ಚಂದ್ರವ್ವ, ಕಲ್ಲ‍ಪ್ಪಗೆ ಅಕಾಡೆಮಿ ಪ್ರಶಸ್ತಿ ಗರಿ

7

ಚಂದ್ರವ್ವ, ಕಲ್ಲ‍ಪ್ಪಗೆ ಅಕಾಡೆಮಿ ಪ್ರಶಸ್ತಿ ಗರಿ

Published:
Updated:
Prajavani

ರಬಕವಿ ಬನಹಟ್ಟಿ: ಇಲ್ಲಿನ ನಾವಲಗಿಯ ಚಂದ್ರವ್ವ ಗುಡ್ಲಮನಿ ಮತ್ತು ಹೊಸೂರಿನ ಕಲ್ಲಪ್ಪ ತೇಲಿಗೆ ಈ ಸಾಲಿನ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಬಂದಿದೆ.

ಶ್ರೀಕೃಷ್ಣ ಪಾರಿಜಾತದ ಗೌಳಗಿತ್ತಿ..
ನಾವಲಗಿ ಕಲಾವಿದರ ಗ್ರಾಮ. ಚಂದ್ರವ್ವ ಗುಡ್ಲಮನಿ ತಮ್ಮ 10ನೇ ವಯಸ್ಸಿನಲ್ಲಿಯೇ ಕಲಾ ಸೇವೆ ಆರಂಭಿಸಿದರು. ಆರಂಭದಲ್ಲಿ ಆನಂದ ಕಂಪು ಬಳಿ ಕಲಾ ಬದುಕು ಆರಂಭಿಸಿದ್ದ ಚಂದ್ರವ್ವ ನಂತರ ಕಲ್ಲಪ್ಪ ಪಟ್ಟಣಶೆಟ್ಟಿ ಮತ್ತು ಶಂಕರ ಪಟ್ಟಣಶೆಟ್ಟಿ ಅವರೊಂದಿಗೆ ಪಾರಿಜಾತದಲ್ಲಿ ಪಾತ್ರಗಳನ್ನು ಮಾಡುತ್ತ ಬಂದರು. ಸದ್ಯ ನಾವಲಗಿಯ ಹನುಮಾನ ಬಯಲಾಟ ಹಾಗೂ ಶ್ರೀಕೃಷ್ಣ ಪಾರಿಜಾತದ ಕಲಾವಿದೆಯಾಗಿದ್ದಾರೆ. ಪಾರಿಜಾತದ ಮಹತ್ವದ ಪಾತ್ರಗಳಾದ ರುಕ್ಮಿಣಿ, ಸತ್ಯಭಾಮಾ, ಕೊರವಂಜಿ ಮತ್ತು ಗೌಳಗಿತ್ತಿಯಂತಹ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಮೈಸೂರು ದಸರಾ, ಬೆಂಗಳೂರು, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ.

‘ಇಲ್ಲಿವಯವರೆಗೆ ಎಷ್ಟ ಬೈಲಾಟ ಮಾಡೇನಿ ಅನ್ನುದ ನೆನಪಿಲ್ರಿ. ಆದರ ಈಗ ಕೆಲವು ವರ್ಷಗಳ ಹಿಂದೆ ಒಂದೊಂದು ತಿಂಗಳ ಊರಿಗೆ ಬರತಿರಲಿಲ್ಲರಿ.ಊರೂರು ತಿರುಗಾಡಿ ಬೈಲಾಟ ಮಾಡೇನ್ರಿ’ ಎನ್ನುತ್ತಾರೆ.

ನಾವಲಗಿಯಲ್ಲಿ ಪುಟ್ಟ ಗೂಡಗಂಡಿ ಇಟ್ಟುಕೊಂಡು ದಿನಕ್ಕೆ ₹150 ವ್ಯಾಪಾರ ಮಾಡುತ್ತಲೇ, ಕಲಾ ಸೇವೆಯಲ್ಲಿ ತೊಡಗಿದ್ದಾರೆ.

ನೇಕಾರಿಕೆಯೊಂದಿಗೆ ರಂಗಸೇವೆ.. 
ಹೊಸೂರ ಗ್ರಾಮದ ಕಲ್ಲಪ್ಪ ತೇಲಿ ವೃತ್ತಿ ರಂಗಭೂಮಿ ಕಲಾವಿದ. ನೇಕಾರಿಕೆ ಜೊತೆಗೆ ಕಳೆದ ನಾಲ್ಕೂವರೆ ದಶಕಗಳಿಂದ ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. 

30 ವರ್ಷಗಳ ಹಿಂದೆ ತಮ್ಮದೇ ರೇಣುಕಾ ದೇವಿ ಬೈಲಾಟ ತಂಡ ಸ್ಥಾಪಿಸಿ, ಅದರ ಅಡಿಯಲ್ಲಿ ‘ಜಂಗಮ ಜೋಳಿಗೆ’, ‘ಬಡವ ಬದುಕಲೇ ಬೇಕು’, ‘ದಾರಿದೀಪ’, ‘ಸತಿ ಸರಸ್ವತಿ’, ‘ ಮಗ ತಂದ ಮಾಗಲ್ಯ‘ ಹೀಗೆ ಹತ್ತಾರು ಬೈಲಾಟಗಳನ್ನು ಪ್ರದರ್ಶಿಸಿದ್ದಾರೆ. ಸತತ 10 ವರ್ಷ ಕಾಲ ಜಂಗಮ ಜೋಳಿಗೆ ನಾಟಕವನ್ನು ಶ್ರೀಶೈಲದ ಮಲ್ಲಿಕಾರ್ಜುನ ದೇವರ ಜಾತ್ರೆಯಲ್ಲಿ ಪ್ರದರ್ಶನ ಮಾಡಿದ್ದಾರೆ.

 ಅಳಿವಿನ ಅಂಚಿನಲ್ಲಿರುವ ರಂಗಭೂಮಿ ಉಳಿಯಬೇಕು ಎಂಬ ಉದ್ದೇಶದಿಂದ ತಮ್ಮ ಗರಡಿಯಲ್ಲಿ ಹತ್ತಾರು ಕಲಾವಿದರನ್ನು  ತಯಾರು ಮಾಡಿದ್ದಾರೆ. ಮಹಾದೇವ ಗುಟ್ಲಿ, ಸೋನವ್ವ ಮನವ್ವಗೋಳ, ಸವಿತಾ, ಶಿವಪ್ಪ ಕುಳ್ಳೊಳ್ಳಿ, ಮಹಾಂತೇಶ ತಳವಾರ ಇವರ ಕೈಯಲ್ಲಿ ಪಳಗಿದ್ದಾರೆ. 62ರ ಆಸು ಪಾಸಿನ ಕಲ್ಲಪ್ಪ ತೇಲಿ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !