ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಮಯ ನಾಡು ಬಾಗಲಕೋಟೆ

1997 ಆಗಸ್ಟ್‌ 15 ರಂದು ‘ಕೋಟೆ’ ಜಿಲ್ಲೆಯ ಉದಯ
Last Updated 7 ಆಗಸ್ಟ್ 2022, 7:44 IST
ಅಕ್ಷರ ಗಾತ್ರ

ಬಾಗಲಕೋಟೆ: ಅಪಾರ ನೈಸರ್ಗಿಕ ಸಂಪತ್ತು, ಪ್ರವಾಸಿ ತಾಣಗಳು, ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು, ಕೃಷ್ಣಾ ಸೇರಿದಂತೆ ಮೂರು ನದಿಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸೈಕ್ಲಿಂಗ್‌ ಪಟುಗಳು, ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಖಾದಿ ಕೇಂದ್ರಗಳನ್ನು ಹೊಂದಿರುವ ವೈವಿಧ್ಯಮಯ ಜಿಲ್ಲೆ ಬಾಗಲಕೋಟೆ.

ಮಹಾಲಿಂಗಪುರದ ಬೆಲ್ಲ ಇಳಕಲ್‌ ಸೀರೆ, ಗುಳೇದಗುಡ್ಡದ ಖಣ, ಮುಧೋಳ ನಾಯಿ, ಇಳಕಲ್‌ನ ಪಿಂಕ್‌ ಗ್ರಾನೈಟ್‌, ಸಿಮೆಂಟ್‌ ಉತ್ಪಾದನೆಯಿಂದಾಗಿ ಜಿಲ್ಲೆಯ ಪ್ರಸಿದ್ಧಿ ನಾಡಿನಾದ್ಯಂತ ಪಸರಿಸಿದೆ. ಅಮೀನಗಡದ ಕರದಂಟಿನ ಸಿಹಿಯೂ ಇದೆ. ಬಾಗಲಕೋಟೆಯ ಬಣ್ಣದ ಹಬ್ಬವೂ ಪ್ರಸಿದ್ಧಿ ಪಡೆದಿದೆ. ಆಲಮಟ್ಟಿ ಹಿನ್ನೀರಿನಲ್ಲಿ ವಿದೇಶಿ ಹಕ್ಕಿಗಳ ಕಲರವವನ್ನೂ ಕೇಳಬಹುದು.

1997 ಆಗಸ್ಟ್‌ 15 ರಂದು ವಿಜಯಪುರದಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಯಿತು. ಹುಂಡೇಕಾರ ಸಮಿತಿ ಹಾಗೂ ಗದ್ದಿಗೌಡರ ಸಮಿತಿಗಳು ಬಾಗಲಕೋಟೆ ಜಿಲ್ಲೆಯನ್ನಾಗಿಸಲು ಶಿಫಾರಸು ಮಾಡಿದ್ದವು. ಬಾಗಲಕೋಟೆ ಜಿಲ್ಲಾ ಹೋರಾಟ ಸಮಿತಿಯೂ ಪ್ರತ್ಯೇಕ ಜಿಲ್ಲೆಗೆ ಹೋರಾಟ ಮಾಡಿತು. ಜೆ.ಎಚ್‌. ಪಾಟೀಲ ಸರ್ಕಾರ ಕೊನೆಗೂ ಜಿಲ್ಲೆಗೆ ಮುದ್ರೆ ಹೊತ್ತಿತು. ಅಂತರರಾಷ್ಟ್ರೀಯ ವಾಸ್ತು ಶಿಲ್ಪಿ ಚಾರ್ಲ್ಸ್‌ ಕೊರಿಯಾ ವಿನ್ಯಾಸ ಮಾಡಿದ್ದು, ಚಂಡೀಗಢ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಹರಿದಿವೆ. ಹಾಗೆಯೇ ಆಲಮಟ್ಟಿ, ನಾರಾಯಣಪು ಜಲಾಶಯಗಳ ಹಿನ್ನೀರಿನಿಂದ ಬಾಗಲಕೋಟೆ ಜಿಲ್ಲೆಯ ಹಲವಾರು ಗ್ರಾಮಗಳು ಸೇರಿದಂತೆ 177 ಹಳ್ಳಿಗಳು ಮುಳುಗಡೆಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಬಾಗಲಕೋಟೆಯನ್ನು ಮುಳುಗಡೆ ನಗರಿ ಎಂದು ಕರೆಯಲಾಗುತ್ತದೆ. ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಮೂರು ನದಿಗಳು ಹರಿದಿದ್ದರೂ ಜಿಲ್ಲೆಯು ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಪಡೆದಿಲ್ಲ. ಜಮಖಂಡಿ, ಬೀಳಗಿ ರಬಕವಿ–ಬನಹಟ್ಟಿ, ಜಮಖಂಡಿ ತಾಲ್ಲೂಕುಗಳು ನೀರಾವರಿ ಹೊಂದಿದ್ದರೆ, ಉಳಿದ ಐದು ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ದೊರೆಯಬೇಕಿದೆ. ಕೊಳವೆಬಾವಿಗಳನ್ನೇ ಈಗಲೂ ಹೆಚ್ಚಿನ ಸಂಖ್ಯೆಯ ರೈತರು ನೆಚ್ಚಿಕೊಂಡಿದ್ದಾರೆ.

ವಿಶ್ವ ಪ್ರಸಿದ್ಧ ಪಟ್ಟದಕಲ್ಲು, ಐಹೊಳೆ, ಬಾದಾಮಿ, ಮಹಾಕೂಟ ಕೂಡಲಸಂಗಮದಂತಹ ಪ್ರವಾಸಿ ತಾಣಗಳನ್ನು ಹೊಂದಿದ್ದರೂ, ಅದಕ್ಕೆ ತಕ್ಕಂತಹ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಪ್ರವಾಸಿಗರು ಈಗಲೂ ಉಳಿದುಕೊಳ್ಳಲು ಪರದಾಡಬೇಕಾದ ಸ್ಥಿತಿ ಇದೆ.

ದಾಳಿಂಬೆ, ಚಿಕ್ಕು, ಪೇರಲ, ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಅದರ ಪರಿಣಾಮವೇ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭವಾಗಿದೆ.ತೋಟಗಾರಿಕೆ ಬೆಳೆಗಳಿಗೆ ಇನ್ನೂ ಪೂರ್ಣ ಪ್ರಮಾದಲ್ಲಿಸರಿಯಾದ ಮಾರುಕಟ್ಟೆಯಿಲ್ಲ. ಕಬ್ಬು, ಅರಿಸಿನ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳತ್ತ ರೈತರು ಹೊರಳಿರುವುದರಿಂದ ಆಹಾರಧಾನ್ಯ ಬೆಳೆಗಳ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ.

ಸರ್ಕಾರದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯ ದೊರಕಿಲ್ಲ. ಒಂದೇ ಒಂದು ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಸರ್ಕಾರಿ ಕಾಲೇಜು ಜಿಲ್ಲೆಯಲ್ಲಿಲ್ಲ.ಸರ್ಕಾರವು ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಐದು ವರ್ಷಗಳು ಕಳೆದರೂ ಆರಂಭವಾಗಿಲ್ಲ. ಬಾಗಲಕೋಟೆಯಲ್ಲಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮುಚ್ಚಿ ಹೋಗಿದೆ.ಬಸವೇಶ್ವರ ವಿದ್ಯಾವರ್ಧಕ ಸಂಘ ಸೇರಿದಂತೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಲವಾರು ಶಾಲಾ–ಕಾಲೇಜುಗಳನ್ನು
ನಡೆಸುತ್ತಿದೆ.

ಸೈಕ್ಲಿಂಗ್‌, ಕುಸ್ತಿ, ಮಲ್ಲಕಂಬ ಸ್ಪರ್ಧೆಯಲ್ಲಿ ಇಲ್ಲಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಹೆಸರು ತಂದಿದ್ದಾರೆ. ತುಳಸಿಗೇರಿಯ ವೆಂಕಪ್ಪ ಬಿಚಗತ್ತಿ ಎನ್ನುವವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶ ಪ್ರತಿನಿಧಿಸಿದ್ದಾರೆ. ಉಳಿದ ಕ್ರೀಡೆಗಳಲ್ಲಿ ಸಾಧನೆ
ಕಡಿಮೆಯೇ.

ಜಿಲ್ಲೆ ರಚನೆಯಾದ ನಂತರ ತಾಲ್ಲೂಕುಗಳ ಸಂಖ್ಯೆ 6 ರಿಂದ 9ಕ್ಕೆ ಏರಿದೆ. ಸಕ್ಕರೆ, ಸಿಮೆಂಟ್‌ ಕಾರ್ಖಾನೆಗಳು ತಲೆ ಎತ್ತಿವೆ.ಜಿಲ್ಲೆಯ ಜನರು ಧೈರ್ಯಶಾಲಿಗಳಾಗಿದ್ದಾರೆ. ಇಲ್ಲಿನ ಯುವ ಪಡೆಯು ಸೇನೆ ಸೇರಲು ಸದಾಸಿದ್ಧವಾಗಿದೆ. ಸಾವಿರಾರು ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಜಿಲ್ಲೆಯ ಸೈನಿಕರೂ ಭಾಗವಹಿಸಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ಇಣುಕು ನೋಟ...

ಬಾಗಲಕೋಟೆ ಜಿಲ್ಲೆಯಾಗಿ ಆಗಸ್ಟ್‌ 15ಕ್ಕೆ 25 ವರ್ಷಗಳು ಪೂರ್ಣಗೊಳ್ಳಲಿವೆ. ಇದು ಬೆಳ್ಳಿ ಮಹೋತ್ಸವದ ಸಂಭ್ರಮದ ಸಮಯ. ಹೊಸ ಜಿಲ್ಲೆ ರಚನೆಯಾದಾಗ ಹೇಗಿತ್ತು? ಈಗ ಹೇಗಿದೆ. ಮುಂದಿನ ದಾರಿ ಹೇಗಿರಬೇಕಿದೆ ಎಂಬ ನೋಟವೇ ಇದು.

ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಕೃಷಿ, ನೀರಾವರಿ, ಕೈಗಾರಿಕೆ, ಪ್ರವಾಸೋದ್ಯಮ, ರಾಜಕೀಯ ಕ್ಷೇತ್ರಗಳ ಒಂದು ಅವಲೋಕನದ ಸರಣಿಯೇ ‘ಬಾಗಲಕೋಟೆ ಬೆಳ್ಳಿ ಸಂಭ್ರಮ ಅಂದು–ಇಂದು–ಮುಂದು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT