಲು ಪ್ರಾರಂಭಿಸಿತು. 2012ರಲ್ಲಿ ಬಾಗಿಲು ತಯಾರಿಸುವ ಕಾಯಕವನ್ನು ಪ್ರಾರಂಭಿಸಿ ಯಶಸ್ವಿಯಾದರು.

‘ನಮ್ಮದು ಬಡ ಕಟುಂಬ, ನಾನೇ ಮನೆಯ ಹಿರಿಯ ಮಗನಾಗಿದ್ದರಿಂದ ಕುಟುಂಬ ನಡೆಸಲು ತಂದೆಗೆ ಸಹಾಯವಾಗಿ ನಿಲ್ಲಬೇಕಾದ ಅನಿರ್ವಾಯತೆ ಇದ್ದಿದ್ದರಿಂದ ಶಾಲೆಯಲ್ಲಿ ಓದುತ್ತಿರುವಾಗಲೇ ಕೆಲಸ ಮಾಡಲು ಪ್ರಾರಂಭಿಸಿದೆ. ಇದರಿಂದ ಒಂದಿಷ್ಟು ಸಂಬಳ ಬರುತ್ತಿತ್ತು. ಆದರೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ’ ಎಂದು ಸಿದ್ದಲಿಂಗಪ್ಪ ಹೂಗಾರ ನೆನಪು ಮಾಡಿಕೊಂಡರು.

‘ಐ.ಟಿ.ಐ ಮುಗಿಸಿದ ಬಳಿಕ ಬೆಂಗಳೂರಿಗೆ ಹೋದೆ. ಅಲ್ಲಿಯ ಕೆಲಸ ಹಿಡಿಸದ ಕಾರಣ ಮತ್ತೆ ಬಾದಾಮಿಗೆ ಬಂದು ಚಾಲಕ ವೃತ್ತಿ ನಿರ್ವಹಿಸುತ್ತಾ ಚಿತ್ರಕಲೆಯಲ್ಲಿ ಡಿಪ್ಲೊಮಾ ಮುಗಿಸಿದೆ. ಬಳಿಕ ನಾನು ವಾಹನ ಓಡಿಸುತ್ತಿದ್ದ ಮಾಲೀಕರು ಕಲೆಯಲ್ಲಿ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಇದರಿಂದ ಆರ್ಟ್ಸ್‌ ಅಂಗಡಿ ಪ್ರಾರಂಭಿಸಿದೆ’ ಎಂದರು.

‘ಬೀಳಗಿಯಲ್ಲಿದ್ದ ಕಟ್ಟಿಗೆ ಬಾಗಿಲು ತಯಾರಿಸುವ ಯಂತ್ರ (ಸಿ.ಎನ್.ಸಿ) ರೂಟರ್ ನೋಡಿ, ಅದನ್ನು ಬಾದಾಮಿಯಲ್ಲಿ ಪ್ರಾರಂಭಿಸಬೇಕು ಎನ್ನುವ ಉದ್ದೇಶದಿಂದ ಬ್ಯಾಂಕ್‌ನಿಂದ ₹10.5 ಲಕ್ಷ ಸಾಲ ಪಡೆದು 2012ರಲ್ಲಿ ಕಟ್ಟಿಗೆ ಬಾಗಿಲು ತಯಾರಿಸುವ ಉದ್ಯೋಗ ಪ್ರಾರಂಭಿಸಿದೆ. ಅಲ್ಲಿಂದ ಉತ್ತಮ ಜೀವನ ಕಟ್ಟಿಕೊಂಡೆ’ ಎನ್ನುತ್ತಾರೆ.

ಯುವಕರಿಗೆ ಪ್ರೋತ್ಸಾಹ
‘ಬಾಗಿಲಿನ ಪೂರ್ತಿ ಡಿಸೈನ್ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಸಾಂಪ್ರದಾಯಿಕ ಮತ್ತು ಸೃಜನಾತ್ಮಕ ಕಲೆಯನ್ನು ಯಂತ್ರದ ಮೂಲಕ ಕಟ್ಟಿಗೆಯಲ್ಲಿ ರೂಪಿಸಲಾಗುತ್ತಿದೆ. ಒಂದು ಬಾಗಿಲು ಡಿಸೈನ್ಗೆ ₹2,000ದಿಂದ ₹2,500. ಬಾಗಿಲು ಪಡಕಿನ ಡಿಸೈನ್ಗೆ ₹4,500ದಿಂದ ₹5,000 ದರ ನಿಗದಿ ಮಾಡಿದ್ದು, ದಿನಕ್ಕೆ ಒಂದು ಬಾಗಿಲು ಸಿದ್ಧವಾಗುತ್ತದೆ’ ಎನ್ನುತ್ತಾರೆ ಸಿದ್ದಲಿಂಗಪ್ಪ ಹೂಗಾರ.

‘ಸಾಗವಾನಿ, ಮೈಸೂರ ಸಾಗವಾನಿ ಸ್ಥಳೀಯ ಸಾಗವಾನಿ, ಬನ್ನಿ, ಬಾರಿ, ಮತ್ತಿ ಮತ್ತು ಮಾವಿನ ಕಟ್ಟಿಗೆಯಲ್ಲಿ ತಯಾರಿಸಲಾಗುವುದು. ಏಳು ವರ್ಷಗಳಿಂದ ಸಾವಿರಾರು ಬಾಗಿಲು ಮತ್ತು ಬಾಗಿಲು ಪಡಕುಗಳನ್ನು ತಯಾರಿಸಲಾಗುತ್ತಿದೆ. ಈ ಉದ್ಯೋಗ ಪ್ರಾರಂಭಿಸಲು ಆಸಕ್ತರಿಗೆ ತರಬೇತಿ ನೀಡುತ್ತಾ ಅವರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಪ್ರೋತ್ಸಾಹಿಸುತ್ತಿರುವ ಪರಿಣಾಮ ಇಂದು ಬಾದಾಮಿಯಲ್ಲಿಯೇ ಮತ್ತೊಬ್ಬ ಯುವಕ ಈ ಉದ್ಯೋಗ ಪ್ರಾರಂಭಿಸಿದ್ದಾನೆ’ ಎನ್ನುತ್ತಾರೆ.

*
ಯುವಕರಿಗೆ ಹಣಬ ಬಲ ಇರುವುದಕ್ಕಿಂತ ಹೆಚ್ಚಾಗಿ ಸಾಧಿಸುವ ಮನಸ್ಸು ಇರಬೇಕು. ಅಂದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ.
-ಸಿದ್ದಲಿಂಗಪ್ಪ ಹೂಗಾರ, ಬಾಗಿಲು ತಯಾರಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !