ಭಾನುವಾರ, ಅಕ್ಟೋಬರ್ 20, 2019
22 °C
ಕೇಂದ್ರ ಸರ್ಕಾರದಿಂದ ಸೆಪ್ಟೆಂಬರ್ 25ರಂದು ಅನುಮತಿ: ಮುಗಿಯುತ್ತಿದೆ ಹಂಗಾಮು

ಬಾಗಲಕೋಟೆ: ಹೆಸರುಕಾಳು ಖರೀದಿಗೆ ಇನ್ನೂ ಮೀನಮೇಷ

Published:
Updated:
Prajavani

ಬಾಗಲಕೋಟೆ: ಕ್ವಿಂಟಲ್‌ಗೆ ₹ 7,050ರಂತೆ ಬೆಂಬಲ ಬೆಲೆಯಡಿ ರೈತರಿಂದ ಹೆಸರುಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟು ವಾರ ಕಳೆದಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.

ಇದಕ್ಕೆ ಜಿಲ್ಲಾಡಳಿತ ಸೆಪ್ಟೆಂಬರ್ 30ರಂದೇ ಒಪ್ಪಿಗೆ ಕೊಟ್ಟಿದೆ. ಈಗಾಗಲೇ ಹೆಸರುಕಾಳು ಖರೀದಿ ಪ್ರಕ್ರಿಯೆ ಆರಂಭ ವಾಗಿದೆ ಎಂದು ಪ್ರಕಟಣೆ ಕೂಡ ಕೊಡಲಾಗಿದೆ. ಆದರೆ ವಾಸ್ತವವಾಗಿ ಇನ್ನೂ ಪ್ರಕ್ರಿಯೆ ಶುರುವಾಗಿಲ್ಲ.

‘ಈಗಾಗಲೇ ಹಂಗಾಮು ಮುಗಿಯುತ್ತಾ ಬಂದಿದೆ. ಈ ಬಾರಿ ಪ್ರವಾಹಕ್ಕೆ ತುತ್ತಾಗಿ ಹೆಚ್ಚಿನ ಪಾಲು ಹೆಸರು ನಾಶವಾಗಿದೆ. ಅಳಿದುಳಿದ ಹೆಸರುಕಾಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದೇವೆ. ಅವರು ಖರೀದಿ ಕೇಂದ್ರ ತೆರೆದು ಹೆಸರು ಕೊಳ್ಳುವುದು ಯಾವಾಗ’ ಎಂಬುದು ಬೆಳೆಗಾರರ ಪ್ರಶ್ನೆ. ಅದಕ್ಕೆ ಪೂರಕವಾಗಿ ಆಗಸ್ಟ್ 1ರಿಂದ ಅಕ್ಟೋಬರ್ 3ರವರೆಗೆ ಬಾಗಲಕೋಟೆ ಎಪಿಎಂಸಿಯಲ್ಲಿ ಒಟ್ಟು 34,699 ಕ್ವಿಂಟಲ್ ಹೆಸರುಕಾಳು ಮಾರಾಟ ಆಗಿದೆ.

ಏಳು ಖರೀದಿ ಕೇಂದ್ರ: ‘ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಲು ಬಾಗಲಕೋಟೆ, ಬಾದಾಮಿ (ಗುಳೇದಗುಡ್ಡ), ಮುಧೋಳ, ಹುನಗುಂದ ಹಾಗೂ ಸೂಳೇಭಾವಿ, ಜಮಖಂಡಿ ಹಾಗೂ ಬೀಳಗಿ ಎಪಿಎಂಸಿಯ ಟಿಎಪಿಎಂಸ್ ಮಳಿಗೆಗಳಲ್ಲಿ ಜಾಗ ನೀಡಲಾಗಿದೆ‘ ಎಂದು ಬಾಗಲಕೋಟೆ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಶಂಕರ ಪತ್ತಾರ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಖರೀದಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಮಾರ್ಕೆಟ್ ಸೆಸ್‌ಗೂ ವಿನಾಯ್ತಿ ನೀಡಿದ್ದೇವೆ. ನಮ್ಮ ಜವಾಬ್ದಾರಿ ನಾವು (ಎಪಿಎಂಸಿ) ಪೂರ್ಣಗೊಳಿಸಿದ್ದೇವೆ. ಇನ್ನೇನಿದ್ದರೂ ಮಹಾಮಂಡಳದವರ ಕೆಲಸ‘ ಎಂದು ಹೇಳುತ್ತಾರೆ.

‘ರೈತರು ಅ.9ರ ಒಳಗಾಗಿ  ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಕಾರ್ಯದ ಜೊತೆಯಲ್ಲಿಯೇ ಅಕ್ಟೋಬರ್ 24ರ ವರೆಗೆ  ಹೆಸರು ಕಾಳು ಖರೀದಿ ಮಾಡಲಾಗುತ್ತದೆ. ರೈತರು ಹೆಸರು ನೋಂದಾಯಿಸಲು ಆಧಾರ್ ಕಾರ್ಡ್ ಹಾಗೂ ಪ್ರಸಕ್ತ ಸಾಲಿನ ಪಹಣಿ ಪತ್ರ, ಗ್ರಾಮ ಲೆಕ್ಕಾಧಿಕಾರಿಗಳಿಂದ ಹೆಸರು ಕಾಳು ಬೆಳೆದ ಬಗ್ಗೆ ದೃಢೀಕರಣ ಪತ್ರ, ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಬುಕ್‌ ನಕಲು ಪ್ರತಿ ಸಲ್ಲಿಸಬೇಕಿದೆ.

ಅನುಮತಿಗೆ ಕಾಯುತ್ತಿದ್ದೇವೆ: ‘ಖರೀದಿ ಕೇಂದ್ರಗಳ ಮಾಹಿತಿಯನ್ನು ಬೆಂಗಳೂರಿನ ನಾಫೆಡ್ ಕಚೇರಿಗೆ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದ ಮ್ಯಾಪಿಂಗ್ ಆಗಿ, ಆನ್‌ಲೈನ್ ನೋಂದಣಿಗೆ ಪಾಸ್‌ವರ್ಡ್ ಬರಬೇಕಿದೆ. ನಮ್ಮಿಂದ ಎಲ್ಲ ತಾಂತ್ರಿಕ ಮಾಹಿತಿ ಈಗಾಗಲೇ ಕೊಟ್ಟಿದ್ದೇವೆ. ಅಲ್ಲಿಂದ ಸೂಚನೆ ಬರುತ್ತಿದ್ದಂತೆಯೇ ಇಲ್ಲಿ ಖರೀದಿ ಆರಂಭಿಸಲಾಗುವುದು‘ ಎಂದು ಸಹಕಾರಿ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಬಿ.ಜಿ.ಸಂದೀಪ್ ಹೇಳುತ್ತಾರೆ.

*
ನೋಡಲ್ ಆಧಿಕಾರಿಗೆ ಮಾತನಾಡಿ ತಕ್ಷಣ ಹೆಸರು ಖರೀದಿ ಹಾಗೂ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲು ಸೂಚನೆ ಕೊಡುವೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ.
-ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ

Post Comments (+)