ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೀದಿಗೆ ಬಂದ ಕಾಂಗ್ರೆಸ್, ಬಿಜೆಪಿ ಒಳಜಗಳ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಿಡಿದೆದ್ದ ಸ್ಥಳೀಯ ನಾಯಕರು
Published : 10 ಸೆಪ್ಟೆಂಬರ್ 2024, 4:48 IST
Last Updated : 10 ಸೆಪ್ಟೆಂಬರ್ 2024, 4:48 IST
ಫಾಲೋ ಮಾಡಿ
Comments

ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚೆಗೆ ನಗರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿಯೊಳಗಿನ ಒಳಜಗಳ ಬಯಲಿಗೆ ಬಂದಿದೆ. ಅದರ ಪರಿಣಾಮ ಹಲವು ಕಡೆಗಳಲ್ಲಿ ಬಹುಮತವಿದ್ದರೂ ಎರಡೂ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ.

ಬಹುಮತ ಇದ್ದರೂ ಪಕ್ಷದ ಸದಸ್ಯರ ಪಕ್ಷಾಂತರದಿಂದಾಗಿ ಕೆಲವು ಕಡೆಗೆ ಬಿಜೆಪಿ ಮುಖಭಂಗ ಅನುಭವಿಸಿದ್ದರೆ, ಮತ್ತೆ ಕೆಲವು ಕಡೆಗೆ ಕಾಂಗ್ರೆಸ್ ಸಹ ಹಿನ್ನಡೆ ಅನುಭವಿಸಿದೆ.

ಎರಡೂ ಪಕ್ಷಗಳು ವಿಪ್‌ ನೀಡಿದ್ದರೂ ಸದಸ್ಯರು ಪಕ್ಷಾಂತರ ಮಾಡಿದ್ದಾರೆ. ಕೊನೆ ಅವಧಿಯಾಗಿರುವುದು ಒಂದಾದರೆ, ಹೇಗಾದರೂ ಸರಿ ಅಧಿಕಾರದಲ್ಲಿರಬೇಕು ಎಂಬ ಸದಸ್ಯರ ಧೋರಣೆ, ಎದುರಾಳಿ ಪಕ್ಷಗಳ ಆಮಿಷಕ್ಕೆ ಒಳಗಾಗಿದ್ದಾರೆ. ಆದರೆ, ಅಭಿವೃದ್ಧಿ ಎನ್ನುವ ಮಂತ್ರ ಜಪಿಸುವುದನ್ನು ನಿಲ್ಲಿಸಿಲ್ಲ. ನಾಯಕರ ಹಿಡಿತ ಸಡಿಲವಾಗಿದೆ.

ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಜಿಲ್ಲೆಯಲ್ಲಿ ನಡೆದ ಮೊದಲ ಅವಧಿಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ 12 ಸಂಸ್ಥೆಗಳ ಪೈಕಿ 7 ಕಡೆ ಅಧಿಕಾರ ಹಿಡಿದಿತ್ತು. ಎರಡನೇ ಅವಧಿಯಲ್ಲಿ 11 ಕಡೆಗಳಲ್ಲಿ ಚುನಾವಣೆ ನಡೆದಿದ್ದು, ನಾಲ್ಕು ಕಡೆ ಬಿಜೆಪಿ ಗೆದ್ದಿದ್ದರೆ, ಉಳಿದ ಕಡೆಗಳಲ್ಲಿ ಕಾಂಗ್ರೆಸ್‌ಗೆ ಜಯ ಸಿಕ್ಕಿದೆ.

ಇಳಕಲ್‌ ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿತ್ತು. ಆದರೆ, ಕೆಲವರು ಆಪರೇಷನ್‌ ಹಸ್ತ ನಡೆಸಿದ್ದರಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಅದೇ ರೀತಿ ಗುಳೇದಗುಡ್ಡದ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದಿತ್ತು. ಕಾಂಗ್ರೆಸಿನ ಎರಡು ಗುಂಪುಗಳ ನಡುವಿನ ತಿಕ್ಕಾಟದ ಪರಿಣಾಮ ಬಹುಮತವಿಲ್ಲದ ಜೆಡಿಎಸ್‌ ಅಧಿಕಾರ ಹಿಡಿದಿದೆ.

ರಾಜಕೀಯ ನಾಯಕರ ನಡುವೆ ವೈಯಕ್ತಿಕ ನಿಂದನೆಗಳು ಜೋರಾಗಿವೆ. ಪಕ್ಷದ ನಾಯಕರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಸಿಡಿದೆದಿದ್ದಾರೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿನ ನಾಯಕರ ವರ್ತನೆಗೆ ಸ್ಥಳೀಯ ನಾಯಕರು ಮುಯ್ಯಿ ತೀರಿಸಿಕೊಂಡಿದ್ದಾರೆ. ಇದರ ಪರಿಣಾಮ ಮುಂದಿನ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿಯೂ ಬೀಳಲಿದೆ.

ಮುಧೋಳದಲ್ಲಿ ಆಪರೇಷನ್‌ ಹಸ್ತದ ಪರಿಣಾಮ ಕಾಂಗ್ರೆಸ್‌ ಅಧಿಕಾರ ಪಡೆದುಕೊಂಡಿತು. ಮಹಾಲಿಂಗಪುರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ವಿರುದ್ಧ ಎರಡೂ ಪಕ್ಷಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಉಚ್ಚಾಟನೆ ಮಾಡುವ ಮೂಲಕ ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ಎರಡೂ ಪಕ್ಷದ ನಾಯಕರು ಮುಂದಾಗಿದ್ದಾರೆ. ಆದರೆ, ಒಳಗೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದು, ಯಾವಾಗ, ಯಾರಿಗೆ ಹಾನಿ ಮಾಡಲಿದೆ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT