ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ–ಹುಬ್ಬಳ್ಳಿ ಬಸ್‌ ಸಂಚಾರ ಆರಂಭ

ಕೊಣ್ಣೂರು–ಗೋವಿನಕೊಪ್ಪ ನಡುವಿನ ಸೇತುವೆ ತಾತ್ಕಾಲಿಕ ದುರಸ್ತಿ
Last Updated 17 ಆಗಸ್ಟ್ 2019, 6:07 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಹಾಗೂ ಮಲ‍ಪ್ರಭಾ ನದಿಗಳಲ್ಲಿ ಪ್ರವಾಹದ ಮಟ್ಟ ಇಳಿಯುತ್ತಿದ್ದಂತೆಯೇ ಜಿಲ್ಲೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಮುಕ್ತವಾಗುತ್ತಿವೆ.

ಸಂತಸದ ಸಂಗತಿ ಎಂದರೆ ಮಲಪ್ರಭಾ ನೆರೆಯಿಂದ ನಜ್ಜುಗುಜ್ಜಾಗಿದ್ದ ಗೋವಿನಕೊಪ್ಪ–ಕೊಣ್ಣೂರ ನಡುವಿನ ಮಲಪ್ರಭಾ ಸೇತುವೆ ತಾತ್ಕಾಲಿಕವಾಗಿ ದುರಸ್ತಿಗೊಂಡಿದೆ. ಶುಕ್ರವಾರ ಮಧ್ಯಾಹ್ನದಿಂದ ಬಾಗಲಕೋಟೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ವಾಹನ ಸಂಚಾರ ಆರಂಭವಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳೂ ಓಡಾಟ ಆರಂಭಿಸಿವೆ.

ಈ ಸೇತುವೆ ಹುಬ್ಬಳ್ಳಿ–ಧಾರವಾಡ ಅವಳಿ ನಗರಕ್ಕೆ ಬಾಗಲಕೋಟೆ ಮಾತ್ರವಲ್ಲ ವಿಜಯಪುರ, ಯಾದಗಿರಿ, ಕಲಬುರ್ಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾ‍ಪುರ ಭಾಗಕ್ಕೆ ಸಂಪರ್ಕ ಕೊಂಡಿಯಾಗಿದೆ. ಪ್ರವಾಹದ ನೀರು ಮೇಲೆ ಹರಿದ ಕಾರಣ ಕಳೆದೊಂದು ವಾರದಿಂದ ಈ ಸೇತುವೆ ಮೇಲೆ ಸಂಚಾರ ಬಂದ್ ಆಗಿತ್ತು. ವಾಹನಗಳು ಕೆರೂರು, ಕುಳಗೇರಿ ಕ್ರಾಸ್, ಬಾದಾಮಿ, ರೋಣ, ನರಗುಂದ, ನವಲಗುಂದ ಮಾರ್ಗವಾಗಿ ಹುಬ್ಬಳ್ಳಿ ತಲುಪುತ್ತಿದ್ದವು.

ಭಾರಿ ವಾಹನಕ್ಕೆ ಅವಕಾಶವಿಲ್ಲ: ಲೋಕಾಪುರ–ಮುಧೋಳ ನಡುವೆ ಸಂಪರ್ಕ ಕಲ್ಪಿಸುವ ಚಿಚಖಂಡಿ ಬಳಿಯ ಘಟಪ್ರಭಾ ಸೇತುವೆಯೂ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಇನ್ನೂ ಭಾರಿ ವಾಹನಗಳ ಓಡಾಟಕ್ಕೆ ಅಲ್ಲಿ ಅವಕಾಶ ನೀಡಿಲ್ಲ. ಸೇತುವೆ ಬಹಳಷ್ಟು ದಿನ ನೀರಿನಲ್ಲಿಯೇ ಮುಳುಗಿದ್ದ ಕಾರಣ ಇನ್ನೂ ಹಸಿಯಾಗಿದೆ. ಹೀಗಾಗಿ ಕಾರು ಸೇರಿದಂತೆ ಸಣ್ಣ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್‌ಗಳ ಓಡಾಟ ಸೋಮವಾರದಿಂದ ಆರಂಭವಾಗಬಹುದು ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ‍ಪಿ.ವಿ.ಮೇತ್ರಿ ಹೇಳುತ್ತಾರೆ.

ಚಿಕ್ಕಪಡಸಲಗಿ ಬಳಿ ಸೇತುವೆ ಮೇಲೆ ಕೃಷ್ಣಾ ನದಿ ಪ್ರವಾಹ ಹರಿಯುತ್ತಿರುವ ಕಾರಣ ಧಾರವಾಡ–ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ. ಗಣಿ ಸೇತುವೆಯ ಪರಿಸ್ಥಿತಿಯೂ ಹೀಗೆ ಇದ್ದು, ಬೀಳಗಿಯಿಂದ ಜಮಖಂಡಿಗೆ ಹೋಗುವ ವಾಹನಗಳು ಗಣಿ ಕ್ರಾಸ್, ಅಮಲಝರಿ ಮೂಲಕ ಹೋಗುತ್ತಿವೆ.

ಕಲಾದಗಿ–ಕಾತರಕಿ ನಡುವಿನ ನಿಂಗಾಪುರ ಸೇತುವೆ ಮೇಲೆ ಘಟಪ್ರಭೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಇನ್ನೂ 15 ದಿನ ಸಾಧ್ಯವಿಲ್ಲ ಎನ್ನಲಾಗಿದೆ. ಹಾರೋಗೇರಿ–ಅಥಣಿ ನಡುವಿನ ಕರೂರು ಬ್ರಿಜ್ ಸಂಚಾರಕ್ಕೆ ಮುಕ್ತವಾಗಿದೆ.

ಮಿರಜ್‌ಗೆಬಳಸು ಹಾದಿ..
ಮಾಶಾಳ ಬಳಿ ಕೃಷ್ಣಾ ನದಿ ಹಿನ್ನೀರಿನಲ್ಲಿ ರಸ್ತೆ ಜಲಾವೃತವಾಗಿರುವ ಕಾರಣ ಬಾಗಲಕೋಟೆ–ಮಿರಜ್‌ ನಡುವೆ ನೇರ ಹಾದಿ ಇಲ್ಲ. ಬದಲಿಗೆ ವಾಹನಗಳು ಮಂಗಸೂಳಿ ಮಾರ್ಗವಾಗಿ 30 ಕಿ.ಮೀ ಸುತ್ತಿಕೊಂಡು ಮಿರಜ್‌ ತಲುಪುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT