ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಯ ಆಟಾಟೋಪಕ್ಕೆ ಬೆಚ್ಚಿದ ಗ್ರಾಮೀಣರು

Last Updated 6 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕೃಷ್ಣೆ ಹುಚ್ಚುಕೋಡಿಯಾಗಿದೆ. ಪ್ರವಾಹ ಸ್ಥಿತಿ ಉಲ್ಬಣಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಕೂಡ ಅದಕ್ಕೆ ಸಾಥ್ ನೀಡಿದ್ದು, ಜಮಖಂಡಿ ತಾಲ್ಲೂಕು ಅಕ್ಷರಶಃ ತತ್ತರಿಸಿದೆ.

ರಸ್ತೆ ಮುಳುಗಡೆ ಆಗಿ ಜಮಖಂಡಿ– ಸಾವಳಗಿ– ಜತ್ತ ಹಾಗೂ ವಿಜಯಪುರ– ಧಾರವಾಡ ರಾಜ್ಯ ಹೆದ್ದಾರಿಗಳು ಬಂದ್ ಆಗಿವೆ. ಇದರಿಂದ ತಾಲ್ಲೂಕಿನ ಉತ್ತರ ಭಾಗದ 23 ಗ್ರಾಮಗಳಿಗೆ ಕೇಂದ್ರಸ್ಥಾನದೊಂದಿಗೆ ಸಂಪರ್ಕ ಕಡಿತಗೊಂಡಿದೆ.

ಜಮಖಂಡಿ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಕೃಷ್ಣಾ ನದಿ ಪಾತ್ರದ ನಡುಗಡ್ಡೆಗಳಿಗೆ ನೀರು ನುಗ್ಗಿತ್ತು. ಆದರೆ ಸೋಮವಾರ ರಾತ್ರಿಯಿಂದ ಜಂಬಗಿ ಬಿ.ಕೆ ಗ್ರಾಮ ಕೃಷ್ಣೆಯ ಹಿನ್ನೀರಿನಿಂದ ಆವೃತವಾಗಿದೆ. ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕಕ್ಕೆ ಬೋಟ್ ಅವಲಂಬಿಸಿದ್ದಾರೆ.

ಸಿಗದ ನೆರವು:ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆದು, ವೈದ್ಯಕೀಯ ಸವಲತ್ತು, ದನಗಳಿಗೆ ಮೇವು ಕೊಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದರೂ ನೆರೆ ಬಾಧಿತ ಪ್ರದೇಶಗಳಿಗೆ ಮಂಗಳವಾರ ‘ಪ್ರಜಾವಾಣಿ’ ಭೇಟಿ ನೀಡಿದಾಗ ವಾಸ್ತವಿಕ ಸಂಗತಿಯೇ ಬೇರೆಯಾಗಿತ್ತು.

ಮೊದಲು ಮೇವು ಕೊಡಿ: ‘ಹೊಲ, ಪೀಕು ಎಲ್ಲಾ ನೀರಾಗ ನಿಂತಾವ, ಬೆಳತಾನ ಮಳಿ ಹೊಡದಾತಿ, ದನಗಳು ಬಾಳ ಹೈರಾಣಾಗ್ಯಾವ.ನಾವು ಮನುಷ್ಯಾರು ಹೆಂಗೋ ಹೊಟ್ಟೆತುಂಬಿಸಿಕೊಳ್ತೇವಿ. ಮೊದ್ಲ ಅವಕ್ಕ ಕಣಕಿ (ಮೇವು) ಕೊಡ್ಲಿ’ ಎಂದು ಜಂಬಗಿ ಬಿ.ಕೆ ಗ್ರಾಮದ ಬಳಿ ಬೋಟ್‌ಗೆ ಕಾಯುತ್ತಾ ನಿಂತಿದ್ದ ಸಂಗಪ್ಪ ಅಲ್ಲನಗೋಳ ಆರ್ದ್ರವಾಗಿ ಮನವಿ ಮಾಡಿದರು. ಗ್ರಾಮಕ್ಕೆ ಸೇರಿದ 570 ಎಕರೆ ಕೃಷಿ ಜಮೀನು ನೀರಿನಲ್ಲಿ ಮುಳುಗಿದ್ದು, ಬೆಳೆದು ನಿಂತ ಕಬ್ಬು, ಗೋವಿನಜೋಳ ನೀರುಪಾಲಾಗಿವೆ.

‘ಬೋಟ್‌ ನಡೆಸಲು ಅಧಿಕಾರಿಗಳು ಸೀಮೆಎಣ್ಣೆ ವ್ಯವಸ್ಥೆ ಮಾಡಲಿ’ ಎಂಬುದು ಸುರೇಶ ಕೋಮಾರ ಒತ್ತಾಯ.

ಶೂರ‍ಪಾಲಿ ಗ್ರಾಮದ ಸಂಪರ್ಕ ರಸ್ತೆಯ ಅಂಚಿಗೆ ನೀರು ಬಂದಿದೆ. ಸಂಜೆಯ ವೇಳೆಗೆ ಅದು ಮುಳುಗುವ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಗ್ರಾಮಸ್ಥರು ದನಕರುಗಳೊಂದಿಗೆ ಎತ್ತರದ ಸ್ಥಳಕ್ಕೆ ಗುಳೇ ಹೊರಟಿದ್ದರು.

‘ಎಮ್ಮೆಲ್ಲೆ, ಅಧಿಕಾರಿಗೋಳು ಮೀಡಿಯಾದೋರ್ನ ಕರ್ಕೊಂಡು ಬರ್ತಾರ. ಊರ ಅಗಸ್ಯಾಗ ನಿಂತ ಪಟ್ಟನ ಫೋಟೊ ತಕ್ಕಂಡು ಹೋಗಿ ಬಿಡ್ತಾರ. ಆದ್ರ ನಮ್ ನೆರವಿಗೆ ಯಾರೂ ನಿಲ್ಲೋವಲ್ರು. ಊರನ್ನ ಯಾವ ಹೊತ್ತಿಗಾದರೂ ನೀರು ಅಪೋಶನ ತಗೊಳ್ತದ. ಆದ್ರ ಇನ್ನೂ ಗಂಜಿ ಕೇಂದ್ರ ಆರಂಭ ಆಗಿಲ್ಲ ನೋಡ್ರಿ’ ಎಂದು ಶೂರಪಾಲಿಯ ಬಸಯ್ಯಮಠಪತಿ ಆಕ್ರೋಶ ವ್ಯಕ್ತಪಡಿಸಿದರು.

ನಿರಂತರ ಮಳೆ, ಪ್ರವಾಹದ ನೀರಿನಿಂದ ತುಬಚಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಬ್ಬಿನ ಗದ್ದೆ, ಜೋಳದ ಹೊಲಗಳು ಕೆಂಬಣ್ಣಕ್ಕೆ ತಿರುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT