ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ಶೇ 67.50ರಷ್ಟು ಮತದಾನ 

12 ಸ್ಥಳೀಯ ಸಂಸ್ಥೆ: ಸಣ್ಣಪುಟ್ಟ ಘಟನೆ ಹೊರತಾಗಿ ಬಹುತೇಕ ಶಾಂತಿಯುತ ಮತದಾನ
Last Updated 31 ಆಗಸ್ಟ್ 2018, 15:12 IST
ಅಕ್ಷರ ಗಾತ್ರ

ಬಾಗಲಕೋಟೆ: ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು ಶೇ 67.50ರಷ್ಟು ಮತದಾನ ಆಗಿದೆ.

ಬಾಗಲಕೋಟೆ ನಗರಸಭೆಯಲ್ಲಿ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ 53.64ರಷ್ಟು ಮತದಾರರು ಮಾತ್ರ ಮತಗಟ್ಟೆಯತ್ತ ಬಂದಿದ್ದಾರೆ. ಕೆರೂರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತದಾನ ಆಗಿದ್ದು, ಶೇ 76.84ರಷ್ಟು ಮಂದಿ ಮತ ಹಾಕಿದ್ದಾರೆ.

ಬಾಗಲಕೋಟೆ, ಮುಧೋಳ, ಇಳಕಲ್, ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ನಗರಸಭೆ ಹಾಗೂ ಬಾದಾಮಿ, ಗುಳೇದಗುಡ್ಡ, ಮಹಾಲಿಂಗಪುರ, ತೇರದಾಳ, ಹುನಗುಂದ ಪುರಸಭೆ ಹಾಗೂ ಬೀಳಗಿ, ಕೆರೂರ ಪಟ್ಟಣ ಪಂಚಾಯಿಯ್ತಿ ವ್ಯಾಪ್ತಿಯ ಒಟ್ಟು 309 ಸ್ಥಾನಗಳಿಗೆ ಮತದಾನ ನಡೆಯಿತು.

ಬೆಳಿಗ್ಗೆ 7ರಿಂದ ಮತದಾನ ಪ್ರಾರಂಭವಾಗಿದ್ದು, ಆರಂಭದಿಂದಲೇ ಜನರು ಮತಗಟ್ಟೆಯತ್ತ ಬರುವ ಉತ್ಸಾಹ ತೋರಲಿಲ್ಲ. ಬೆಳಿಗ್ಗೆ 9ರ ಹೊತ್ತಿಗೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ 10.33 ರಷ್ಟು ಇದ್ದು, 11 ಗಂಟೆ ವೇಳೆಗೆ ಶೇ 28.58 ಮತದಾನವಾಗಿದ್ದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ 37.72 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3ಕ್ಕೆ ಶೇ 51.34 ರಷ್ಟು ಮಂದಿ ಮತ ಹಾಕಿದ್ದರು.

ಬಾಗಲಕೋಟೆಯ ನಗರದ 34 ವಾರ್ಡ್‌ಗಳಿಗೆ ಮತದಾನ ನಡೆದಿದ್ದು ಒಟ್ಟು 92 ಬೂತ್ ಸ್ಥಾಪಿಸಲಾಗಿತ್ತು. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾರ್ಡ್‌ 32ರಲ್ಲಿ ಪ್ರಾರಂಭದಲ್ಲಿ ಕೆಲ ಮತದಾರರ ಬೆರಳಿಗೆ ಶಾಹಿ ಹಾಕದೆ ಹಾಗೆ ಕಳುಹಿಸಿದ್ದರು. ವಿಚಾರ ತಿಳಿದ ಬಾಗಲಕೋಟೆ ತಹಶೀಲ್ದಾರರು, ಮತ ಚಲಾಯಿಸಿದ ಎಲ್ಲರಿಗೂ ಕಡ್ಡಾಯವಾಗಿ ಶಾಹಿ ಹಾಕುವಂತೆ ಸಿಬ್ಬಂದಿಗೆ ಸೂಚಿಸಿದರು.

ವಾರ್ಡ್‌ 1, 3ರಲ್ಲಿ ಮತಗಟ್ಟೆ ಕೇಂದ್ರದ ಮುಂದೆಯೇ ಅಭ್ಯರ್ಥಿಗಳು, ಬೆಂಬಲಿಗರು ಜಮಾಯಿಸಿದ್ದರು, ಪೊಲೀಸರು ಮಧ್ಯೆ ಪ್ರವೇಶಿಸಿ ಎಲ್ಲರನ್ನು ಹೊರಹಾಕಿದರು. ಅಭ್ಯರ್ಥಿಗಳು ಮತದಾರರಿಗೆ ಕೈ ಮುಗಿಯುವ ದೃಶ್ಯ ಸಾಮಾನ್ಯವಾಗಿತ್ತು.

ಶುಕ್ರವಾರ ಲಕ್ಷ್ಮೀ ಪೂಜೆ:ಶ್ರಾವಣ ಶುಕ್ರವಾರ ಲಕ್ಷ್ಮೀಪೂಜೆಯ ಕಾರಣ ಮುಂಜಾನೆ ಮಹಿಳೆಯರು ಮತಗಟ್ಟೆಗಳತ್ತ ಸುಳಿದಿರಲಿಲ್ಲ. ಇದರಿಂದ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗಳತ್ತ ಬಂದರು.

ಕೃಪೆ ತೋರಿದ ವರುಣ:ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಚುನಾವಣೆ ದಿನ ಮಳೆಯಾದರೆ ಮತದಾರರು ಬರುವುದು ಕಷ್ಟ ಎಂಬ ಭಯ ಅಭ್ಯರ್ಥಿಗಳಿತ್ತು.ಆದರೆ ಮತದಾನದ ದಿನ ಮಳೆ ಬಿಡುವು ನೀಡಿತು.

ಮತದಾನದಿಂದ ವಂಚಿತ:ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಊರುಗಳಲ್ಲಿ ಮಾತ್ರ ಜಿಲ್ಲಾಡಳಿತ ರಜೆ ಘೋಷಿಸಿತ್ತು. ನಗರ ಹಾಗೂ ಪಟ್ಟಣಗಳಿಂದ ಹಳ್ಳಿಗಳಿಗೆ ತೆರಳಿ ಕೆಲಸ ಮಾಡುವ ಸರ್ಕಾರಿ ನೌಕರರು, ಫ್ಯಾಕ್ಟರಿ ನೌಕರರು ಬೆಳಿಗ್ಗೆ ಬೂತ್‌ಗೆ ಹೋಗಿ ಮತ ಚಲಾಯಿಸಿ ತಮ್ಮ ಕೆಲಸಗಳಿಗೆ ತೆರಳಿದರು. ಆದರೆ ಬಹಳಷ್ಟು ಮಂದಿ ಕೆಲಸಕ್ಕೆ ಹೋಗುವ ಭರದಲ್ಲಿ ಮತ ಹಾಕಲು ಮನಸ್ಸು ಮಾಡಲಿಲ್ಲ.

ನಿಯಮ ಗಾಳಿಗೆ:ಮತದಾನ ಕೇಂದ್ರದಿಂದ 100 ಮೀಟರ್‌ ದೂರದಲ್ಲಿಯೇ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ನಿಲ್ಲಬೇಕು ಎಂಬ ನಿಯಮವಿದ್ದರೂ ಅಭ್ಯರ್ಥಿಗಳು ಅದನ್ನು ಗಾಳಿಗೆ ತೂರಿ ಒಳಗೆ ಓಡಾಡುತ್ತಿದ್ದ ದೃಶ್ಯ ಕಂಡುಬಂದಿತು. ನಿಷೇಧಿತ ವಲಯದಲ್ಲಿ ಓಡಾಟ ಮಾಡದಂತೆ ಪೊಲೀಸರು ಮನವಿ ಮಾಡಿದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ.

ತಡವಾಗಿ ಆರಂಭ:ನವನಗರದ ಸೆಕ್ಟರ್ ನಂ 8ರ ವಾರ್ಡ್ ಸಂಖ್ಯೆ 25ರಲ್ಲಿ ಮುಂಜಾನೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತದಾನ ಪ್ರಕ್ರಿಯೆ ಒಂದು ಗಂಟೆ ತಡವಾಗಿ ಆರಂಭವಾಯಿತು. ಸುದ್ದಿ ತಿಳಿದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಮತಗಟ್ಟೆಗೆ ತೆರಳಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT