ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಸದಸ್ಯರ ತೀವ್ರ ವಿಚಾರಣೆ

ಚುನಾವಣೆಯಲ್ಲಿ ನಡೆದ ಗಲಾಟೆ ಪ್ರಕರಣ; ಅತಿಥಿಗೃಹದಲ್ಲಿ ಸಿಐಡಿ ತಂಡ
Last Updated 4 ಜುಲೈ 2021, 13:07 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಚುನಾವಣೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಎಸ್.ಸತ್ಯವತಿ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ ಭಾನುವಾರ ಪುರಸಭೆ ಸದಸ್ಯರ ತೀವ್ರ ವಿಚಾರಣೆ ನಡೆಸಿತು.

ಕಳೆದ ಎರಡು ದಿನದಿಂದ ಪುರಸಭೆ ಸಭಾಭವನದಲ್ಲಿ ವಿಚಾರಣೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು ಭಾನುವಾರ ರಜೆ ಇರುವುದರಿಂದ ರಬಕವಿ ರಸ್ತೆಯ ಅತಿಥಿ ಗೃಹದ ಆವರಣದಲ್ಲಿ ವಿಚಾರಣೆ ಕೈಗೊಂಡರು.

ಶನಿವಾರ ಇಡೀ ದಿನ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಭಾನುವಾರವೂ ಸಹ ವಿಚಾರಣೆ ಮುಂದುವರೆಸಿದರು. ನಂತರ ಕಾಂಗ್ರೆಸ್ ಸದಸ್ಯರನ್ನು ಕರೆಸಿಕೊಂಡು ಘಟನೆಯ ನೈಜತೆ ಹೇಳುವಂತೆ ಸೂಚಿಸಿದರು.

ಚುನಾವಣೆ ವೇಳೆ ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಸದಸ್ಯೆಯರಾದ ಗೋದಾವರಿ ಬಾಟ, ಸವಿತಾ ಹುರಕಡ್ಲಿ, ಚಾಂದನಿ ನಾಯಕ್ ಹಾಗೂ ಅವರ ಪತಿನ್ನು ಕರೆಸಿಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಮುಂದಾದರು.

ಮರಾಠಿಯಲ್ಲಿ ಹೇಳಿಕೆ:

ಕನ್ನಡ ಭಾಷೆ ಸರಿಯಾಗಿ ಉಚ್ಛಾರಿಸಲು ಬರಲ್ಲವೆಂದು ಮರಾಠಿ ಭಾಷೆಯಲ್ಲಿಯೇ ಹೇಳಿಕೆ ನೀಡಲು ಮುಂದಾದ ಗೋದಾವರಿ ಬಾಟ ಅವರಿಗೆ ಸಮ್ಮತಿ ಸೂಚಿಸಿದ ಅಧಿಕಾರಿಗಳು ಆಕೆಯ ಪತಿಯಿಂದ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳಿಕೆ ಪಡೆದರು ಎನ್ನಲಾಗಿದೆ.

93 ಜನರ ವಿಚಾರಣೆ:

ಒಟ್ಟು ನಾಲ್ಕು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು 93 ಜನರ ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಪುರಸಭೆಯ ಬಿಜೆಪಿ ಸದಸ್ಯರನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಸೋಮವಾರ ಉಳಿದ ಮೂವರು ಸದಸ್ಯರ ವಿಚಾರಣೆ ನಡೆಸಲಿದ್ದಾರೆ.

ಅಂದು ಚುನಾವಣೆ ವೇಳೆ ನಡೆದ ಗಲಾಟೆ ನಂತರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಸದಸ್ಯೆ ಚಾಂದನಿ ನಾಯಕ್ ಅವರ ಜುಟ್ಟು ಹಿಡಿದು ಎಳೆದಿರುವ ಶಾಸಕ ಸಿದ್ದು ಸವದಿ ಅವರ ಮೇಲಿನ ಆರೋಪದ ಕುರಿತು ವಿಚಾರಣೆ ಕೈಗೆತ್ತಿಕೊಂಡ ಅಧಿಕಾರಿಗಳಿಗೆ ಸ್ಪಷ್ಟವಾದ ಮಾಹಿತಿ ದೊರಕಲಿಲ್ಲ ಎಂದು ತಿಳಿದುಬಂದಿದೆ.

ಬಾಟ ಅಪಹರಣ ಆಗಿಲ್ಲ:

ಸದಸ್ಯೆ ಗೋದಾವರಿ ಬಾಟ ಅವರ ನೀಡಿದ ಅಪಹರಣದ ದೂರಿನ ಹಿನ್ನೆಲೆ ಗೋದಾವರಿ, ಅವರ ಪತಿ ವಿರೂಪಾಕ್ಷಿ ಹಾಗೂ ಮೈದುನನ ವಿಚಾರಣೆ ಅಧಿಕಾರಿಗಳು ನಡೆಸಿದರು.

'ನಿಮ್ಮ ಸಹೋದರ ಇನ್ನೊಂದು ಪಕ್ಷದ ಜತೆ ಹೊಂದಾಣಿಕೆ ಆಗಿ ಹಣ ತೆಗೆದುಕೊಂಡು ನಿಮ್ಮ ಪತ್ನಿಯನ್ನು ಅಪಹರಣ ಮಾಡಿದ್ದಾರೆ' ಎಂದು ಅಧಿಕಾರಿಗಳು ವಿರುಪಾಕ್ಷಿ ಅವರನ್ನು ಕೇಳಿದಾಗ 'ತಮ್ಮ ಪತ್ನಿ ಅಪಹರಣವಾಗಿಲ್ಲ' ಎಂದು ಉತ್ತರಿಸಿದರು. ಅಪಹರಣದ ಪ್ರಕರಣದಲ್ಲಿ ಶಾಸಕ ಸಿದ್ದು ಸವದಿ ಇಲ್ಲವೆಂದು ಗೋದಾವರಿ ಬಾಟ ಹೇಳಿಕೆ ನೀಡಿದರು ಎಂದು ಮೂಲಗಳು ಖಚಿತಪಡಿಸಿವೆ.

ಎರಡೂ ಪಕ್ಷದಿಂದ ಎಳೆದಾಟ:

'ಮೊದಲ ದೂರು ನೀಡಿದವರಿಂದ ಸ್ಪಷ್ಟವಾದ ಮಾಹಿತಿ ಹೊರಬಂದಿದ್ದರೆ ಇಷ್ಟು ತನಿಖೆ ಅಗತ್ಯವಿರಲಿಲ್ಲ. ಗಲಾಟೆ ಪ್ರಕರಣದ ಎಲ್ಲ ವಿಡಿಯೊ ನೋಡಿದ್ದೇನೆ. ಮೂವರು ಮಹಿಳಾ ಸದಸ್ಯೆಯರನ್ನು ಎರಡೂ ಪಕ್ಷದವರು ಎಳೆದಾಡಿದ್ದಾರೆ. ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಉದ್ದೇಶವಿರುವ ಅಂಶ ಕಾಣುತ್ತದೆ. ಇದನ್ನು ಮೀರಿದ್ದರೆ ಆರೋಪಿಗಳನ್ನು ಬಂಧಿಸಲಾಗುವುದು. ಗೋದಾವರಿ ಬಾಟ ನೀಡಿರುವ ದೂರಿನ ಪ್ರಕಾರ ಹೇಳಿಕೆ ನೀಡುತ್ತಿಲ್ಲ' ಎಂದು ಡಿವೈಎಸ್ಪಿ ಸತ್ಯವತಿ ಎಸ್. ವಿಚಾರಣೆ ವೇಳೆ ಹೇಳಿದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT